ಮುಡಿ
39
ಪ್ರಶ್ನೆ : ಯಕ್ಷಗಾನ ಧ್ವನಿ ಸುರುಳಿಗಳ ಬಗೆಗೆ ನಿಮ್ಮ ಅಭಿಪ್ರಾಯವೇನು ? ಅಶ್ಲೀಲ,
ಕಳಪೆಯೂ ಇದರಲ್ಲಿ ಬಂದಿದೆಯಲ್ಲ.
ಉತ್ತರ : ಧ್ವನಿಸುರುಳಿ ಯಕ್ಷಗಾನ ಎಂಬುದು ಈ ಕಾಲದ ಸಹಜವಾದ ಬೆಳವಣಿಗೆ,
ವಿದ್ಯಮಾನ. ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಕಳಪೆಯು ತಿರಸ್ಕಾರಕ್ಕೆ ಯೋಗ್ಯ.
ಪ್ರಶ್ನೆ : ಯಕ್ಷಗಾನದ ಬಡಗುತಿಟ್ಟಿನಲ್ಲಿ ಒಂದೇ ಬಗೆಯ ಉಡುಪು ಯಾಕೆ ? ಯಕ್ಷಗಾನದಲ್ಲಿ
ಸಾಮಾಜಿಕತೆ ಬಳಸಬಹುದೆ ?
ಉತ್ತರ : ಬಟ್ಟೆಗಳೂ, ಆಭರಣಗಳೂ ಸುಮಾರಾಗಿ ಒಂದೇ ಬಗೆಯಲ್ಲಿದ್ದು, ಮುಖವರ್ಣಿಕೆ
ಬೇರೆ ಬೇರೆ - ಇದು ಯಕ್ಷಗಾನದ ಶೈಲಿ, ಸಾಂಪ್ರದಾಯಿಕ ಕಲೆಗಳ ರೂಪ ಹೀಗೆಯೆ, ಸಾಮರಸ್ಯ
ಗುಣ; ಆದರೂ ವೈವಿಧ್ಯ ಇದೆ. ಇಲ್ಲಿ 'ಪಾತ್ರಕ್ಕೆ ವೇಷ' ಅಲ್ಲ ವೇಷ ವಿಧಾನಕ್ಕೆ ಪಾತ್ರ.
ಉಡುಪು, ಮುಖವರ್ಣಿಕೆಗಳಲ್ಲಿ ತೆಂಕು ತಿಟ್ಟಿನಲ್ಲಿ ಹೆಚ್ಚು ವೈವಿಧ್ಯವಿದೆ.
ಯಕ್ಷಗಾನದಲ್ಲಿ ಸಾಮಾಜಿಕತೆ ಎಷ್ಟು, ಹೇಗೆ, ಏನು, ಎಂಬುದು ವಿವೇಚನೀಯ.
ವಸ್ತು ಪ್ರಾಚೀನವಾಗಿದ್ದೂ ಸಾಮಾಜಿಕತೆ (ಆಧುನಿಕ) ಸೂಚಿಸಲಿಕ್ಕೆ ಸಾಧ್ಯ.
-
ಪ್ರಶ್ನೆ : ಬಯಲಾಟ, ಡೇರೆ ಆಟಗಳಲ್ಲಿ ಕೋಮುವಾದಿ ರಾಜಕೀಯ ಮಾತಾಡುವುದು ಸರಿಯೆ?
ಉತ್ತರ : ಕಲಾವಿದನಿಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಪ್ರೇರಣೆಗಳಿರುತ್ತವೆ. ಇದು
ಸಹಜ. ಅವು ಕಲಾಕೃತಿಗಳಲ್ಲಿ ಅಭಿವ್ಯಕ್ತವಾಗುವುದೂ ಉಂಟು. ಆದರೆ, ಅದು
ಕೋಮುವಾದಿಯಾಗಿರಬಾರದು. ಘೋಷಣೆ, ಆವೇಶ ಕಲೆಯ ದಾರಿಯಲ್ಲ. ವಿಭಿನ್ನ
ಮುಖಗಳ ಕಲಾತ್ಮಕ ಮಂಡನೆ ಕಲೆಯ ರೀತಿಯಾಗಿದೆ. ಔಚಿತ್ಯ ಮೀರಿದ ಅಭಿವ್ಯಕ್ತಿ
ಯಾವುದಿದ್ದರೂ ಅದು ಅನುಚಿತ.
ಪ್ರಶ್ನೆ : ೧. ಅರ್ಥಗಾರಿಕೆಯಲ್ಲಿ ವೃಥಾ ಕಾಲಹರಣ ಸೂಕ್ತವೆ ?
೨. ಯಕ್ಷಗಾನವನ್ನು ವಿಸ್ತಾರವಾದ ಜಾನಪದ ರಂಗಭೂಮಿಗೆ ಹೇಗೆ ಹೋಲಿಸುವಿರಿ?
ಉತ್ತರ : ಕಾಲಹರಣ 'ವೃಥಾ' ಆದರೆ ಅದು ತಪ್ಪು, ಸಕಾರಣ ವಿಸ್ತಾರವಾದರೆ ತಪ್ಪಿಲ್ಲ.
ಆಶುಭಾಷಣದ, ಜನಸಾಮಾನ್ಯರನ್ನೂ ರಂಜಿಸುವ ಅರ್ಥಗಾರಿಕೆ ಬಹಳ ಮೇಲ್ಮುಖ
(ಎಲೀಟ್) ಕೂಡ ಆಗಬಾರದು, ಹಾಗೆಂದು, ಕೀಳುರಂಜನೆಯೂ ಆಗಬಾರದು. ಮೊನಚಾಗಿ,
ರಂಜಕವಾಗಿ, ಸಮಯಪಾಲನೆ ಮಾಡಿಕೊಂಡು ಅರ್ಥಗಾರಿಕೆ ಬೆಳೆಸಬೇಕಾದ್ದು
ಹಿಂದಿಗಿಂತಲೂ ಇಂದು ಹೆಚ್ಚು ತುರ್ತಿನ ಸಂಗತಿಯಾಗಿದೆ.