74
ಮುಡಿ
ನಿನ್ನೆ - ಇಂದು - ನಾಳೆ
ಸಂಸ್ಕೃತಿಗೆ, ಕಲಾಸ್ವರೂಪಗಳಿಗೆ ಇತಿಹಾಸವಿದೆ, ನಿನ್ನೆ - ಇಂದು - ನಾಳೆಗಳಿವೆ.
ಯಕ್ಷಗಾನಕ್ಕಾದರೂ ಹಾಗೆಯೆ. ಜೀವಂತವಾದುದು ಎಲ್ಲವೂ, ಪರಿವರ್ತನಶೀಲ ಮತ್ತು
ಗತಿಶೀಲವಾಗಿರುತ್ತದೆ, ಅಷ್ಟೆ ಆದರೆ ಸಾಲದು, ಅದು ನೈಜ ಪ್ರಗತಿಶೀಲವಾಗಿರಬೇಕೆಂದು
ವಿಮರ್ಶೆಯು ಅಪೇಕ್ಷಿಸುತ್ತದೆ. ಇಂದಿನ ಜಗತ್ತಿನ ಸಾಂಸ್ಕೃತಿಕ ಚಲನೆಯನ್ನು ಕಂಡಾಗ,
ಯಕ್ಷಗಾನದಂತಹ ಕಲೆಗಳ ಭವಿಷ್ಯ ಏನಾದೀತು ? ಅವು ಉಳಿದಾವೆ ? ಎಂದು ಕಾಣುವುದು
ಸಹಜ. 'ನಾಶದ ಭಯ'ವೆಂಬುದು, ಆಧುನಿಕತೆ ತಂದಿರುವ ಒಂದು ಆತಂಕ. ಇಂತಹ
ಆತಂಕ ಬೇಕಾಗಿಲ್ಲ ಎಂಬ ವಾದವೂ ಉಂಟು.
ಯಕ್ಷಗಾನವನ್ನು ಬಿಡೋಣ, ಇನ್ನು ನೂರಿನ್ನೂರು ವರ್ಷಗಳಲ್ಲಿ ಕನ್ನಡ, ತುಳು,
ಭಾಷೆಗಳು ಉಳಿದಾವೆ ? ಯೋಚಿಸಬೇಕಾದ ವಿಚಾರ. ಆಗ ಯಕ್ಷಗಾನವು ಬೊಂಬೆ, ಸಿನಿಮಾ,
ಸಿ.ಡಿ., ಚಿತ್ರ, ಕಾರ್ಟೂನ್ಗಳಲ್ಲಿ ಉಳಿದೀತು. ಭಾಷಾಂತರಗೊಂಡು ಬೆಳೆದೀತೋ ಏನೋ?
ಆಧುನಿಕತೆ ಎಂಬುದೂ ಒಂದಲ್ಲ, ಬಹುರೂಪಿ, ಬಹುಮುಖಿ ಮತ್ತು ಅದಕ್ಕೂ
ಇಂದು ನಿನ್ನೆ ನಾಳೆಗಳಿವೆ. ಜೀವನ ಪರ ಮತ್ತು ವಿರುದ್ಧ ಮುಖಗಳಿವೆ, ಒಳಿತು ಕೆಡುಕುಗಳಿವೆ.
ಸವಾಲು ಮತ್ತು ಅವಕಾಶ
ಆಧುನಿಕತೆಯ ಯಕ್ಷಗಾನದಂತಹ ಕಲೆಗಳಿಗೆ ಸವಾಲುಗಳನ್ನು ಒಡ್ಡಿದೆ.
ದೂರದರ್ಶನದಂತಹ ಇಲೆಕ್ಟ್ರಾನಿಕ್ ಮಾಧ್ಯಮವನ್ನು ಒಂದು ಅವಕಾಶವೆಂದು
ಸ್ವೀಕರಿಸಬೇಕು. ಆಧುನಿಕ ಮಾಧ್ಯಮ, ಸನ್ನಿವೇಶ ಮತ್ತು ಪ್ರೇಕ್ಷಕವರ್ಗವು ಯಕ್ಷಗಾನವು
ಹೆಚ್ಚು ಒಪ್ಪ ಓರಣ ಮತ್ತು ಶಿಸ್ತುಗಳಿಂದ ಪ್ರದರ್ಶಿತವಾಗುವುದನ್ನು ಬಯಸುತ್ತದೆ.
ಸಂಕ್ಷಿಪ್ತಗೊಳಿಸುವಿಕೆ, ಮತ್ತು ಶೈಲಿ ಪದ್ಧತಿಗಳ ಉಳಿಸುವಿಕೆ ಎಂಬ ದ್ವಿಮುಖ ಅಪೇಕ್ಷೆಗಳು,
ವಿರುದ್ಧವಾಗಬೇಕಾಗಿಲ್ಲ. ಕಲೆಗೆ ಪೋಷಕ ಮತ್ತು ಕಲ್ಪಕಗಳಾಗಬಹುದು. ಕಲೆ ಹುಟ್ಟಿದ
ಬೆಳೆದ, ಮತ್ತು ಇಂದು ಅದು ಇರುವ ಕಾಲಗಳೊಳಗೆ ಅಗಾಧ ವ್ಯತ್ಯಾಸ ಇದೆ. ಯಕ್ಷಗಾನವು
ಸಾಧಿಸಲೇಬೇಕಾಗಿರುವ ಪ್ರದೇಶ ವಿಸ್ತಾರ, ಪ್ರೇಕ್ಷಕ ವಿಸ್ತಾರ, ಮತ್ತು ತಾಂತ್ರಿಕ-ಪರಿಕರ ಸೌಲಭ್ಯ
ಮತ್ತು ನಾವೀನ್ಯಗಳಿಗೆ ಆಧುನಿಕ ಸನ್ನಿವೇಶಗಳು ಅನುಕೂಲವಾಗಿದೆ. ಪ್ರಯಾಣ, ಪ್ರದರ್ಶನ
ವ್ಯವಸ್ಥೆಗಳು ಸುಲಭವಾಗಿವೆ. ಬೆಳಕು, ಧ್ವನಿ, ಸಾಮಗ್ರಿಗಳಲ್ಲಿ ಕ್ರಾಂತಿ ನಡೆದಿದೆ. ಇದನ್ನು
ಯಕ್ಷಗಾನವು 'ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಬೇಕು ಅಷ್ಟೆ.