ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೭

ವಿವಾಹ ಅಥವಾ ಕೃಷ್ಣನ ಆಗಮನವನ್ನು ಹೇಳಲು ಮರೆತಿದ್ದರೆ, 'ಮದುವೆ ಹೇಗಾಯಿತು?' ಎಂದೋ, 'ಕೃಷ್ಣಸ್ವಾಮಿ ಏನು ಹೇಳಿದ?' ಎಂದೋ ಕೇಳುವ ಮೂಲಕ ನೆನಪಿಸುತ್ತಾನೆ. ಇದು ನಿರ್ದೇಶಕ.

ಇದೇ ಕಾರ್ಯದ ಮುಂದಿನ ಹಂತವಾಗಿ, ಪಾತ್ರಧಾರಿಯ ಪಾತ್ರ ನಿರ್ವಹಣೆಗೆ ಪೋಷಣೆ, ಪ್ರಕಾಶಗಳನ್ನು ನೀಡುವ, ಆತನ ಪ್ರತಿಭೆಗೆ ಪುಟಕೊಡುವ ಕೆಲಸವನ್ನು ಆತನು ತನ್ನ ಮಾತುಗಳ ಮೂಲಕ ಮಾಡು ತ್ತಾನೆ. ಪಾತ್ರಧಾರಿಗೆ ಸೂಕ್ಷ್ಮವಾದ ಪ್ರಶ್ನೆ, ಪ್ರಚೋದನೆಗಳನ್ನು, ಭಾವದ ವೈವಿಧ್ಯಗಳ ನೆಲೆಗಳನ್ನು ನೀಡಿ, ಈ ಕೆಲಸವನ್ನು ಸಾಧಿಸುತ್ತಾನೆ. (ಉದಾ: ಭೀಷ್ಮಪರ್ವದ ಭೀಷ್ಮ-ಕೌರವ ಸಂವಾದ). ಆ ಮೂಲಕ ಮಾತಿನ ಬೆಳವಣಿಗೆ, ನಾಟಕಕ್ರಿಯೆ, ಪ್ರಸಂಗದ ಅರ್ಥೈಸುವಿಕೆಗಳಿಗೆ ತನ್ನ ಕೊಡುಗೆ ಸಲ್ಲಿಸುತ್ತಾನೆ.

ಹಾಸ್ಯಪಾತ್ರಗಳೊಂದಿಗೆ ಮಾತಾಡುವ ಭಾಗವತನ ರೀತಿಯು ವಿಶಿಷ್ಟ ಬಗೆಯದು. ಮಾತಿನ ಮರ್ಮವನ್ನು ಬಲ್ಲ ಭಾಗವತನಿದ್ದಾಗ, ಹಾಸ್ಯ ಗಾರನಿಗೆ ಬಹಳ ಅನುಕೂಲವಾಗುತ್ತದೆ. ಹಾಸ್ಯಕ್ಕೆ ಬೇಕಾದ ಸೂಚನೆ, ಪೋಷಕ ಸಾಮಗ್ರಿ, ಅಡ್ಡಪ್ರಶ್ನೆಗಳನ್ನು ಹಾಕಿ ಹಾಸ್ಯವು ಮೆರೆಯುವಂತೆ ಮಾಡಲು ಭಾಗವತನ ಮಾತು ಸಹಕಾರಿ. ಯಕ್ಷಗಾನ ರಂಗದಲ್ಲಿ ನಿರ್ಮಾಣವಾಗಿರುವ ಹಲವು ಉತ್ತಮ ಹಾಸ್ಯ ಸನ್ನಿವೇಶಗಳು, ಭಾಗಶಃ ಭಾಗವತರ ಸೃಷ್ಟಿಗಳು. ಹಾಸ್ಯಗಾರನ ಮಾತುಗಳು ಹೆಚ್ಚು ಮುಕ್ತ ವಾಗಿರುವಂತ, ಅದಕ್ಕೆ ಸಂಬಂಧಿಸಿದ ಭಾಗವತನ ಒತ್ತು ಮಾತುಗಳೂ, 'ಪೌರಾಣಿಕ ಗಾಂಭೀರ್ಯಾ'ಕ್ಕಿಂತ ಭಿನ್ನವಾಗಿರುತ್ತವೆ.

ಕಥಾಸನ್ನಿವೇಶಕ್ಕೆ ಬೇಕಾಗಿರುವ, ಆದರೆ ರಂಗದಲ್ಲಿ ಇರದ ಪಾತ್ರಗಳಾಗಿಯೂ ಭಾಗವತನು ವ್ಯವಹರಿಸುತ್ತಾನೆ. ಉದಾ: ಮಂತ್ರಿ, ಸೇನಾಪತಿ, ಚಾರಕ, ಪುರೋಹಿತ. ಉದಾ: "ಮಂತ್ರಿಗಳೇ, ಎಲ್ಲ ಸಿದ್ಧತೆಗಳು ಆಗಿವೆಯಲ್ಲವೆ? ಎಂದು ರಾಜನು ಕೇಳಿದಾಗ"ಹೌದು" ಅಥವಾ "ಇಲ್ಲ. ಇಂತಿಂತಹ ತೊಂದರೆ ಇದೆ' ಇತ್ಯಾದಿಯಾಗಿ ಕಥೆಗೆ ಅನುಸರಿಸಿದ ಪ್ರತಿಕ್ರಿಯೆಯನ್ನು ಭಾಗವತನು ನೀಡಬೇಕು. ಕೆಲವು ಕಲ್ಪಿತ ಪಾತ್ರಗಳಾಗಿಯೂ ಆತನು ವ್ಯವಹರಿಸಬೇಕು. ಉದಾ: ಕಿರಾತಾರ್ಜುನ ಪ್ರಸಂಗದಲ್ಲಿ ಕಿರಾತ-ಅರ್ಜುನರ ವಿವಾದಕ್ಕೆ ಪಂಚಾಯತಿಕೆದಾರನ ಪಾತ್ರ. ಇದು ರಂಗಸಂಪ್ರದಾಯದ ಕಲ್ಪನೆ.