ಇದೆ. ಹೆಚ್ಚು ಆರಾಮವಾಗಿ ಆಟ ನೋಡುವ ಅಪೇಕ್ಷೆಯುಳ್ಳ ಹೊಸ ಜನವರ್ಗ ಆಟಗಳ ಕಡೆಗೆ ಆಕರ್ಷಿತವಾಯಿತು. ಇದರಿಂದಾಗಿ - ವಿಸ್ತರಿಸಿರುವ ಅಭಿರುಚಿಗೆ ತಕ್ಕಂತೆ ಪ್ರಸಂಗ ಮತ್ತು ಪ್ರದರ್ಶನಗಳಲ್ಲಿ ಮಾರ್ಪಾಡುಗಳಾಗಬೇಕಾಗಿ ಬಂತು.
ದೇಶ ಸ್ವಾತಂತ್ರ್ಯದ ಬಳಿಕ ವಿಸ್ತಾರಗೊಂಡ ಮಧ್ಯಮವರ್ಗ, ಭೂಸುಧಾರಣೆಗಳು ತಂದ ಗ್ರಾಮೀಣ ಸಮಾಜ ಪರಿವರ್ತನೆ, ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಾದ ಸಮಾಜ ಕಲ್ಯಾಣ, ಉದ್ಯೋಗ ಉದ್ಯಮಗಳ ವೃದ್ಧಿ - ಇತ್ಯಾದಿಗಳ ಪರಿಣಾಮವಾಗಿ ಯಕ್ಷಗಾನದಲ್ಲಾದ ಪರಿಣಾಮವೆಂದರೆ ಟೆಂಟು ಮೇಳಗಳಿಗೆ ಪ್ರೋತ್ಸಾಹ, ನೂತನ ಪ್ರಸಂಗಗಳ ರಚನೆ ಮತ್ತು ತುಳು ಯಕ್ಷಗಾನದ ಉದಯ. ಇವೆಲ್ಲವೂ, ತಮ್ಮದಾದ ರೀತಿಯಲ್ಲಿ ಹೊಸ ಕಾಲದ ಪಂಥಾಹ್ವಾನವನ್ನು ಸ್ವೀಕರಿಸಿ, ಯಕ್ಷಗಾನವನ್ನು ಜನಪರವಾಗಿ ಪ್ರಸ್ತುತೀಕರಣಗೊಳಿಸುವ ಯತ್ನಗಳು.
೮
ತುಳು ಯಕ್ಷಗಾನ ಪ್ರದರ್ಶನವು ೧೮೭೦ರ ಸುಮಾರಿಗೆ ವಿಟ್ಲದ ಅರಮನೆಯಲ್ಲಿ ಜರಗಿದ ದಾಖಲೆ (ಪ್ರೊ. ಅಮೃತ ಸೋಮೇಶ್ವರ ಒಂದು ಲೇಖನ: ಯಕ್ಷಾಂದೋಳ)ಯಾದರೂ, ಅದರ ವ್ಯಾಪಕ ಉತ್ಕರ್ಷವು ೧೯೫೦ರ ಬಳಿಕವೇ. ಪಂದುಬೆಟ್ಟು ವೆಂಕಟರಾಯರ "ಕೋಟಿ ಚೆನ್ನಯ" ಈ ನಿಟ್ಟಿನಲ್ಲಿ ಹೊಸ ಶಕೆಯೊಂದನ್ನು ತೆರೆಯಿತು. ದಕ್ಷಿಣ ಕನ್ನಡದ, ಮುಖ್ಯವಾಗಿ ತೆಂಕು ತಿಟ್ಟು ಪ್ರದೇಶದ (ಉಡುಪಿಯಿಂದ ಚಂದ್ರಗಿರಿ ತನಕ) ಪ್ರಧಾನ ಭಾಷೆ ತುಳು. ಇದು ರಾಜಕೀಯವಾಗಿ ದ್ವಿತೀಯ ಭಾಷೆ, ರಾಜ್ಯಭಾಷೆ ಕನ್ನಡವು ಇಲ್ಲಿ ಅಲ್ಪಸಂಖ್ಯಾತ ಮಾತೃಭಾಷೆ. ಈ ವರೆಗೆ ಕನ್ನಡದಲ್ಲಿದ್ದ ಯಕ್ಷಗಾನವನ್ನು ಪೋಷಿಸಿದ್ದ ತುಳುವರು, ಈಗ ಬಂದ ತುಳು ಯಕ್ಷಗಾನವನ್ನು ಬಹುವಾಗಿ ಮೆಚ್ಚಿ ಪ್ರೋತ್ಸಾಹಿಸಿದರು. ನೂರಾರು ತುಳು ಪ್ರಸಂಗಗಳು ರಚನೆಯಾದವು. ಜೊತೆಗೆ ಕನ್ನಡ ಸಾಂಪ್ರದಾಯಿಕ ಪ್ರಸಂಗಗಳೂ ತುಳು ಅರ್ಥಗಾರಿಕೆಯೊಂದಿಗೆ ಪ್ರದರ್ಶಿತವಾದುವು. ಇದು ಯಕ್ಷಗಾನದ ಪ್ರಜಾತಂತ್ರೀಯಕರಣ (Democratisation)ವಾಗಿ, ಸಾಂಸ್ಕೃತಿಕ ವಿಕೇಂದ್ರೀಕರಣದ ಒಂದು ಮಾದರಿಯಾಗಿ, ಭಾರತದ ಕಲಾ ಚರಿತ್ರೆಯಲ್ಲಿ ಉಲ್ಲೇಖಾರ್ಹವಾದ ವಿದ್ಯಮಾನ, ಕಳೆದ ಐವತ್ತು ವರ್ಷಗಳಲ್ಲಿ, ತುಳು ಯಕ್ಷಗಾನದಲ್ಲಿ ಕಾಣಿಸಿಕೊಂಡ ಅರ್ಥಗಾರಿಕೆಯ ವಿನ್ಯಾಸಗಳು, ಪ್ರಯೋಗಗಳು ತುಳು ವಾಹ್ಮಯ ಸಿದ್ಧಿಯ ಅದ್ಭುತವಾದೊಂದು ಅಧ್ಯಾಯವಾಗಿವೆ. ತುಳುವಿನ ಸೊಗಸು, ಬನಿ, ಅಭಿವ್ಯಕ್ತಿ ಸಾಮರ್ಥ್ಯ ನಾಟಕೀಯತೆ, ಜೀವನಲಯಗಳನ್ನು ಇದು ಉತ್ಕೃಷ್ಟ ಮಟ್ಟದಲ್ಲಿ ಬಳಸಿ ಬೆಳೆಸಿದೆ.