ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೫೫

ಅರ್ಹತೆ ಪಡೆದಿವೆ. ಅಂದರೆ- ಅರ್ಥದಾರಿಯ ವ್ಯಕ್ತಿತ್ವ ಮತ್ತು ಪಾತ್ರಧಾರಿತ್ವಗಳ ಸಂಬಂಧಗಳ ವಿಶಿಷ್ಟತೆಯು, ತಾಳಮದ್ದಳೆ ಎಂಬ ರಂಗಭೂಮಿಯ ಸ್ವರೂಪದಲ್ಲೇ ಇದೆ ಎನ್ನಬಹುದು. ಕಲಾವಿದನಿಗೆ ಗರಿಷ್ಟ ಸ್ವಾತಂತ್ರ್ಯವೂ, ಹೊಣೆಗಾರಿಕೆಯೂ ಇರುವ ಈ ರಂಗದಲ್ಲಿ ಪಾತ್ರಧಾರಿಯ ವ್ಯಕ್ತಿತ್ವದ ಪ್ರಭಾವವು ಪಾತ್ರಸೃಷ್ಟಿಯ ಮೇಲೂ, ಒಟ್ಟು ಪ್ರದರ್ಶನದ ಮೇಲೂ ಆಗುವುದು ಸಹಜವೇ ಆಗಿದೆ.

ನಾಟಕಗಳಲ್ಲಿ ವಸ್ತುಪ್ರಧಾನ, ಸಂಗೀತ ಪ್ರಧಾನ, ಆಂಗಿಕಾಭಿನಯ ಪ್ರಧಾನ, ತಂತ್ರಪ್ರಧಾನ, ವಾಕ್‌ಪ್ರಧಾನ ಎಂದೆಲ್ಲ ವಿಭಾಗಿಸಬಹುದು. ಅಂತೆಯೇ ಪ್ರದರ್ಶನದಲ್ಲಿ ನಿರ್ದೇಶಕನ ನಾಟಕ, ಲೇಖಕನ ನಾಟಕ, ನಟನ ನಾಟಕ ಎಂದೂ ವಿಭಜಿಸಬಹುದಾಗಿದೆ. ಅಥವಾ ಒಂದೇ ನಾಟಕ ವನ್ನು ಈಯೆಲ್ಲ ರೀತಿಗಳಲ್ಲಿ ಪ್ರದರ್ಶಿಸಬಹುದು. ಈ ನೆಲೆಯಲ್ಲಿ ನೋಡಿದಾಗ ತಾಳಮದ್ದಳೆಯೆಂಬುದು ನಟಪ್ರಧಾನ ನಾಟಕ (actor dominent drama)ವಾಗಿದೆ. ಲಿಖಿತ ಪ್ರಸಂಗವೆಂಬ ಸ್ಥಿರ ಪಾಠವೂ, ಅದರ ಭಾಗವತಿಕೆಯೆಂಬ ಹಿನ್ನೆಲೆಯು ಒದಗಿಸುವ ವ್ಯಾಪ್ತಿಯೂ ಸ್ಥೂಲ ಆಧಾರಮಾತ್ರವಾಗಿದ್ದು, ಅದರಿಂದ ಬೆಳೆಯುವ ಮಾತಿನ ನಾಟಕವು ಅಕ್ಷರಶಃ ಸಹಸ್ರಶೀರ್ಷ, ಸಹಸ್ರಪಾತ್, ಸಹಸ್ರಾಕ್ಷವಾದ ವಿಶ್ವ ರೂಪವೇ. ಪ್ರಸಂಗವನ್ನು ಓದಿದರೆ, ಅದರ ಹಾಡುಗಳನ್ನು ಕೇಳಿದರೆ- ಅದರಿಂದ ನಿರ್ಮಾಣವಾಗಬಹುದಾದ ತಾಳಮದ್ದಳೆಯೆಂಬ ನಿತ್ಯಚರ ವಾದ, ಕಲಾಕೃತಿಯ ಕಲ್ಪನೆಯೂ ಸಹ ಬರಲಾರದಷ್ಟು ಪ್ರಸಂಗ ಪಾಠಕ್ಕೂ, ಅರ್ಥವೆಂಬ ಪ್ರಹಸನ ಪಾಠ (Performance Text)ಕ್ಕೂ ಅಂತರವಿದೆ. ಇದು ಲಿಖಿತ ನಾಟಕ ಮತ್ತು ರಂಗನಾಟಕಕ್ಕಿರುವ ಅಂತರ ಕ್ಕಿಂತ ಬಹಳಷ್ಟು ಹೆಚ್ಚು ಮತ್ತು ಬೇರೆಯಾದ ವ್ಯತ್ಯಾಸ. ಇಲ್ಲಿ ಒಳ್ಳೆಯ ಕಲಾವಿದನು ಪ್ರಸಂಗವನ್ನು ಮೀರಿ ಬೆಳೆಯಬೇಕು. ಅತ್ಯತಿಷ್ಟ ದಶಾಂಗುಲನಾಗಿ ಅಭಿವ್ಯಕ್ತಿಸಬೇಕು. ಇದು ಅವನ ಸಾಮರ್ಥ್ಯದ ಪ್ರಶ್ನೆ. ಇಲ್ಲಿ ಒಬ್ಬ ಕಲಾವಿದನು ಮತ್ತು ಹಲವು ಕಲಾವಿದರು ಸಿದ್ಧಪಡಿಸುವ ಪಾಠಗಳ ಸಾಧ್ಯತೆಗಳು ಅನಂತ. ಇವುಗಳ ವಿವೇಚನೆಯಲ್ಲಿ ಇದು ಉಚಿತ-ಇದು ಅನುಚಿತ; ಇದು ಸುಂದರ-ಇದು ಅಸುಂದರ ಎನ್ನುವ ವಿಮರ್ಶೆಗೆ ಅವಕಾಶವಿದ್ದರೂ, ಪರಮಾರ್ಥತಃ ಎಲ್ಲ ಪಾಠಗಳೂ ಸರಿ