ವಿಷಯಕ್ಕೆ ಹೋಗು

ಪುಟ:ಜಾಗರ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶೈಲಿಯ ಸಂರಕ್ಷಣೆ / ೨೧

ಸಾವಿರ ಶೈಲಿಗಳ ಸಾಧ್ಯತೆಯೂ ಇದೆ. ಪ್ರಪಂಚದಾದ್ಯಂತ ಇರುವ ಅಸ೦ಖ್ಯ ನೃತ್ಯ ಶೈಲಿಗಳು ಒಂದರ ಹಾಗೆ ಇನ್ನೊಂದಿಲ್ಲ. ಅವುಗಳನ್ನು ಏಕ ರೂಪತೆಗೆ ತಂದು ಒಂದೇ ಶೈಲಿ ಮಾಡಿದರೆ, ಏನು ಸಾಧಿಸಿದ೦ತಾಯಿತು? ಅವುಗಳೆಲ್ಲ ಉಳಿದು ಬೆಳೆದರೇನೇ ಅವುಗಳ ಸಾರ್ಥಕ್ಯ.

ಹಿಮ್ಮೇಳದ ಮಾತು. ಮದ್ದಲೆಯ ಬದಲು ಮೃದಂಗ ಬಾರಿಸುವುದು ಸರಿಯೆ? ಮೃದಂಗ ಬಾರಿಸಬಹುದಾದರೆ, ಅಂತಹ ಅನೇಕ ವಾದನಗಳು ಯಾಕೆಸಲ್ಲ? ಡ್ರಂ, ಬಾಂಗೋ, ತಬ್ಲಾ ಯಾವುದೂ ಆದೀತಲ್ಲವೆ? ಅಲ್ಲ ಎಲ್ಲ ರೀತಿಯ ಗಾಯನಗಳಿಗೆ ಶಾಸ್ತ್ರೀಯ ಸಂಗೀತ ಕಚೇರಿಯ ವಾದನಗಳನ್ನೆ ಬಳಸುವುದಾದರೆ, ಎಲ್ಲದಕ್ಕೂ ಮೃದಂಗ, ತಬಲಾ ಎರಡೇ ಸಾಕಲ್ಲ? ಭೂತ ನೃತ್ಯಕ್ಕೆ ಮೃದಂಗ ಹಾರ್ಮೋನಿಯಂ ಬಾರಿಸೋಣವೆ? - ಕೂಡದು. ಯಾಕೆ? ಅದು ಆ ಶೈಲಿಗೆ ಹೊಂದುವ ವಾದನ ಅಲ್ಲ. ಅದರಲ್ಲಿ ಆ ಗುಣವಿಲ್ಲ, ಮಾತ್ರವಲ್ಲ ಆಯಾ ಶೈಲಿಗಳಲ್ಲಿ ಅದಕ್ಕಾಗಿ ಸೃಷ್ಟಿಗೊಂಡ ವಾದನಗಳಿರುವಾಗ, ಅವನ್ನೆ ಬಳಸಿದರೆ ಅದು ಚೆಂದ, ಅದು ಶೈಲಿಯ ಧರ್ಮ, ಅದರ ಸತ್ವ.

ವೇಷ ಭೂಷಣಗಳ ಮಾತೂ ಅಷ್ಟೆ. ಅವು ಕೆಡಲು ಕಾರಣ - ಕಂಪೆನಿ ನಾಟಕಗಳ ವೇಷಗಳ ಅನುಕರಣೆ, ಕ್ಯಾಲಂಡರ್ ವೇಷಗಳ ಪ್ರಭಾವ - ಇವುಗಳ ಧಾಳಿ. ಇದರಿಂದ ನಮ್ಮ ವೇಷ ಭೂಷಣಗಳ ಶೈಲಿ ಅಡಿಮೇಲಾಗಿ ಹೋಗಿದೆ. ಈ ಪ್ರಭಾವವನ್ನು ತಡೆಯದಿದ್ದರೆ, ಯಕ್ಷಗಾನದ ವೇಷ, ಶೈಲಿ ಮರೆಯಾಗುವ ಭಯವಿದೆ. ಯಕ್ಷಗಾನದ ಚಿತ್ರಶೈಲಿ; ಕ್ಯಾಲಂಡರ್ ಚಿತ್ರ ಮತ್ತು ನಾಟಕದ ವೇಷಗಳಿಗಿಂತ ಭಿನ್ನ ಉದ್ದೇಶದ್ದು. ಅದೊಂದು 'ಪೌರಾಣಿಕ' ಪದ್ಧತಿಯ ನೃತ್ಯ ನಾಟಕದ ವೇಷ ಪದ್ಧತಿ - ನೃತ್ಯಕ್ಕೆ ಅನುಕೂಲಿಸಿ ಇರುವಂತದ್ದು ಅಲ್ಲದೆ ಕ್ಯಾಲಂಡರು ಚಿತ್ರ, ನಾಟಕದ ವೇಷಗಳಿಗಿಂತ ಬಹಳ ಉನ್ನತ ಮಟ್ಟದ ಕಲ್ಪನಾ ಸೃಷ್ಟಿ ಯಕ್ಷಗಾನದ ವೇಷ.

ಪ್ರದರ್ಶನಕ್ಕೆ ಇರುವ ಕಥೆ ಯಾವುದೇ ಇರಲಿ, ಅದರ ವೇಷಗಳು ಯಕ್ಷಗಾನ ಶೈಲಿಯಲ್ಲೆ ಇರಲಿ. ಕೃಷ್ಣದೇವರಾಯನೋ, ಅಲ್ಲ ಚಂದ್ರಗುಪ್ತನೋ ಯಕ್ಷಗಾನ ರಂಗಭೂಮಿಯಲ್ಲಿ ಗಲ್ಲ ಮೀಸೆ, ನಾಮ, ಸೋಗೆವಲ್ಲಿ, ಬಾಲಮುಂಡು, ಕೋಲು ಕಿರೀಟ ತೊಟ್ಟಿರಬೇಕು ಹೊರತು ಪೈಜಾಮ, ಜರಿಪೇಟ ಇಟ್ಟು ಬರುವುದು ಬೇಡ.

ಯಕ್ಷಗಾನದ ಶೈಲಿಯನ್ನು ಉಲ್ಲಂಘಿಸುವಾಗ ತಾನೇನೋ ತಪ್ಪು ಮಾಡುತ್ತಿದ್ದೇನೆ ಎಂಬ ಅರಿವು ಕಲಾವಿದನಿಗೆ ಬರಬೇಕು. ಶೈಲಿಯ ರಕ್ಷಣೆಯ 'ವ್ರತ' ಕಲಾವಿದನ ಬಾಳ ಉಸಿರಾಗಬೇಕು.

ಹಾಗಾದರೆ, ಶಾಸ್ತ್ರೀಯ ಕಲೆಗಳಿಂದ ನಾವು ಕಲಿಯಬೇಕಾದ್ದೇನೂ ಇಲ್ಲವೆ?