ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

101

ನಿರ್ಧಾರವೆನಿಸದು. ಕೃಷಿ ಪ್ರಧಾನ ಗ್ರಾಮೀಣ ಜೀವನದಿಂದ, ಉದ್ಯಮ ಪ್ರಧಾನ ನಗರೀಕರಣ, ಅರೆನಗರೀಕರಣಕ್ಕೆ ಬದುಕು ಹೊರಳುತ್ತಿದೆ. ಅದರ ಅವಶ್ಯಕತೆಗಳನ್ನು ಹೊಂದಿ, ರಂಜನಾ ಮಾಧ್ಯಮಗಳು, ಕಲಾರೂಪಗಳು ಮಿತಿಗಳನ್ನು ಹಾಕಿಕೊಳ್ಳಲೇಬೇಕಾಗುತ್ತದೆ.
ಮಿತಕಾಲಾವಧಿಯ ಪ್ರದರ್ಶನವು ಕಲೆಯ ಗುಣವರ್ಧನೆಗೆ ಪೂರಕ. ಅನವಶ್ಯಕವಾದ ಬೆಳೆಯುವಿಕೆ, ಪೂರಣ (Padding)ಗಳನ್ನು ಕಡಿಮೆ ಮಾಡಿ, ರಸಾತ್ಮಕ ಭಾಗಗಳನ್ನು ಕೇಂದ್ರೀಕರಿಸಿ, ಯಕ್ಷಗಾನದ ಕಲಾಸೌಂದರ್ಯಕ್ಕೆ ಯಾವುದೇ ಬಾಧಕವಿಲ್ಲದೆ ಪ್ರದರ್ಶಿಸಬಹುದು. ಇದರಿಂದ ವೃಥಾ ಕಾಲಹರಣದ ಭಾಗ ತಪ್ಪಿ, ಕಲಾವಿದರಿಗೂ ಹೆಚ್ಚು ಜವಾಬ್ದಾರಿ, ವಿಶ್ರಾಂತಿ, ಎರಡೂ ಒದಗುತ್ತವೆ.
ನಾವೆಷ್ಟೆ ವ್ಯಾಮೋಹಪಟ್ಟರೂ ಮೂರು ಗಂಟೆಗಳ ಕಾಲ ಜರಗುವ ಸಭಾಲಕ್ಷಣವೆಂಬ ಪೂರ್ವ ರಂಗ ಈಗ ರಂಗದಲ್ಲಿ ರಂಜಿಸೀತೆ ? ಕಟ್ಟು ಹಾಸ್ಯ, ದವಲತ್‌ಜ್ಯಾದಾ*, ಮೊದಲಾದುವು ಮರೆಯಾಗಿವೆ. ಅವನ್ನು ಪುನರುಜ್ಜಿವನ ಗೊಳಿಸಲಾದೀತೆ? ಆದರೂ ಬೇಕೆ? ಎಂಬುದೂ ವಿಚಾರಣೀಯ, ರಂಗಸ್ಥಳ, ಚೌಕಿ, ಬಣ್ಣಗಳು, ಬೆಳಕು, ಆಸನ ವ್ಯವಸ್ಥೆಗಳು ಬದಲಾಗುತ್ತ ಬಂದಿಲ್ಲವೆ ? ಅದೇ ರೀತಿ ದೀರ್ಘವಾದ ಅನೇಕ ಭಾಗಗಳು ಹೃಸ್ವಗೊಳ್ಳಲೇ ಬೇಕು. ಸಭಾಲಕ್ಷಣ ಒಡ್ಡೋಲಗ, ವಿವಿಧ ಕುಣಿತಗಳನ್ನು ಸಾಂದ್ರವಾಗಿ, ಅಚ್ಚುಕಟ್ಟಿಗೆ ತಂದು, ಸಂಕ್ಷೇಪಿಸಿ ಸೊಗಸಾಗಿ ಪ್ರದರ್ಶಿಸಬಹುದು. ಹಾಗೆ ಮಾಡಿದ್ದುಂಟು. ಶ್ರೀ ಇಡಗುಂಜಿ ಮೇಳವು 3-4 ಗಂಟೆಗಳ ಪ್ರದರ್ಶನಗಳನ್ನು ಪರಂಪರೆಯ ಸೌಂದರ್ಯಕ್ಕೆ ಬಾಧಕವಿಲ್ಲದೆ, ಮಾತ್ರವಲ್ಲ ಉಜ್ವಲಗೊಳಿಸಿ, ಪ್ರದರ್ಶಿಸುತ್ತಿಲ್ಲವೇ ? ಅದಕ್ಕೆ ಯೋಚನೆ, ಯೋಜನೆಗಳು ಬೇಕು, ಕಾವ್ಯರೂಪಬೇಕು, ಅಷ್ಟೆ.
ಇನ್ನೊಂದು ವಿಚಾರ - ಸಹಜವಾಗಿಯೇ ಸುಮಾರು ಮೂರು ಗಂಟೆಗಳಿಗೆ ಹೊಂದುವ ಕಥಾಭಾಗಗಳೇ ಇವೆಯಲ್ಲ ? ಉದಾ: ಭೀಷ್ಮ, ಪರ್ವ, ಅಭಿಮನ್ಯು, ಗದಾಪರ್ವ
, ಇದು ಹಿಂದಿನ ನಾಟ್ಯಮೇಳದ ಒಂದು ಕ್ರಮ. ಸಾರ್ವಜನಿಕ ಪ್ರದರ್ಶನ ಸಂದರ್ಭದಲ್ಲಿ ಒಬ್ಬನು ನೃತ್ಯಗಾತಿಗೆ ಹಣವನ್ನು ನೀಡಿ, 'ಇಂತಹವರಿಗೆ ದೌಲತ್ ಜ್ಯಾದಾ (ತಾಜಾ)' ಎಂದು ಹೊಗಳಿಸಿ ನೃತ್ಯ ಮಾಡಿಸುತ್ತಾನೆ. ಆಗ ಅವನೂ ಹಾಗೆಯೇ ಸೇವೆ ಮಾಡಿಸಬೇಕೆಂದು ಸಾಮಾಜಿಕ ಪ್ರತಿಷ್ಠೆಯ ರೂಢಿ ಇದು ಸೇರಿ ನರ್ತಕರಿಗೆ ಗಳಿಕೆ. ಇದು ಬಯಲಾಟದ ಪೂರ್ವರಂಗದ ಸ್ತ್ರೀವೇಷಗಳ ಕುಣಿತದಲ್ಲೂ, ಅನುಕರಣೆಯಿಂದ ಬಂದು ಸೇರಿತ್ತು.

ಡಾ. ಎಂ. ಪ್ರಭಾಕರ ಜೋಶಿ