ಮುಡಿ
ಸ್ವೀಕರಿಸಿರುವ ರೀತಿ
ಸದ್ಯ ಯಕ್ಷಗಾನವು ಆಧುನಿಕತೆಯನ್ನು ಸ್ವೀಕರಿಸಿಕೊಂಡಿರುವ ರೀತಿ ಹೇಗಿದೆ ? ಇದನ್ನು
ವಿಚಾರಿಸಿದಾಗ - ಎರಡೂ ಮುಖಗಳು ಗೋಚರಿಸುತ್ತವೆ. ಆಧುನಿಕತೆಯನ್ನು ತೀರ ತೆಳುವಾಗಿ,
ಕೇವಲ ಒಂದು ನೋವೆಲ್ಟಿ ಆಗಿ, ಮೇಲ್ಪದರಿನ ಒಂದು ಲೇಪವಾಗಿ ನಾವು ಸ್ವೀಕರಿಸಿದುದೆ
ಹೆಚ್ಚು. ಟ್ಯೂಬ್‌ಲೈಟುಗಳ ಬಳಕೆ, ಕರ್ಕಶವಾದ ಬೊಬ್ಬೆಯಂತಹ ಧ್ವನಿವರ್ಧನ ವಿಧಾನ,
ಹಿಮ್ಮೇಳದ ಜೊತೆಗೆ ಬ್ಯಾಂಡು ವಾಲಗ, ಬಾಣಬಿರುಸು ಸ್ಫೋಟಕಗಳ ಬಳಕೆ, ಇವು ಒಂದು
ತರಹ. ಅದೇ ರೀತಿ, ಸುಲಭ ಎಂಬ ಕಾರಣಕ್ಕಾಗಿ ಯಕ್ಷಗಾನೀಯ ವೇಷದ ಶಿಲ್ಪಕ್ಕೆ
ಹೊಂದದಿರುವ ಬಣ್ಣ ಬಣ್ಣದ ಬಟ್ಟೆಗಳು, ಮಣಿಗಳು, ಪ್ಲಾಸ್ಟಿಕ್ ಹಾರಗಳ ಬಳಕೆ - ಇದನ್ನು
ನಾವು ಆಧುನಿಕತೆ ಎಂದುಕೊಂಡು ತಂದಿದ್ದೇವೆ. ಇವುಗಳು ಯಕ್ಷಗಾನೀಯ ಶೈಲಿಯನ್ನು
ಉದ್ವಸ್ತಗೊಳಿಸಿರುವುದು ಪ್ರತ್ಯಕ್ಷ ಮತ್ತು ವಿಫುಲ - ಹೀಗಾಗಿ ಆ ಕುರಿತು ವಿಸ್ತಾರ ಅಗತ್ಯವಿಲ್ಲ.
ಯಕ್ಷಗಾನವನ್ನು ಒಳಗಿನವರಾಗಿ, ಅಭಿಮಾನದ ಮಂಜಿನಿಂದ ಕಾಣದೆ,
ಹೊರಗಿನವರಾಗಿ ಬಂದು ನೋಡಿದ ಅನೇಕ ಕಲಾಸಕ್ತರು, ರಂಗತಜ್ಞರು ನಮ್ಮ ಆಟಗಳನ್ನು
ನೋಡಿದೊಡನೆ ಬೆಚ್ಚಿಬಿದ್ದವರಂತೆ ಪ್ರಶ್ನಿಸುತ್ತಾರೆ. ನಮ್ಮ ರಂಗವ್ಯವಸ್ಥೆ, ಕಾಲಿಗೆ ಹಾಕುವ
ಸಾಕ್ಸ್, ಸ್ಟೀಲಿನ ಆಯುಧಗಳು, ನೈಲೆಕ್ಸ್ ಬಟ್ಟೆಗಳು, ನಾಟಕ ಪಾರ್ಟು ವೇಷಗಳನ್ನು ಕಂಡು
ಇದೇನಿದು ? ಇದು ಯಾವ ಪ್ರಾಚೀನ ಪಾರಂಪರಿಕ ರಂಗಕಲೆ ? ಅನ್ನುತ್ತಾರೆ. ನಾವು
ನಿರುತ್ತರರಾಗುವ ಸ್ಥಿತಿ ಇದೆ.
ವಸ್ತು ಮತ್ತು ರಂಗದ ಪ್ರದರ್ಶನವನ್ನು ರೂಪಿಸುವ ಮಟ್ಟದಲ್ಲೂ ಸಹ, ನಾವು
ಆಧುನಿಕತೆಯನ್ನು ಅಳವಡಿಸಿರುವುದು ಒಂದು ಬಗೆಯ ಜನಪ್ರಿಯ ಸಿನಿಮಾ ಮಾದರಿಯ
ಕೌತುಕ, ಫಾರ್ಮ್ಯುಲಾ ಕತೆ, ಹಾಸ್ಯ ವಿಸ್ತಾರಗಳ ಮಟ್ಟದಲ್ಲಿ ಮಾತ್ರ. ಇತರ ಹಲವು
ರಂಗಭೂಮಿಗಳಲ್ಲಿ ಆಗಿರುವ ಹಾಗೆ, ಗಂಭೀರವಾದ ಮಟ್ಟದ ಆಧುನಿಕ ಸ್ಪಂದನ ಈ
ರಂಗದಲ್ಲಿ ಬಂದಿರುವುದು ಕಡಮೆ. ಪ್ರಯೋಗರಂಗ (experimental theatre) ರಚನೆಗೆ
ಯತ್ನಿಸಿರುವವರೂ, ಕೆಲವು ಪ್ರಮಾಣದಲ್ಲಿ ವ್ಯವಸಾಯ ರಂಗವೂ, ನಿಜಾರ್ಥದಲ್ಲಿ ಆಧುನಿಕ
ಭಾವವನ್ನು, ವಸ್ತು-ಮಂಡನೆಯನ್ನು ಗೈದುದನ್ನು ಮರೆಯುವಂತಿಲ್ಲ. ಆದರೆ ಅದರ ಪ್ರಮಾಣ
ಬಲು ಸಣ್ಣದು.
ರಂಗಭೂಮಿಯ ಇತರ ಪ್ರಕಾರಗಳಲ್ಲಿ, ಮಟ್ಟದಲ್ಲಿ ಆಗಿರುವ ಆಧುನಿಕ
ಪರಿಷ್ಕಾರಗಳನ್ನು ನೋಡುವ, ಸ್ವೀಕರಿಸುವ ಅವಕಾಶ ಯಕ್ಷಗಾನಕ್ಕೆ ಸಿಕ್ಕಿಲ್ಲ ಅನ್ನುವುದು