82
ಮುಡಿ
'ಯಕ್ಷ' ಎಂಬ ಜನಾಂಗವನ್ನು ಹಿಡಿದು ಹೋದರೆ ಆ ಜನಾಂಗ ಇತ್ತು ಎಂಬುದು
ಮೊದಲು ಸಿದ್ಧವಾಗಬೇಕು. ಇಲ್ಲವಾದರೆ 'ಯಕ್ಷ' ಶಬ್ದಕ್ಕೆ ಬೇರೇನು ಅರ್ಥವೆಂದು
ನೋಡಬೇಕು. ಯಕ್ಷಗಾನವು ಮೂಲತಃ ಕನ್ನಡನಾಡಿನಲ್ಲಿ ಹುಟ್ಟಿದ್ದು ಎಂದರೆ, ಬೇರೆ ಕಡೆ
ಸಿಕ್ಕುವ 'ಯಕ್ಷಗಾನ' ಶಬ್ದ ಮತ್ತು ನಮ್ಮಂತಹದೇ ಸಾಹಿತ್ಯ ರೂಪಕ್ಕೆ ಏನು ಕಾರಣ ಎಂದು
ವಿವರಿಸಬೇಕಾಗುತ್ತದೆ.
ಯಕ್ಷಗಾನವು ಸುಮಾರು ಕ್ರಿ.ಪೂ. ಎರಡನೇ ಶತಮಾನದ ಗುಪ್ತರ ಕಾಲದ ಒಂದು
ರಂಗಸಾಂಪ್ರದಾಯವು ಚದುರಿದಾಗ ಬಂದ ರೂಪ, ಅರ್ಥಾತ್ ಭಾರತದ ಎಲ್ಲ ಹಳೆ ರಂಗ
ಪ್ರಕಾರಗಳು ಅದೇ ಮೂಲದವು ಎಂಬ ಏಕಮೂಲ ವಾದವೊಂದಿದೆ. ಇದೂ ಸಂಭವನೀಯ.
ಆದರೆ, ಅದು ಈ ಕಡೆ ಬಂದು ಯಾವಾಗ, 'ಯಕ್ಷಗಾನ' ಎನಿಸಿತು ? ಯಾವ್ಯಾವಾಗ ಅದರ
ಇಂದು ಕಾಣುವ ಅಂಗಾಂಶಗಳು ಸೇರಿದುವು ? ಎಂಬ ಪರಿಶೀಲನೆಗೆ ಅವಕಾಶವುಂಟು.
ಹಾಗೆಯೇ ಅದರ ವಿಭಿನ್ನ ರೂಪಗಳ ಭಿನ್ನತೆಗಳೂ ಪರಿಶೀಲನಾರ್ಹವಾಗಿ ಉಳಿಯುತ್ತವೆ.
ಅಂತೂ ಕಲೆಯ ಮೂಲದ ಪ್ರಶ್ನೆಯನ್ನು ತೆಗೆದುಕೊಂಡಾಗ, - ಧರ್ಮ, ಸಾಹಿತ್ಯ,
ಭಾಷೆ, ಆಚರಣೆ, ಕಲೆ, ರಾಜಕೀಯ ಸ್ಥಿತಿ, ಆ ಕಾಲದ ಸಾಮಾಜಿಕ ಸ್ಥಿತಿ, ಜನಾಂಗ ವಲಸೆ,
ಇತರ ಕಲಾಪ್ರಕಾರಗಳು ಇವೆಲ್ಲವುಗಳ ಮೊತ್ತದ ಮಧ್ಯೆ ಗಣಿಸಬೇಕೆ ಹೊರತು, ಒಂದು
ಅಂಶದಿಂದ ಗಣಿಸಿದರೆ ಫಲಿತಾಂಶವು ಸಮಗ್ರವಾಗದು.