ವಿಷಯಕ್ಕೆ ಹೋಗು

ಪುಟ:ಮುಡಿ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
46
ಮುಡಿ

ಮೊದಲಾದುವುಗಳಿಂದ ಸಾಧಿತವಾಗುತ್ತದೆ. ಅಂತಹ ಮಾಧ್ಯಮದಿಂದ ಸೃಷ್ಟಿಯಾದ ಕಲೆಯಲ್ಲಿ ಆಗುವ ಸಂವಹನ, ನಮ್ಮ ಮೇಲೆ ಆಗುವ ಅದರ ಪರಿಣಾಮಗಳನ್ನು ಶಬ್ದಗಳ ಮೂಲಕ ವಿವರಿಸುವುದೂ ಕಠಿಣ. ಅಂತಹ ವಿವರಣೆಯು, ವಿಮರ್ಶೆಯಲ್ಲಿ ಅಗತ್ಯವಾದರೂ, ಅದು ಆ ಕಲೆಯ ದುರ್ಬಲ ಛಾಯೆ ಮಾತ್ರವಾಗಿರುತ್ತದೆ. ಹೀಗಿರುವಾಗ, ಶಬ್ದದ ಮೂಲಕ ಹೇಳುವಂತಹುದೆ ಶ್ರೇಷ್ಠ ಅನ್ನುವಂತಿಲ್ಲ.
ತಾನು ನೋಡಿದ ಚಿತ್ರವೊಂದರ 'ಅರ್ಥ'ವನ್ನು ವಿವರಿಸಲು, ಕೇಳುತ್ತ ಓರ್ವರು, ಇದಕ್ಕೆ ಏನು ಅರ್ಥ ? ಎಂದಾಗ, ವಿಖ್ಯಾತ ಚಿತ್ರ ಕಲಾವಿದ ಶ್ರೀ ಕೆ. ಕೆ. ಹೆಬ್ಬಾರರು ಆಡಿದ ಒಂದು ಮಾತನ್ನು ಇಲ್ಲಿ ವಿಸ್ತರಿಸಬಹುದು. "ಚಿತ್ರಕ್ಕೇನು ಅರ್ಥವೆಂದರೆ, ಚಿತ್ರವೇ ಅರ್ಥ. ಸಂಗೀತ ರಾಗದ ಸ್ವರಗಳಿಗೆ, ಅದರ ಆಲಾಪನೆಗೆ ಶಬ್ದ ಮೂಲಕ ಏನು ಅರ್ಥ ? ಹೇಳಿ ನೋಡೋಣ".
ಇದನ್ನೆ ಮುಂದುವರಿಸಿ ಹೇಳುವುದಾದರೆ - ಹರಿಯುವ ನದಿಯ ವೈಭವಕ್ಕೆ, ಸಮುದ್ರದ ತೆರೆಗಳಿಗೆ, ಅವು ನಿರ್ಮಿಸುವ ಮರಳಿನ ಚಿತ್ರಗಳಿಗೆ, ಮೋಡಗಳ ಮಾಯಾಲೋಕಕ್ಕೆ, ಅರಳಿದ ಹೂವಿಗೆ ಮುದ್ದು ಮಗುವಿನ ನಗುವಿಗೆ ಏನು ಶಾಬ್ದಿಕ ಅರ್ಥ ? ಹೇಳುವುದು ಹೇಗೆ ? ಯಾವ ಶಬ್ದ ?

ಅದೆಲ್ಲ ಪ್ರಾಕೃತಿಕ ಎಂದರೂ, ಮನುಷ್ಯ ನಿರ್ಮಿತವಾದ ಅನೇಕಾನೇಕ ಚಿತ್ರ ಶಿಲ್ಪ ವಾಸ್ತುಗಳ ಅಂದಕ್ಕೆ ಶಬ್ದದ ವಿವರಣೆ ಸಾಧ್ಯವೇ ? ಚೆಂಡೆ ಮದ್ದಲೆಗಳ ಬಡಿತದ ನಾದವನ್ನು ಹೇಗೆ ವಿವರಿಸುವುದು ? ಕಂಪ್ಯೂಟರಿನಲ್ಲಿ ಮೂಡಿ ಮಾಯವಾಗುವ ಚಿತ್ರವಿಚಿತ್ರ ರೇಖಾಕೃತಿ(ಲೈನ್ ಗ್ರಾಫಿಕ್ಸ್‌)ಗಳಿಗೇನು ಸಾಹಿತ್ಯ ? ನೃತ್ಯವು ನಿರ್ಮಿಸುವ ವಿವಿಧ ಆಕೃತಿಗಳಿಗೆ, ರೇಖೆಗಳಿಗೆ? ಭಾಷೆ ಎಂಬ ಅತ್ಯಂತ ಪ್ರಬಲವಾದ ಮಾಧ್ಯಮ, ಎಷ್ಟೊಂದು ದುರ್ಬಲ!

ಆದುದರಿಂದ ಶಾಬ್ದಿಕ ಆಕೃತಿಗಳನ್ನೂ, ಅಶಾಬ್ದಿಕ ಆಕೃತಿಗಳನ್ನೂ ಎಣಿಸಿದಾಗ ಅಂದರೆ ಭಾವಾಭಿವ್ಯಕ್ತಿಗಳನ್ನೂ, ಹೋಲಿಸಿದರೆ ಬಲಾಬಲ ನಿರ್ಣಯವು ಕಷ್ಟದ್ದು. ಅ ಶಾಬ್ದಿಕ ಭಾವಾಕೃತಿಯೇ ಸ್ವಲ್ಪ ಪ್ರಬಲವೋ ಏನೋ.

ಇಷ್ಟರ ಮೇಲೆ - ತಾತ್ವಿಕ, ಆಧ್ಯಾತ್ಮಿಕ, ದಾರ್ಶನಿಕ, ಮೊದಲಾದ 'ವಿವರಣ ಪ್ರಧಾನ'ವಾದ ವಸ್ತುಗಳಾದರೂ, ನೃತ್ಯಕ್ಕೆ ಒದಗಿದ ಅನೇಕ ಉದಾಹರಣೆಗಳಿಲ್ಲವೆ ? ದಾರ್ಶನಿಕಾಚಾರ್ಯರ, ಕವಿಗಳ, ದಾಸರ ಕೃತಿಗಳನ್ನೂ ನರ್ತನಕ್ಕೆ ಅಳವಡಿಸಿ ತೋರಿಸಲಾಗಿದೆ. ಆ ಮಾಧ್ಯಮದಲ್ಲಿ ಆ ವಿಚಾರಗಳ ಸಂವಹನದ ರೀತಿ, ಮಂಡನೆಯ ಕ್ರಮ, ತಂತ್ರಗಳು ಬೇರೆ. ಆ ಮಾಧ್ಯಮದ ಬಳಕೆಯ ಹದದ, ಪ್ರಾವೀಣ್ಯದ ಪ್ರಶ್ನೆ ಅದು. ಮಾತಿನಲ್ಲಾದಂತೆ ನೃತ್ಯಾದಿಗಳಿಂದ ಆಗುತ್ತದೆಯ ಎಂದರೆ - ಬೇರೆ ರೀತಿಯಲ್ಲಿ ಆಗುತ್ತದೆ ಅನ್ನಬಹುದು.ಉದಾ. ಡಾ. ಪದ್ಮಾಸುಬ್ರಹ್ಮಣ್ಯಂ ಅವರ ನೃತ್ಯಕೃತಿ ಶಂಕರಾಚಾರ್ಯ.

* ಡಾ. ಎಂ. ಪ್ರಭಾಕರ ಜೋಶಿ