ವಿಷಯಕ್ಕೆ ಹೋಗು

ಪುಟ:ಜಾಗರ.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೂರು ತಿಟ್ಟುಗಳು


ಪ್ರಾದೇಶಿಕ ಭಿನ್ನತೆಯೆಂಬುದು ಲೋಕಜೀವನದ ಒಂದು ಅಪರಿಹಾರ್ಯವಾದ ಲಕ್ಷಣ. ಆಹಾರ, ವಸತಿ, ಕೃಷಿವಿಧಾನ, ರೀತಿರಿವಾಜು, ಹಾವಭಾವಗಳಿಂದ ತೊಡಗಿ, ಭಾಷೆ, ಸಾಹಿತ್ಯ, ಮತ, ಕಲೆಯ ವರೆಗೆ ಎಲ್ಲೆಡೆ ಇದು ಕಾಣಿಸುತ್ತದೆ. ಮೂಲತ: ಒಂದೇ ಆದ ಮತವೋ, ಕಲೆಯೋ, ಭಾಷೆಯೋ, ಭಿನ್ನಕಾಲ ಮತ್ತು ಭಿನ್ನಪ್ರದೇಶಗಳಲ್ಲಿ ಬೇರೆ ಬೇರೆ ರೂಪಗಳನ್ನು ತಾಳುತ್ತದೆ. ಇದಕ್ಕೆ ಸೌಲಭ್ಯದ ದೃಷ್ಟಿ, ಇತರ ಸಮಾನ ಸಂಗತಿಗಳ ಪ್ರಭಾವ, ಸೃಷ್ಟಿಶೀಲ ಪ್ರತಿಭೆಯ ವ್ಯತ್ಯಾಸ, ವಸ್ತುಭೇದ - ಇವೆಲ್ಲ ಕಾರಣಗಳು. ಹೀಗೆ ಕಾಲ ಮತ್ತು ಪ್ರದೇಶ ಭೇದದಿಂದ ವ್ಯತ್ಯಾಸವಾದಾಗ, ಮೂಲವಸ್ತುವಿನ ಯೋಗ್ಯತೆ ಉತ್ಕರ್ಷ ಹೊಂದುವುದೂ ಇದೆ; ಅಪಕರ್ಷಗೊಳ್ಳುವುದೂ ಇದೆ.

ಯಕ್ಷಗಾನವೆ೦ಬ ಒಂದು ರಂಗ ಪ್ರಕಾರದಲ್ಲಿ ಹಲವು ಪ್ರಾದೇಶಿಕ ಭೇದ, ಉಪಭೇದಗಳಿವೆ. ಯಕ್ಷಗಾನವು ಅತಿ ಹೆಚ್ಚು ಬೆಳವಣಿಗೆ ಹೊಂದಿದ ರೂಪದಲ್ಲಿರುವುದು ನಮ್ಮಿ ಕರಾವಳಿಯಲ್ಲಿ. ಅದರಲ್ಲಿ ಮರು ಪ್ರಭೇದ ಅಥವಾ ತಿಟ್ಟುಗಳನ್ನು ಗುರುತಿಸಬಹುದು. ಸಾಮಾನ್ಯವಾಗಿ ತೆಂಕು-ಬಡಗು ಎಂಬ ಎರಡೇ ತಿಟ್ಟುಗಳೆಂದು ಹೇಳುವುದು ರೂಢಿ. ಆದರೆ ರಂಗತಂತ್ರ, ನೃತ್ಯ ಹಿಮ್ಮೇಳದ ಬಳಕೆ ಇವುಗಳ ನೆಲೆಯಲ್ಲಿ ಉತ್ತರ ಕನ್ನಡದ ಯಕ್ಷಗಾನವು ಬೇರೆಯೇ ತಿಟ್ಟಾಗಿ ಇದೆ. ವೇಷ ಹಿಮ್ಮೇಳ ಪರಿಕರ - ಇವು ಬಡಗಿನಂತೆ ಇದ್ದರೂ, ರಂಗ ಪ್ರಯೋಗದಲ್ಲಿ ಉತ್ತರ ಕನ್ನಡದ ತಿಟ್ಟು ಬಡಗಿನದಕ್ಕಿಂತ ಸಾಕಷ್ಟು ಭಿನ್ನವಾಗಿದೆ.

ತಿಟ್ಟುಗಳು ಕಾಣಿಸಿಕೊಳ್ಳುವ ಮೊದಲಿನ ಯಕ್ಷಗಾನ ಬಹುಶ: ಈಗ ನಾವು ಬಡಗುತಿಟ್ಟೆಂದು ಹೇಳುವ ರೂಪಕ್ಕೆ ಹತ್ತಿರ ಇದ್ದಿರಬೇಕು. ತೆಂಕುತಿಟ್ಟಿನಲ್ಲಿ ಅಟ್ಟೆಯಿಂದ ಕಟ್ಟುವ ಮುಂಡಾಸು, ಕಿರೀಟದ ಮುಂದಣ ಕೇದಗೆ ಇವೆಲ್ಲ ಇದ್ದುದಕ್ಕೆ ಪುರಾವೆ ಇದೆ. ಹಿರಿಯ ವೇಷಧಾರಿಗಳು ಇದನ್ನು ನೆನಪಿಸುತ್ತಾರೆ. ಅಲ್ಲದೆ ತುಳು ಮಲಯಾಳಿ ಭಾಷೆಗಳೇ ಮಾತೃಭಾಷೆಯಾಗಿದ್ದ - ಜಿಲ್ಲೆಯ ತೆಂಕಣದ ಭಾಗದಲ್ಲೇ