ವಿಷಯಕ್ಕೆ ಹೋಗು

ಪುಟ:ಮುಡಿ.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
63

ಕಾರಂತರ "ಯಕ್ಷರಂಗ", ಉದ್ಯಾವರ ಮಾಧವಾಚಾರ್ಯರ "ಸಮೂಹ" ಮೊದಲಾದ ಕೆಲವನ್ನು ನೆನಪಿಸಬಹುದು. ವಾಣಿಜ್ಯಪರ ಒಲವುಗಳೂ, ಕಲಾವಿದರ ವೈಯಕ್ತಿಕ ಸೃಜನಗಳೂ ಪ್ರಾಯೋಗಿಕತೆಯ ಹಲವು ರೂಪಗಳನ್ನು ತೋರಿಸಿಕೊಟ್ಟಿವೆ.

ಆಧುನಿಕತೆಯ ಪ್ರಭಾವ, ನವೀನ ಸಾಹಿತ್ಯ ಸಂಸ್ಕೃತಿಗಳ ಪ್ರಭಾವ, ಕಾಲಮಿತಿ ಪ್ರಯೋಗದ ಆವಶ್ಯಕತೆ, ಕ್ಯಾಸೆಟ್, ರೇಡಿಯೋ, ದೂರದರ್ಶನಗಳ ಮಾಧ್ಯಮಗಳಿಂದ ಬಂದಿರುವ ಹೊಂದಾಣಿಕೆಯ ಅಗತ್ಯಗಳು, ಪರಿಸರ, ಸಾಕ್ಷರತೆ ಮೊದಲಾದ ಚಳವಳಿಗಳು, ಮಕ್ಕಳ ಮೇಳ, ಮಹಿಳೆಯರ ಯಕ್ಷಗಾನಗಳಂತಹ ಬೆಳವಣಿಗೆಗಳು - ಮೊದಲಾದುವೆಲ್ಲ ಪ್ರಯೋಗ ರೂಪದ ಮೇಲೆ ಮತ್ತು ಪ್ರಸಂಗ - ಪ್ರಯೋಗ ಸಂಬಂಧದ ಮೇಲೆ ಪ್ರಭಾವ ಬೀರಿ ಕಲೆಯ - ಪ್ರದರ್ಶನದ ಆಂತರಿಕ ಮತ್ತು ಬಾಹ್ಯರೂಪಗಳ ಮೇಲೆ ಪರಿಣಾಮ ಬೀರಿವೆ. ಇವೆಲ್ಲ ಕಾಲಪ್ರಭಾವಗಳು, ಯಕ್ಷಗಾನ ಪ್ರಸಂಗವನ್ನಾಧರಿಸಿದ ಪ್ರದರ್ಶನವೆಂಬ ಕಲಾಕೃತಿ ಈ ಎಲ್ಲ ಪ್ರಭಾವಗಳನ್ನು ತನ್ನೊಳಗು ಮಾಡಿಕೊಳ್ಳುತ್ತ, ಕೆಲವಂಶಗಳನ್ನು ಸೇರಿಸುತ್ತ, ಕೆಲವು ಅಂಶಗಳನ್ನು ಕಳೆದುಕೊಳ್ಳುತ್ತ ಸಾಗುತ್ತಿದೆ.

ಕಳೆದ ಸುಮಾರು ಐವತ್ತು ವರ್ಷಗಳಲ್ಲಿ, ರಂಗ ಪ್ರದರ್ಶನ ರೂಪ, ತಂತ್ರಗಳಲ್ಲಿ ಯಕ್ಷರಂಗದಲ್ಲಾದ ಪರಿವರ್ತನೆಗಳು ವಿಸ್ತಾರವಾದ ಅಧ್ಯಯನಕ್ಕೆ ವಿಫುಲ ಸಾಮಗ್ರಿಯನ್ನು ಒದಗಿಸುತ್ತವೆ.

ಡಾ. ಎಂ. ಪ್ರಭಾಕರ ಜೋಶಿ