ವಿಷಯಕ್ಕೆ ಹೋಗು

ಪುಟ:ಮುಡಿ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
33

ಎಲ್ಲ ವೈಭವೀಕರಣ ಅಪೇಕ್ಷೆಗಳಿಗೆ ಬಯಲಾಟ ಒಂದು ಮಾಧ್ಯಮ ಮತ್ತು ಬಲಿಪಶು! ಇದನ್ನು ಮನ ಒಲಿಕೆ ಮತ್ತು ನಿಯಮಗಳ ಮೂಲಕ ಪರಿಹರಿಸುವುದು ಅಗತ್ಯ.

ಕ್ಷೇತ್ರ ಮಹಾತ್ಮ್ಯ ಪ್ರಸಂಗಗಳ ಪ್ರಾದುರ್ಭಾವವು - ಯಕ್ಷಗಾನವು ಸಂಕುಚಿತವಾದುದನ್ನು ತೋರಿಸುತ್ತದೆ. ಹಿಂದಿನ ಉದ್ದೇಶಗಳಾದ ಧರ್ಮ ಮಹಾತ್ಮ್ಯ , ಭಕ್ತಿ ಮಹಾತ್ಮ್ಯಗಳು ಹೋಗಿ, ಮೇಳವು ನೇರವಾಗಿ ಆ ಆ ಕ್ಷೇತ್ರದ ಪ್ರಚಾರಕನ ಪಾತ್ರವನ್ನು ಪ್ರದರ್ಶನದ ಮೂಲಕವೇ ನಿರ್ವಹಿಸುತ್ತಿದೆ. ಇದು ಕಲಾವಿಸ್ತಾರಕ್ಕೂ, ಕಲಾಭಿರುಚಿಗೂ ಮಾರಕ.

ಒಂದು ಕಾಲದಲ್ಲಿ ಯಕ್ಷಗಾನ ಮೇಳಕ್ಕೆ ಆರ್ಥಿಕ ಭದ್ರತೆಯಾಗಿ ಬಂದ ಕಂಟ್ರಾಕ್ಟ್ರು ಪದ್ಧತಿಯು, ಒತ್ತಡದ ಮಾರಾಟ, ಟಿಕೆಟ್ ಬೆಲೆಗಳ ಅಸಹಜ ಏರಿಕೆ, "ವಿಶೇಷ ಆಕರ್ಷಣೆಗಳು" ಮತ್ತು ಅಸಹಜ ಮಾರುಕಟ್ಟೆ ನಿರ್ಮಾಣಗಳಿಂದ ದೀರ್ಘಾವಧಿಯಲ್ಲಿ ದುಷ್ಪರಿಣಾಮಗಳನ್ನು ಉಂಟು ಮಾಡಿದ್ದು ಇದಕ್ಕೆ ಪರ್ಯಾಯ ಶೋಧನೆ ಸುಲಭವಲ್ಲ.

ಹರಕೆ ಬಯಲಾಟದ ಮೇಳಗಳನ್ನು ಹೊರಡಿಸಿ, ಯಕ್ಷಗಾನದ ಹೆಸರಿನಲ್ಲಿ ವರ್ಚಸ್ಸನ್ನು ಗಳಿಕೆಯನ್ನೂ ಪಡೆಯುವ ದೇವಾಲಯಗಳು, ಕಲಾಪ್ರದರ್ಶನಗಳ ಕುರಿತು ಕಲಾನಿಷ್ಠವಾದ ಯಕ್ಷಗಾನದ ಕುರಿತ ಹೊಣೆಯುಳ್ಳ ಖಚಿತವಾದ ಧೋರಣೆಯನ್ನು ರೂಪಿಸಿಕೊಳ್ಳಬೇಕು. ಕೆಲವು ದೇವಾಲಯಗಳು ಇದನ್ನು ಮಾಡಿಯೂ ಇವೆ.

ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಬಂದಿರುವ ಸುಲಭ ರಂಜನೆಗಳು ಜೀವಂತ ಕಲೆಗಳಿಗೆ ಸವಾಲುಗಳಾಗಿವೆ. ಇಲೆಕ್ಟ್ರಾನಿಕ್ ಮಾಧ್ಯಮವನ್ನು ಒಂದು ಅಪಾಯವೆಂದು ಮಾತ್ರ ನೋಡದೆ ಅವಕಾಶವಾಗಿಯೂ ಸ್ವೀಕರಿಸಿ, ಅದಕ್ಕೆ ರಂಗವು ಸಿದ್ಧವಾಗಬೇಕು. ಈಗ ಬಂದಿರುವ ಸೀಡಿ, ದೂರದರ್ಶನ ಪ್ರದರ್ಶಗಳು ಸಮರ್ಪಕವಾಗಿಲ್ಲ. ಈ ಕಲೆಯನ್ನು ಅರ್ಥಮಾಡಿಕೊಂಡು ಅದರ ಗುಣವನ್ನು ಬಳಸಿ, ತಾಂತ್ರಿಕತೆಯನ್ನು ಕಲಾಸ್ನೇಹಿಯಾಗಿ ಬಳಸುವಲ್ಲಿ ನಿರ್ದೇಶಕ, ತಂತ್ರಜ್ಞರಿಗೆ ದೊಡ್ಡ ಸವಾಲುಗಳಿವೆ. ಭವ್ಯವಾದ, ಪ್ಯಾಂಟಿಸಿ ತುಂಬಿರುವ ಯಕ್ಷಗಾನಕ್ಕೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನವೀನ ಸೃಷ್ಟಿಯ ದೊಡ್ಡ ಸಾಧ್ಯತೆಗಳಿವೆ.

ಜನಪದ ರಂಗವು, ಒಂದು ಭೌಗೋಳಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಮೆರೆಯುವ ರಂಗಭೂಮಿ, ಯಕ್ಷಗಾನಕ್ಕೆ ಕ್ಷೇತ್ರ ವಿಸ್ತಾರ ಒದಗಿಸಿ ಅದರ ವ್ಯಾಪ್ತಿ ವಿಸ್ತಾರ ಮಾಡಲು ಸಾಧ್ಯವುಂಟು. ಆದರೆ ಅದಕ್ಕೆ ತಕ್ಕ ಹಾಗೆ, ಬುದ್ಧಿಪೂರ್ವಕ ಪೂರ್ವಸಿದ್ಧತೆ ಮಾಡಿಕೊಂಡು, ಅಚ್ಚುಕಟ್ಟಾದ, ಚುರುಕಾದ ಪ್ರದರ್ಶನಗಳ ಸಂಘಟನೆ ಇಂದಿನ ತುರ್ತು ಅವಶ್ಯಕತೆಯಾಗಿದೆ.

*ಡಾ. ಎಂ. ಪ್ರಭಾಕರ ಜೋಶಿ