ಈ ಸಂಗ್ರಹದ ಅತ್ಯುತ್ತಮ ಲೇಖವನ್ನು ಹುಡುಕಿದೆ. ಇಲ್ಲಿ ತಾಳಮದ್ದಳೆಯ ಒಳಹೊರಗನ್ನು ಹಿಡಿದ 'ತಾಳಮದ್ದಳೆ' ಎಂಬ ಬರಹ ಇದೆ. ಯಕ್ಷಗಾನ ಮೇಳಗಳನ್ನು ಕುರಿತಂತೆ ಅಪಾರ ಮಾಹಿತಿ; ವ್ಯಾಖ್ಯಾನ ಇದೆ. ಅರ್ಥಗಾರಿಕೆಯ ಸಮೀಕ್ಷೆ ಇದೆ. ಎಲ್ಲದರಲ್ಲು ಜೋಶಿಯವರ ಸೂಕ್ಷ್ಮ ಗ್ರಹಣ ಶಕ್ತಿ, ಪಾಂಡಿತ್ಯ, ಪ್ರತಿಭೆ ಹರಿದಾಡಿದೆ. ನನಗೆ ತೀರ-ತೀರ ಮೆಚ್ಚುಗೆಯಾದ ಬರಹ 'ಯಕ್ಷಗಾನ ಪರಂಪರೆ' ಮತ್ತು 'ನಾಲ್ಕು ವೇಷಗಳು. ಆಲೋಚನೆ ಮತ್ತು ಒಳನೋಟ ಇಲ್ಲಿ ಹದವರಿತು ಸೇರಿವೆ. 73ರಷ್ಟು ಹಿಂದೆಯೇ ನಾಲ್ಕು ವೇಷಗಳು ಎಂಬ ಬರಹ ಜೋಶಿ ಬರೆದರೇ ಎಂದು ವಿಸ್ಮಯವಾಗುತ್ತದೆ.
ಚಟುವಟಿಕೆಯ ಮುದ್ದೆಯಾಗಿರುವ ಗೆಳೆಯ ಜೋಶಿ ಮುನ್ನುಗ್ಗುವ ಸಾಹಸಿಗಳು, ಧೈರ್ಯ, ಸಾಹಸ, ಕ್ರಿಯಾಶೀಲತೆ ಇದ್ದಲ್ಲಿ ದೈವಕೃಪೆ ತಾನಾಗಿ ಒದಗಿಬರುತ್ತದೆ ಎನ್ನುತ್ತಾರಲ್ಲ - ಹಾಗೆ; ವಿದ್ವತ್ತು, ಸೂಕ್ಷ್ಮತೆ, ಪ್ರಾಮಾಣಿಕ ಶ್ರಮ ಇದ್ದಲ್ಲಿ ಒಳನೋಟವೂ ಇಕೋ ಎಂದು ಒದಗಿ ಬರುತ್ತದೆ. ಅಲ್ಲದೆ, ಪ್ರಕೃತಿಯ ಭಾಗವಾಗಿಯೇ ಪ್ರಕೃತಿಯನ್ನು ತಿಳಿಯಬೇಕಾದಂತೆ, ಯಕ್ಷಗಾನದ ಆವರಣದಲ್ಲೇ ತಾನು ಅವಿಭಾಜ್ಯವಾಗಿ ಸೇರಿ ಅದನ್ನು ಗ್ರಹಿಸಲೆತ್ನಿಸುವ ಇಂಥ ಮೊದಲ ದರ್ಜೆಯ ವಿಮರ್ಶಕರಿಗಲ್ಲದೆ ಇನ್ನಾರಿಗೆ ಕಲೆ ತನ್ನ ಅಂತರಂಗವನ್ನು ತೆರೆಯಬೇಕು?
ಜೋಶಿಯವರ ಜಾಗರದ ನೋಟಕ್ಕೆ ಇನ್ನಷ್ಟು ಸೂಕ್ಷ್ಮತೆ, ವಿಸ್ತಾರ ಒದಗಲಿ, ಆಳದ ನಿಕ್ಷೇಪಗಳು ಇನ್ನೂ ಪತ್ತೆಯಾಗಲಿ, ವಿಮರ್ಶೆಯ ಕ್ಷೇತ್ರ ಸಮೃದ್ಧವಾಗಲಿ ಎಂದು ಮನಸಾರೆ ಹಾರೈಸುತ್ತೇನೆ.