ಮುಡಿ
1960ರಿಂದ 1990ರ ತನಕ ಉಚ್ಛ್ರಾಯಲ್ಲಿದ್ದ ಟೆಂಟ್ (ಡೇರೆ) ಮೇಳಗಳು, ಸದ್ಯಕ್ಕೆ
ಬಹುಶಃ ಅಸ್ತಿತ್ವದ ಸವಾಲುಗಳನ್ನು ಇದಿರಿಸುತ್ತಿವೆ. ಸಂಖ್ಯಾಬಾಹುಳ್ಳ, ಅತಿಪ್ರಸರಣ.
ಕಾಂಟ್ರಾಕ್ಟ್ ಪದ್ಧತಿ, ಬದಲಾದ ಸಾಮಾಜಿಕರ ಜೀವನ ಕ್ರಮ ಮೊದಲಾದ ಕಾರಣಗಳಿಂದಾಗಿ
ಇಡಿ ರಾತ್ರಿಯ ಆಟಗಳು ಇನ್ನು ಕೆಲವೇ ವರ್ಷಗಳಲ್ಲಿ ಅಸಾಧ್ಯವೆನಿಸಬಹುದು. ಟೆಂಟು
ಮೇಳಗಳೆ ಇಲ್ಲವಾಗಬಹುದು, ಅಥವಾ ತೀರ ಕಡಿಮೆ ಆಗಬಹುದು. ಆದರೆ, ಭಕ್ತಿ,
ಧಾರ್ಮಿಕತೆಗಳು, ದೇವರ ಆರಾಧನೆಗಾಗಿ ಆಟಗಳನ್ನಾಡಿಸುವ ದೃಷ್ಟಿ ಬಹುಕಾಲ
ಮುಂದುವರಿಯಬಹುದಾಗಿ, ಹರಕೆ ಆಟದ ಮೇಳಗಳ ಭವಿಷ್ಯವು ಸದ್ಯಕ್ಕೆ ಅಪಾಯದಲ್ಲಿಲ್ಲ.
ಹರಕೆಗಳು ಹೆಚ್ಚಾಗಿವೆ. ಹಲವು ಮೇಳಗಳಿಗೆ, ಮುಂದಿನ ಕೆಲವು ವರ್ಷಗಳ ಆಟಗಳು ಮುಂಗಡ
ಬುಕ್ ಆಗಿವೆ. ಹೀಗಿರುತ್ತ ಹರಕೆ ಆಟಗಳ ಮೇಳಗಳ ಕುರಿತು ಹೆಚ್ಚಿನ ನಿರೀಕ್ಷೆ
ನಿರ್ಮಾಣವಾಗುವುದು ಸಹಜ.
ಇದಕ್ಕೆ ಕಾರಣಗಳು ಎರಡು, ಒಂದು : ಕಲೆಯ ಉಳಿವಿನ ಹೆಚ್ಚಿನ ಹೊಣೆ ಈಗ
ಪುನಃ ಹರಕೆ ಮೇಳಗಳಿಗೆ ಬಂದಿದೆ. ಎರಡು : ಹರಕೆ ಮೇಳಗಳಿಗೆ, ಮಾರುಕಟ್ಟೆ ಒತ್ತಡಕ್ಕಾಗಿ
ಮಾಡಬೇಕಾಗಿರುವ ವ್ಯಾಪಾರಿ ಹೊಂದಾಣಿಕೆಗಳ ಅಗತ್ಯವಿಲ್ಲ. ತಮ್ಮದಾದ ಒಂದು
ರೀತಿಯನ್ನು ರೂಪಿಸಿ ಅನುಸರಿಸುವ ಸ್ವಾತಂತ್ರ್ಯ ಅವರಿಗಿದೆ.
ಇಲ್ಲಿ ಮೌಲಿಕವಾಗಿ ಗಮನಿಸಬೇಕಾದ ಒಂದು ವಿಚಾರವೆಂದರೆ ಹರಕೆ ಆಟವೆಂಬುದು,
ಆಟವನ್ನು ಒಂದು ಸೇವೆಯಾಗಿ, ನೈವೇದ್ಯವಾಗಿ, ಆರಾಧನೆಯಾಗಿ ಅರ್ಪಿಸುವ ಪರಿಕಲ್ಪನೆ.
ಇಲ್ಲಿ, ಸಂಬಂಧಪಟ್ಟ ದೇವರ ಕುರಿತು ಭಕ್ತಿ ಗೌರವಗಳಿದ್ದಂತೆಯೆ, ಯಕ್ಷಗಾನದ ಕುರಿತು,
ಅದರ ಸ್ವರೂಪದ ಭಕ್ತಿ ಪ್ರೀತಿಗಳೂ, ಬದ್ಧತೆಯೂ ಇರಬೇಕಾಗುತ್ತದೆ. ಹರಕೆಯನ್ನು
ಒಪ್ಪಿಸುವವರಿಗೆ, ಹರಕೆಯ ವಸ್ತುವಾದ ಆಟದ ಕುರಿತು ಗೌರವವು ಭಕ್ತಿಯದೆ ಅಂಗ, ಅದರ
ಮುಂದುವರಿಕೆ. ಅಂದರೆ ಕಲಾರೂಪಕ್ಕೆ ಹರಕೆದಾರನೂ, ಹರಕೆ ಮೇಳವೂ
ಬದ್ಧವಾಗಿರಬೇಕಾದುದು ನ್ಯಾಯ.
ಈ ಕುರಿತ ಒಂದು ಪ್ರಜ್ಞೆಯೂ, ನಿಶ್ಚಿತ ಧೋರಣೆಯೂ ಕಲಾತಂಡದ ಮೇಳದ
ಮೂಲಭೂತ ಅಗತ್ಯವಾಗಿರುತ್ತದೆ. ಯಕ್ಷಗಾನದ ಸೊಗಸನ್ನು, ಶೈಲಿಯನ್ನು ಉಳಿಸಿ ನಾವು
ಪ್ರದರ್ಶನ ನೀಡುತ್ತೇವೆ ಎಂಬ ಖಚಿತ ನಿಲುವು, ಮೇಳವನ್ನು ಹೊರಡಿಸುವ ಕ್ಷೇತ್ರಕ್ಕೆ
ಇರಬೇಕು. ಅದನ್ನು ಪಾಲಿಸುವ ರೀತಿಯಲ್ಲಿ ಮೇಳದ ಸಂಘಟನೆಯನ್ನು ಕ್ಷೇತ್ರವೂ, ಸಂಚಾಲಕ
ವ್ಯವಸ್ಥಾಪಕರೂ ಸೇರಿ ಅಂಗೀಕರಿಸಬೇಕು.