ಕೇಳಿಕೆ, ದಾಸರಾಟ ಮೊದಲಾದ ರೂಪಗಳು ಅದರಲ್ಲಿವೆ. ಅವುಗಳಲ್ಲಿ ತೆಂಕು, ಬಡಗು ಎಂಬಂತಹ ಶೈಲಿ ಪ್ರಭೇಧಗಳು ಇವೆ. ಗೊಂಬೆಯಾಟಗಳಿವೆ. ನಮ್ಮ ಬಯಲಾಟಗಳಿಗೆ ಸಂವಾದಿಯಾದ ಭಾಗವತಂ, ಚಿಂದು, ತೆರುಕೂತ್ತು, ಅಂಖಿಯಾ ನಟ, ಭಾಗವತ ಮೇಳಂ, ಜಾತ್ರಾ, ದಶವತಾರಿ, ಛಾವು ಮೊದಲಾದ ಆಟಗಳು, ಭಾರತದ ವಿವಿಧ ಪ್ರದೇಶಗಳಲ್ಲಿದ್ದು ಒಂದು ನೆಲೆಯಲ್ಲಿ ಇವೆಲ್ಲ ಒಂದೇ ರಂಗ ರೂಪದ ವಿವಿಧ ರೂಪಾಂತರಗಳಂತೆ, ಸೋದರ ಶಾಖೆಗಳಂತೆ ಇವೆ. ಹಾಗಾಗಿ ಇಲ್ಲಿ ಮಾಡಿರುವ ವಿವೇಚನೆಯು ಅನೇಕ ವಿಷಯಗಳು, ಅಷ್ಟಿಷ್ಟು ವ್ಯತ್ಯಾಸದಿಂದ, ಆಯೆಲ್ಲ ಪ್ರಕಾರಗಳಿಗೂ ಅನ್ವಯವಾಗುತ್ತದೆ.
ಕರಾವಳಿಯ ಯಕ್ಷಗಾನವನ್ನು ಜಾನಪದ ಎನ್ನಬಹುದೆ? ಎಂಬ ಪ್ರಶ್ನೆಯೂ ನಮ್ಮ ಮುಂದಿದ್ದು ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಫಲಿತವಾಗಿ ಶಾಸ್ತ್ರೀಯ ಲಕ್ಷಣಗಳುಳ್ಳ ಜಾನಪದ ಕಲೆ, ಅರೆಶಾಸ್ತ್ರೀಯ (Semi Classical), ಪಾರಂಪರಿಕ (Traditional) ಮೊದಲಾದ ನಿಷ್ಕರ್ಷೆಗಳನ್ನು ಮಾಡಿದ್ದಾರೆ. ನಮ್ಮ ಪರಂಪರೆಯಲ್ಲಿ ಶಾಸ್ತ್ರೀಯ-ಜಾನಪದ ಎಂಬ ವಿಭಾಗವಿಲ್ಲವೆಂದೂ, ಮಾರ್ಗ-ದೇಸಿ ಎಂಬುದೂ ಈ ಶಾಸ್ತ್ರೀಯ ಜಾನಪದವೆಂಬ ದ್ವಿವಿಧ ವಿಭಾಗಕ್ಕೆ ಸಮಾನವಲ್ಲವೆಂದೂ ಹೇಳಬಹುದು. (ಉದಾ — ಮತಂಗನ ಶಾಸ್ತ್ರೀಯ ಸಂಗೀತ ಗ್ರಂಥದ ಹೆಸರು 'ಬೃಹದ್ದೇಶಿ') ಪರಿಭಾಷೆಗಳ ಗೊಂದಲವೇ ಹಾಗೆ, ಒಂದು ವಿಮರ್ಶಾ ಪರಂಪರೆಯಿಂದ ನಾವು ತಂದುಕೊಳ್ಳುವ ಪರಿಕಲ್ಪನೆಗಳು, ನಾಮಧೇಯಗಳು ಇನ್ನೊಂದು ಪರಿವೇಶದಲ್ಲಿ ಸಂಸ್ಕೃತಿಯಲ್ಲಿ ಪೂರ್ಣವಾಗಿ ಅನ್ವಯವಾಗಲಾರವು. ಕಾಲದಲ್ಲೂ ಹಾಗೆಯೆ, ಇಂದಿನ ವಿಭಾಗದಿಂದ, ಹಿಂದಿನದನ್ನು ನೋಡುವಾಗಲೂ ಸಮಸ್ಯೆಗಳು ಬರುತ್ತವೆ! ಇರಲಿ, ಅಂತೂ ಆಧುನಿಕ ವಿಮರ್ಶೆಯ ಜಾನಪದ ಶಾಸ್ತ್ರೀಯ ಎಂಬ ವಿಭಾಗವನ್ನೊಪ್ಪಿ ನೋಡುವಾಗಲೂ, ಯಕ್ಷಗಾನವನ್ನು ಎರಡು ಕಡೆಗೆ ಸೇರಿಸಲೂ ಬೇಕಾದಷ್ಟು ವಿಚಾರಾಂಶಗಳಿವೆ. ನಿರಾಕರಿಸಲೂ ಇವೆ. ಹೀಗೆ ಅದರ ಅನಿಶ್ಚಿತತೆ (ambiguity)ಯು, ಆ ಕಲೆಯ ಶ್ರೇಷ್ಠತೆಯ, ಶ್ರೀಮಂತಿಕೆಯ ದ್ಯೋತಕವಾಗಿರಬಹುದು.
೩
ನಮ್ಮ ಪಾರಂಪರಿಕ ರಂಗಭೂಮಿಯ ಹೆಗ್ಗುರುತೆನ್ನಬಹುದಾದ ಯಕ್ಷಗಾನವು ಕಾಲಕಾಲಕ್ಕೆ ಸವಾಲುಗಳನ್ನು ಇದಿರಿಸುತ್ತ, ಅವುಗಳನ್ನು ಪರಿಹರಿಸುತ್ತ, ತನ್ನನ್ನು ತಾನು ಪುನಾರಚನೆಗೊಳಪಡಿಸುತ್ತ, ತಾನು ತಾನಾಗಿಯೇ ಇರುತ್ತ, ನವೀನವಾಗುತ್ತಲೂ ಸಾಗಿ ಬಂದಿದೆ. ಇದೊಂದು ರೋಚಕವಾದ ಕಥೆ. ಅದರ ಕೆಲವೇ ಅಂಶಗಳನ್ನು ಸಂಕ್ಷೇಪವಾಗಿ ನೋಡೋಣ.