ವಿಷಯಕ್ಕೆ ಹೋಗು

ಪುಟ:ಜಾಗರ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮರ್ಶಕ ಮೂರನೆಯ ಮನುಷ್ಯನೇ ಅಲ್ಲ. ಸಹೃದಯನದ್ದೇ ಚಾಚಿದ ಇನ್ನೊಂದು ಮೈ ವಿಮರ್ಶಕ. ರಸಾನುಭವದ ಇನ್ನೊಂದು ಮಗ್ಗುಲೇ ವಿಮರ್ಶೆ. ಆದ್ದರಿಂದ ಮೊದಲು ಸಹೃದಯನಾಗಿ ಒಳಗೆ ಬಾ. ಆಮೇಲೆ ಟೀಕಿಸು, ಟಿಪ್ಪಣಿಸು ಖಂಡಿಸು, ಮಂಡಿಸು. ಆದರೂ ಮನೆಯೊಳಗಿನವನಾಗಿಯೇ ಎನ್ನುವ ಪ್ರೀತಿಯ ಒತ್ತಾಯವನ್ನು ತರುತ್ತವೆ ನಮ್ಮ ಕಲೆ: ನಮ್ಮ ಸಾಹಿತ್ಯ.

ಇಂಥ ವಿಮರ್ಶೆಯಲ್ಲಿ ಬುದ್ದಿ ಹರಿತವಾಗಿಯೇ ಕೆಲಸ ಮಾಡುತ್ತದೆ. ಆದರೆ ಈ ಝಳಪಿಸುವಿಕೆಯಲ್ಲಿ ರಸಾವರಣ ಹರಿಯದಂತೆ ವಿಮರ್ಶಕನ ಸಂವೇದನೆ ಪಹರೆ ಕೊಡುತ್ತಿರುತ್ತದೆ. ಇದು ಹೇಗೆಂದರೆ pole-vault ಎಂಬ ಉದ್ದಂಡ ಜಿಗಿತದ ಕ್ರೀಡೆಯ ಹಾಗೆ. ಉದ್ದದ ಬಿದಿರ ಕೋಲೊ೦ದನ್ನು ಹಿಡಿದು, ಧಾವಿಸುತ್ತ; ಅದನ್ನು ನೆಲಕ್ಕೂರಿ; ಆ ರಭಸಕ್ಕೆ ಎತ್ತರಕ್ಕೆ ಏರುತ್ತೀರಿ. ಇನ್ನೂ ಎತ್ತರದಲ್ಲಿ ಅಡ್ಡದಂಡವೊಂದು ಗುರುತಾಗಿ ಇರುತ್ತದೆ. ಅದರ ಹತ್ತಿರ ಬಂದಾಗ ನಿಮ್ಮನ್ನು ಇಷ್ಟು ಮೇಲಕ್ಕೆತ್ತಿದ ಬಿದಿರಕೋಲನ್ನು ಕೈಬಿಟ್ಟು ದಂಡದಾಚೆ ಜಿಗಿಯುತ್ತೀರಿ. ಯಾವುದೋ ಮೋಹದಿಂದ ಕೋಲನ್ನು ಕೈಬಿಡಲಿಲ್ಲವೋ ಅದೇ ನಿಮ್ಮನ್ನು ಈಚೆಯ ನೆಲಕ್ಕೆ ಕೆಡವುತ್ತದೆ. ಕೈಬಿಟ್ಟು ಜಿಗಿದಿರೋ ಆಚೆಯ ಬಯಲು ನಿಮ್ಮದು. ಸಿದ್ಧಿ ನಿಮ್ಮದು.

ವಿಮರ್ಶೆಯಲ್ಲಿ ಬುದ್ದಿ ಆ ಬಿದಿರಕೋಲಿನ ಹಾಗೆ, ಎತ್ತರಕ್ಕೇರುವುದಕ್ಕೆ, ಜಿಗಿತಕ್ಕೆ ವೇಗಕೊಡುವುದಕ್ಕದು ಬೇಕೇ ಬೇಕು. ಆದರೆ ವಿಶ್ಲೇಷಕ ಬುದ್ಧಿಯನ್ನು ಕೈಬಿಡಬೇಕಾದ ಘಟ್ಟವೂ ಒಂದಿದೆ. ಅಡ್ಡದಂಡವೇ ನೀವು ಅದರ ಹತ್ತಿರವಾದಂತೆ ಕೋಲನ್ನು ಕೈಬಿಟ್ಟು ತನ್ನಾಚೆ ಧುಮುಕುವಂತೆ ಆಹ್ವಾನಿಸುತ್ತದೆ. ಕಲಾನುಭವದಲ್ಲಿ ಈ ಘಟ್ಟವನ್ನು ಗುರುತಿಸುವುದಕ್ಕೂ ವಿಮರ್ಶೆ ಬೇಕೆನ್ನುವುದು ಅದರ ಮಹತ್ತು ಮತ್ತು ಮಿತಿ.

ಈ ನನ್ನ ಪ್ರಿಯ ಗೆಳೆಯ ಪ್ರಭಾಕರ ಜೋಶಿ ಇಂಥ ಒಳಗಿನ ವಿಮರ್ಶಕರಾಗಿದ್ದಾರೆ ಎನ್ನುವುದು ತುಂಬು ಸಂತಸದ ಸಂಗತಿ. ಅವರ ಬುದ್ಧಿ ಕೂರಲಗಿನಂತಿದ್ದರೂ ಅವರು ಬಲ್ಲರು : ನೀರನ್ನು, ಗಾಳಿಯನ್ನು, ಬಿಸಿಲನ್ನು ಅದು ಕತ್ತರಿಸಲಾರದು ಕಲೆಯ ಈ ಇಡೀ ವಾತಾವರಣದಲ್ಲಿ, eco - system ನಲ್ಲಿ ಒಂದಾಗುವುದೇ ವಿಮರ್ಶಕನಾಗಬೇಕಾದರೆ ಮೊದಲ ಅರ್ಹತೆ. ಆದ್ದರಿಂದಲೇ ಯಕ್ಷಗಾನದ ಅತ್ಯುತ್ತಮ ವಿಮರ್ಶಕರಾದ ಜೋಶಿ, ತಾವು ಬದಲಾವಣೆಗೆ ಎಷ್ಟು ಪರವಾಗಿದ್ದಾಗಲೂ, ಯಕ್ಷಗಾನದ ರೂಪಕ್ಕೆ, ರಸಾವರಣಕ್ಕೆ ಅಷ್ಟೇ ತೀವ್ರವಾದ ನಿಷ್ಠೆ ತೋರಿದ್ದಾರೆ. ಬುದ್ಧಿಯ ಹರಿತದಂತೆ, ಸಂವೇದನೆಯ ಸೂಕ್ಷ್ಮತೆಗೂ 'ಜಾಗರ'ದ ಪುಟ ಪುಟಗಳಲ್ಲಿ ರುಜುವಾತಿದೆ.