ವಿಷಯಕ್ಕೆ ಹೋಗು

ಪುಟ:ಮುಡಿ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

73

ಆಧುನಿಕತೆ ಬೇರೆ, ಇವತ್ತಿನದು ಬೇರೆ. ಹೋಟೆಲಲ್ಲಿ ಕಾಪಿ ಕುಡಿದರೆ, ಪ್ಯಾಂಟು ತೊಟ್ಟರೆ ಅದು ಆಗ ಮಹಾ ಆಧುನಿಕತೆ, ಇಂದು ಹಾಗಲ್ಲ. 'ಫ್ರೀಡಂ' ಸ್ವಾತಂತ್ರ್ಯ - ಎಂಬುದಕ್ಕೆ ಕಾಲಕಾಲಕ್ಕೆ ಅರ್ಥದ ಛಾಯೆ ಬದಲಾದ ಹಾಗೆಯೆ, ಆಧುನಿಕತೆ ಎಂಬುದಕ್ಕೂ ಬದಲಾಗಿದೆ, ಇನ್ನೂ ಆಗಲಿದೆ. ಕಲೆಗಳಲ್ಲಾದರೂ ಹಾಗೆಯೆ - ಹೊಸತೆಂಬುದಕ್ಕೆಯೆ, ಇಂದು - ನಿನ್ನೆ - ನಾಳೆಗಳಿವೆ. ಆದರೂ, ಹೊಸತನದ, ಮೋಡರ್ನಿಟಿಯ ವೇಗ ಈಗ, ಕಳೆದ ಕೆಲವು ದಶಕಗಳಲ್ಲಿ ಬಹಳ ಹೆಚ್ಚು ಎಂಬುದೂ ನಿಜ. ಈ ಆಧುನಿಕತೆಯ ಭಯ ಮತ್ತು ಆಕರ್ಷಣೆಗಳೆಂಬ ದ್ವಂದ್ವವು ಬಹು ವಿಚಿತ್ರ. ಬಹುಶಃ ಈ ಆತಂಕ ಮತ್ತು ಮೋಹಗಳೇ ನಾವೆಲ್ಲ ಇಂತಹ ವಿಚಾರಗೋಷ್ಠಿಗಳನ್ನು ಮಾಡುವಾಗ ಅದರ ಹಿಂದೆ ಇರುವ ತಾತ್ತ್ವಿಕ ನೆಲೆಗಟ್ಟುಗಳಾಗಿವೆ.
ಎರಡು ಬಗೆ
ಆಧುನಿಕತೆ ಎಂಬುದು ಎರಡು ವಿಧವಾಗಿರುತ್ತದೆ - ವಿಚಾರ ಮತ್ತು ವಸ್ತು ಎಂಬುದಾಗಿ ಚಿಂತನದಲ್ಲಿ ಆಧುನಿಕತೆ ಎಂದರೆ - ವೈಶಾಲ್ಯ, ಹೊಸಜ್ಞಾನಗಳ ಅಧ್ಯಯನ ಮತ್ತು ಸ್ವೀಕಾರ, ನೂತನ ದೃಷ್ಟಿ, ವಿಕಾಸಮುಖಿತ್ವ, ಸುಧಾರಣ ಮನೋವೃತ್ತಿ ಇತ್ಯಾದಿ. ವಸ್ತು ಆಧುನಿಕತೆಯೆಂದರೆ ಹೊಸ ಉಡುಪುಗಳು, ವಿದ್ಯುತ್ತು, ಪ್ಲಾಸ್ಟಿಕ್, ಕಂಪ್ಯೂಟರ್, ವಾರ್ತಾಪತ್ರಿಕೆ, ಟಿ.ವಿ., ವಾಹನ ಸೌಕರ್ಯ, ನವೀನ ಔಷಧಗಳು, ಬಾಹ್ಯಾಕಾಶ ಯಾನ ಇತ್ಯಾದಿ ಇತ್ಯಾದಿ. ಇವೆರಡೂ ನೈಜ ಮತ್ತು ನಿರಂತರ. ಆದರೂ, ವಿಚಾರದ ಆಧುನಿಕೀಯಕರಣವೇ ತಾತ್ತ್ವಿಕವಾಗಿ ಹೆಚ್ಚು ಪ್ರಧಾನ, ವಸ್ತು ಆಧುನಿಕೀಯಕರಣ ಹೆಚ್ಚು ಬಾಹ್ಯ ಮತ್ತು ಎದ್ದು ಕಾಣುವಂತಹದು.
ವಿರೋಧ ಸ್ವಾರಸ್ಯ
ಯಕ್ಷಗಾನ ಮತ್ತು ಆಧುನಿಕತೆ - ಎಂದು ಹೇಳುವಾಗ, ಈ ಉಕ್ತಿಯಲ್ಲೆ ಒಂದು ಸ್ವಾರಸ್ಯಕರ ದ್ವಂದ್ವವುಂಟು. ಯಕ್ಷಗಾನವೆಂಬುದು ಅದರ ರೂಪವು ಮತ್ತು ಅದು ಅಭಿವ್ಯಕ್ತಿಸುವ, ಚಿತ್ರಿಸುವ ಕಥೆ, ವಸ್ತುಗಳೆಲ್ಲ ಪ್ರಾಚೀನ, ಪಾರಂಪರಿಕ, ಹಳತು. ಆಧುನಿಕತೆ ಎಂಬುದು ಪರಿಕಲ್ಪನೆಯಲ್ಲಿ ಹೊಸತು. ಹೀಗೆ - ಯಕ್ಷಗಾನ ಮತ್ತು ಆಧುನಿಕತೆ ಎಂಬುದರಲ್ಲಿ ಒಂದು ವಿಶಿಷ್ಟ ಮುಖಾಮುಖಿಯುಂಟು. ಹಾಗೆಂದು ಇದು ಅಸಹಜವೇನಲ್ಲ. ವಿರುದ್ಧಗಳ ಮುಖಾಮುಖಿ, ಡಯಲೆಕ್ಟ್, ಸಮ್ಮಿಳನಗಳಿಂದಲೇ ಸಾಂಸ್ಕೃತಿಕ ರೂಪ, ರೂಪಾಂತರ,
ಅರ್ಥಾಂತರಗಳೆಲ್ಲ ಜರಗುವುದಷ್ಟೇ ?


ಡಾ. ಬಿ. ಸುರೇಂದ್ರ ರಾವ್ ಅವರ ಒಂದು ಲೇಖನ 'How Modern is Modernity' ಈ ವಿಚಾರವನ್ನು ಸೊಗಸಾಗಿ ವಿಶ್ಲೇಷಿಸಿದೆ.

° ಡಾ. ಎಂ. ಪ್ರಭಾಕರ ಜೋಶಿ