ವಿಷಯಕ್ಕೆ ಹೋಗು

ಪುಟ:ಜಾಗರ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨/ ಜಾಗರ

ಇದೆ. ಉದಾ: ಹಾಡುವಿಕೆಗೆ ಬೇಕಾದ ರಾಗ ನಿರ್ಧಾರ, ಶ್ರುತಿ, ತಾಳ - ಇವುಗಳ ಅಭ್ಯಾಸ, ನಿರ್ಣಯಗಳ ಕಲ್ಪನೆ ಒಬ್ಬ ಭಾಗವತ ದಕ್ಷಿಣಾದಿ ಸಂಗೀತದ ಅಭ್ಯಾಸ ಮಾಡಿ ಪಡೆಯಲಿ, ಆದರೆ, ಯಕ್ಷಗಾನಕ್ಕೆ ಅದರ ರಾಗದ ಶೈಲಿ ಬೇಡ, ಯಕ್ಷಗಾನವನ್ನೆ ವ್ಯವಸ್ಥಿತವಾಗಿ, ಅದರ ಶೈಲಿಯನ್ನು ಕಾದುಕೊ೦ಡು ಹಾಡಲು ಬೇಕಾದ ಮೂಲ ಜ್ಞಾನ (ಇದು ಎಲ್ಲ ಸಂಗೀತ ಪದ್ಧತಿಗಳಿಗೂ ಒಂದೇ ತಾನೆ?)ಅವನಿಗೆ ಇರಲಿ ಅಷ್ಟೆ (Basic rules of any system of music)

ಯಕ್ಷಗಾನದ ಶೈಲಿ, ಶೈಲಿ ಎಂದು ಅದನ್ನು ಳಿಸಿದರಷ್ಟೆ ಸಾಕೆ? ಸಾಲದು.ಆದರೆ ಅದು ಮೊತ್ತ ಮೊದಲ ಕೆಲಸ. ಅದನ್ನೇ ಮಾಡದೆ, 'ಸುಧಾರಣೆ' ಅಂದರೆ ಅದು ಸೋಗು, ಅದು ಅವ್ಯವಸ್ಥೆ ಅಷ್ಟೆ.

ಸುಧಾರಣೆ ಬೇಕೇ ಬೇಕು. ಅದು ಯಕ್ಷಗಾನದ ಚೌಕಟ್ಟಿನಲ್ಲೆ ಆಗಬೇಕು.ಯಕ್ಷಗಾನದ ಮಾದರಿಯಲ್ಲಿ ಕಲ್ಪನೆಯನ್ನು ಬೆಳೆಸಿ ಇನ್ನೂ ನಾಲ್ಕಾರು ಮಾದರಿಯ ವೇಷಗಳ ಸೃಷ್ಟಿ ಸಾಧ್ಯವಿದೆ. ಯಕ್ಷಗಾನದ ನೃತ್ಯದಿಂದಲೇ ಹಲವು ಬಗೆಯ ಸಮೂಹ ನೃತ್ಯ, ಭಾವ ಪ್ರಕಟನೆಯ ವೈವಿಧ್ಯದ ಚಲನೆಗಳು-ಇವನ್ನೆಲ್ಲ ಸೃಷ್ಟಿಸಲು ಸಾಧ್ಯ.

ಯಕ್ಷಗಾನದ "ಪರಂಪರೆ" ಎಂಬ ಹೆಸರಲ್ಲಿ ಇರುವ, ನಿಜಕ್ಕೂ ರಂಗದ ಔಚಿತ್ಯಕ್ಕಾಗಲಿ ಯಕ್ಷಗಾನ ಆಟದ ಸ್ವರೂಪಕ್ಕಾಗಲಿ ಹೊಂದದ ಅನೇಕ ಅಸಂಬದ್ಧಗಳನ್ನು ಕೈಬಿಡಲು ಸಂಪ್ರದಾಯ ಅಡ್ಡಿ ಬರಬಾರದು.

ಯಕ್ಷಗಾನ ವೇಷಭೂಷಣಗಳು ಭಾರ' ಆಗುತ್ತವೆ ಅನ್ನುತ್ತೀರಾ? ಹಗುರದ ವಸ್ತುಗಳಿಂದ ಅದೇ ಆಕಾರದ ಸಾಮಗ್ರಿ ತಯಾರಿಸಿದರೆ ತಪ್ಪೇನಿಲ್ಲ. ಒಳಗಿನ ವಸ್ತು ಯಾವುದಿದ್ದರೂ ಆ ವೇಷ ಸಾಮಗ್ರಿಯ ಆಕಾರ ಮುಖ್ಯ ತಾನ? ಮರದ ಬದಲು ರಟ್ಟು, ಅದರ ಬದಲು ಪ್ಲಾಸ್ಟಿಕ್‌ ಆದರೂ ಸರಿ,

ಶೈಲಿಯ ಸಂರಕ್ಷಣೆ - ಇದು ನಮ್ಮ ತುರ್ತಿನ ಕೆಲಸ.ನಮ್ಮ ಸುಧಾರಕ ಬುದ್ಧಿ ಶೈಲಿಯ ಸೀಮೆಯಲ್ಲೆ ಸಂಚರಿಸಬೇಕು.

ಮಂಗಳಾವಲೋಕನ 1976 . ಸಂ. ಎಸ್. ವಿ. ಪರಮೇಶ್ವರ ಭಟ್ಟ