ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

110

ಮುಡಿ

ತೆಂಕು ಬಡಗು, ದ್ವಂದ್ವ
ತೆಂಕು ಬಡಗುತಿಟ್ಟುಗಳ ಮಿಶ್ರಣದ ಪ್ರದರ್ಶನ ಇನ್ನೊಂದು ವಿಶಿಷ್ಟ ಪ್ರಯೋಗ. ಪೊಳಲಿ ರಾಜರಾಜೇಶ್ವರಿ ಮೇಳ, ಕರ್ನಾಟಕ ಕಲಾವಿಹಾರ ಮೇಳಗಳು ಈ ಪ್ರಯೋಗವನ್ನಾರಂಭಿಸಿದುವು (ಸು. 1960). ಅರ್ಧರಾತ್ರಿ ತೆಂಕು, ಅರ್ಧರಾತ್ರಿ ಬಡಗು ಅಥವಾ ಮಿಶ್ರಿತ ಪ್ರದರ್ಶನ (ಪಾಂಡವ ಕೌರವ, ದೇವ -ದಾನವ ಪಾತ್ರಗಳು ಇತ್ಯಾದಿ)ಗಳು ನಡೆಯುತ್ತಿದ್ದುವು. ಈ ಪ್ರಯೋಗವು ಮುಂದೆ ಮೇಳಗಳ ಜೋಡಾಟವಾಗಿ, ಕೂಡಾಟವಾಗಿ ಮತ್ತು ಮಳೆಗಾಲದ ಪ್ರದರ್ಶನಗಳಲ್ಲೂ ಮುಂದುವರಿಯಿತು.
ದ್ವಂದ್ವ ಹಿಮ್ಮೇಳ 1970ರ ಬಳಿಕ ಬಳಕೆಗೊಂಡ ಒಂದು ಪ್ರಯೋಗ, ಇಬ್ಬರು ಭಾಗವತರು ಪದ್ಯಗಳನ್ನು ಹಂಚಿಕೊಂಡು ಅಥವಾ ಒಟ್ಟಾಗಿ ಹಾಡುವುದು ಇದರ ಕ್ರಮ. ಹೀಗೆಯೇ ಹಿಮ್ಮೇಳದ ಜುಗಲ್‌ಬಂದಿ ಕೂಡ ಇದೆ. 3-4 ಮದ್ದಳೆಗಳನ್ನು ಬಾರಿಸುವುದು ಇತ್ಯಾದಿಗಳೂ ಹಿಮ್ಮೇಳದ ಹೊಸ ಪ್ರಯೋಗಗಳು,
ಇತರ
ಮೇಳಗಳ ಸಂಘಟನೆಯಲ್ಲೂ ಪ್ರಯೋಗಗಳಾಗಿವೆ. ಪ್ರೇಕ್ಷಾಗೃಹ ರಚನೆ, ಆಸನ ವ್ಯವಸ್ಥೆ, ದೀಪ ವ್ಯವಸ್ಥೆ, ಚೌಕಿ (ಬಣ್ಣದ ಮನೆ), ಪ್ರಚಾರ ವಿಧಾನ, ಕ್ಯಾಂಪು, ಕಾಲಾವಾಧಿ ಮುಂತಾದುವುಗಳಲ್ಲಿ ಯಕ್ಷಗಾನವು 1930 ರಿಂದ ಈ ಕಾಲಕ್ಕೆ ದೊಡ್ಡ ಬದಲಾವಣೆಗಳನ್ನು ಕಂಡಿದೆ. ನವೀನಪ್ರಯೋಗಗಳಿಂದ ಈ ಅಂಗಗಳಲ್ಲಿ 'ಗುರುತು ಸಿಗದಷ್ಟು' ಎಂಬಂತಹ ಬದಲಾವಣೆಗಳಾಗಿವೆ. ಅಂತೆಯೇ ಮಹಿಳಾ ಯಕ್ಷಗಾನವು ಜಾಗೃತಿಯ ಒಂದು ರೂಪವಾಗಿ ಗಮನಾರ್ಹವಾಗಿದೆ. ಯಕ್ಷಗಾನ ಬಯಲಾಟ ಸ್ಪರ್ಧೆ, ತಾಳಮದ್ದಲೆ ಸ್ಪರ್ಧೆ, ಅಂತ್ಯಾಕ್ಷರಿ ಸ್ಪರ್ಧೆ, ಯಕ್ಷಗಾನ ಕ್ವಿಜ್‌ಗಳು ಆಸಕ್ತಿ ನಿರ್ಮಾಣದ ವಿವಿಧ ಮುಖಗಳು. ಬಹುಶಃ ಗುರು ತೋನ್ಸೆ ಕಾಂತಪ್ಪ ಮಾಸ್ತರ್ ಅವರು ಮತ್ತು ಕಲಾವಿದ ಮಟ್ಟಿ ಸುಬ್ಬರಾವ್ ಅವರು ಮಕ್ಕಳ ಯಕ್ಷಗಾನದ ಮೊದಲಿಗರು. ಇದರಲ್ಲಿ ಶ್ರೀ ಸುಬ್ಬರಾವ್ ಅವರು ರೂಪಿಸಿ ಆಡಿಸಿದ ಮಕ್ಕಳ ಯಕ್ಷಗಾನಗಳಲ್ಲಿ ವಸ್ತುವೂ ಮಕ್ಕಳ ಕತೆಗಳೆ - ಉದಾ: ಪಂಚತಂತ್ರ, ರಾಜನೂ ಹಕ್ಕಿಯೂ ಇತ್ಯಾದಿ. ಮುಖ್ಯವಾಗಿ ಸಾಲಿಗ್ರಾಮ ಮಕ್ಕಳ ಮೇಳವೂ, ಇತರ ಕೆಲ ತಂಡಗಳೂ ರೂಪಿಸಿದ ಮಕ್ಕಳ ಯಕ್ಷಗಾನ ಒಂದು ಯಶಸ್ವೀ ಪ್ರಯೋಗವಾಗಿ ಬೆಳೆದು ಬಂದಿದೆ.

ಡಾ. ಎಂ. ಪ್ರಭಾಕರ ಜೋಶಿ