ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

92

ಮುಡಿ

ರಂಗಸ್ಥಳದ ರಚನೆ, ವೇಷ ವಿಧಾನ, ಹಿಮ್ಮೇಳಗಳಲ್ಲಿ ಯಕ್ಷಗಾನದ ಕಲಾಂಶಗಳನ್ನು ಉಳಿಸಿ ಪೋಷಿಸುವ ಧೈಯವನ್ನು ಮೇಳವು ಘೋಷಿತ ನಿಲುವಾಗಿ, ದೇವಾಲಯದ ಮೇಳದ ಧೋರಣೆಯಾಗಿ (Policy) ಸ್ವೀಕರಿಸಬೇಕು. ಕೆಲವು ಮೇಳಗಳು ಹೀಗೆ ಮಾಡಿಯೂ ಇವೆ. ಹೀಗಿದ್ದಾಗ ಆಟವೇ ಆರಾಧನೆ, ಪೂಜೆ. ಆಟದಲ್ಲಿ ಮತ್ತೊಂದು ಆರಾಧನೆಯಾಗಿ ವಾದ್ಯ ವಾಲಗ ಸಿಡಿಮದ್ದುಗಳಿಗೆ ಅವಕಾಶವಿರುವುದೆ ಇಲ್ಲ. ಅಂದರೆ ಆಟವೆಂಬುದು ಯಕ್ಷಗಾನವಾಗಿ ಒಂದು ಆರಾಧನೆ. "ಅದು ಹೀಗೆ, ನಮ್ಮ ಮೇಳದ ಧೋರಣೆ ಇದು" ಎಂದು ಕ್ಷೇತ್ರವು ಘೋಷಿಸಿದರೆ, ಹರಕೆದಾರನಿಗೆ, ಆಟದಲ್ಲಿ ಯಕ್ಷಗಾನೇತರ ಅಂಶಗಳನ್ನು ತಂದು ತುರುಕಲು ಸಾಧ್ಯವಾಗುವುದಿಲ್ಲ. ಯಕ್ಷಗಾನದ ಕುರಿತು ಪ್ರೀತಿ, ಗೌರವ ಇರುವ ವಿವೇಕಿಗಳಾದ ಸುಜ್ಞರಾದ ಹರಕೆದಾರರು ಈ ಧೋರಣೆಯನ್ನು ಒಪ್ಪುತ್ತಾರೆ ಎಂದು ನಿರೀಕ್ಷಿಸಬಹುದು.
ಇದಕ್ಕೆ ಕ್ಷೇತ್ರಗಳು ಸಂಕಲ್ಪಸಬೇಕು. ಖಚಿತ ಕಲಾಧೋರಣೆಯನ್ನು, ತಜ್ಞ ಸಮಾಲೋಚನೆಯಿಂದ ರೂಪಿಸಬೇಕು. ಇದು ನಿಯಮವಾಗಿರಬೇಕು. ಇದೇನೂ ಹೇರುವಿಕೆ ಅಲ್ಲ. ದೇವಸ್ಥಾನಗಳಲ್ಲಿ ಸೇವೆ ಹರಕೆಗಳಿಗೆ ನಿಯಮಗಳಿಲ್ಲವೆ ? ಪಂಚಕಚ್ಚಾಯ, ಪಾನಕ ಸೇವೆಗೆ ಬಿಸ್ಕಿಟ್, ಕೋಲಾಗಳನ್ನು ನೀಡಿದರೆ ಒಪ್ಪುತ್ತಾರೆಯೆ? ಹಾಗೆಯೇ, ಆಟವೂ ದೇವಸ್ಥಾನದ ಒಂದು ಸೇವಾ ವಿಭಾಗದ ವಿಷಯ. ಅದಕ್ಕೆ ಕ್ಷೇತ್ರದ ಕಲಾಧೋರಣೆಯು ಮಾರ್ಗದರ್ಶಿ ಸೂತ್ರವಾಗಿರಬೇಕಾದುದು ಅಗತ್ಯ ಮತ್ತು ಸಹಜ. ಕ್ಷೇತ್ರವೂ ಹರಕೆದಾರನೂ ಅದಕ್ಕೆ ಬದ್ಧರಾಗಿರಬೇಕಷ್ಟೆ ?
ವಿರೂಪಗೊಳ್ಳುತ್ತಿರುವ ಕಲಾರೂಪದ ಉಳಿಸುವಿಕೆಗೆ, ಆ ಬಳಿಕ ಬೆಳೆಸುವಿಕೆಗೆ ಇದೊಂದು ದಾರಿಯಾಗಬಹುದು.

0 * ಡಾ. ಎಂ. ಪ್ರಭಾಕರ ಜೋಶಿ