ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೪
ಜನಪದ ಕಥೆಗಳು

ಆ ಮಾತು ಕೇಳಿ ಶ್ರೀಮಂತನಿಗೆ ಅನಿಸಿತು - ಈತನು ತಮ್ಮನಿಗಿಂತ ಮಿಗಿಲಾದ ಅಧಿಕಪ್ರಸಂಗಿ - “ತಮ್ಮಾ ನೀನೂ ಒಂದಿಷ್ಟು ಕುಳಿತುಕೋ' ಎಂದು ನುಡಿದು, “ಇವರಿಬ್ಬರನ್ನು ಬಿಡಬೇಡ” ಎಂದು ಆಳುಮಗನಿಗೆ ಸೂಚಿಸಿದನು. ಬೇರೊಬ್ಬ ಆಳನ್ನು ಕರೆದು - “ಅವರ ತಂದೆಯನ್ನು ಮುಂದೆ ಹಾಕಿಕೊಂಡು ಬಾ. ಅವನಾದರೂ ಈ ಅವಿವೇಕಿಗಳನ್ನು ತಿದ್ದಲಿ” ಎಂದು ಹೇಳಿದನು.

ಮರುಕ್ಷಣದಲ್ಲಿಯೇ ಅವರ ತಂದೆ ಬರಲು, ಶ್ರೀಮಂತನು ಅವನನ್ನು ಹತ್ತಿರಕ್ಕೆ ಕರೆದು ಕುಳ್ಳಿರಿಸಿಕೊಂಡು, ಅವನ ಮಕ್ಕಳಿಬ್ಬರೊಡನೆ ನಡೆದ ಸಂಗತಿಂದನ್ನು ಕ್ರಮವಾಗಿ ವಿವರಿಸಿದನು. ತಂದೆಗೂ ಎಲ್ಲಿಲ್ಲದ ಸಿಟ್ಟುಬ೦ತು, ಅವರ ವರ್ತನೆ ಕೇಳಿ. ಶ್ರೀಮಂತನ ಎದುರಿನಲ್ಲಿಯೇ ಮಕ್ಕಳಿಗೆ ಛೀ ಎನ್ನಲು ತೊಡಗಿದನು - “ಕತ್ತೆ ಆಗಿರುವಿರಿ ತಿಳಿಯುವದಿಲ್ಲವೇ ನಿಮಗೆ ? ಧನಿಯರು ಸತ್ತರೆ ಹೆಣವನ್ನು ಹೇಗೆ ಹೊರತರುವುದೆಂಬ ವಿಚಾರ ನಿಮಗೇಕೆ ಬೇಕಿತ್ತು ? ಹೆಣವನ್ನು ಕಡಿ ಕಡಿದು ಹೊರತರುವ ಯುಕ್ತಿ ಹೇಳಿಕೊಡುವದಕ್ಕೆ ನೀನಾವ ಪಂಡಿತನು ? ಮನೆಯಲ್ಲಿಯೇ ಶವಕ್ಕೆ ಬೆಂಕಿ ಹಚ್ಚಲೊಲ್ಲರೇಕೆ, ನಿಮಗೇಕೆ ಆ ಉಸಾಬರಿ ?”

ತಂದೆಯೂ ಅದೇ ವರ್ಗಕ್ಕೆ ಸೇರಿದ ಪ್ರಾಣಿಯೆಂದು ಬಗೆದು, ಅವರೆಲ್ಲರಿಗೂ ಹೋಗಿಬನ್ನಿರೆಂದು ಶ್ರೀಮಂತನು ಕೈಮುಗಿದು ಕಳಿಸಿದನು.

 •