ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ನಟ-ವ್ಯಕ್ತಿ ಸಂಬಂಧ, ಪಾತ್ರ ಸೃಷ್ಟಿ / ೫೯

ಅರ್ಥಗಾರಿಕೆ ಎಂಬುದಕ್ಕೆ ಹಾಸ್ಯಗಾರನ ಮಾತುಗಾರಿಕೆಯು ಮಾಪಕವಲ್ಲ (standard). ಅದು ಪ್ರತ್ಯೇಕವಾದದ್ದು ಎಂಬುದನ್ನು ಗಮನಿಸಬೇಕು.

ಹಿಂದಿನ ಅರ್ಥಗಾರಿಕೆಯಲ್ಲಿ ಎದ್ದು ತೋರುವ ಇನ್ನೊಂದು ಅಂಶ ವೆಂದರೆ ವಾದ-ಸಂವಾದಗಳಲ್ಲಿ, ನಾಯಕ ಪಾತ್ರ ಅಥವಾ ಪ್ರಸಂಗದಂತೆ ಗೆಲ್ಲಬೇಕಾದ ಪಾತ್ರದ ಮಾತುಗಳು ಮುಂದಾಗುವಂತೆ, ಮೇಲೆ ನಿಲ್ಲು ವಂತ ಎಲ್ಲರೂ ಎಚ್ಚರ ವಹಿಸುತ್ತಿದ್ದುದು. ಇದು ಸ್ವಲ್ಪ ಸರಳಗೊಳಿಸಿ ಹೇಳಬೇಕೆಂದರೆ, ಪ್ರಸಂಗದ ಕರ್ತೃವಿನ ಪರವಾದ, ನಾಯಕ ಪರವಾದ ಅರ್ಥಗಾರಿಕೆ. ಕಲೆಯ ಬಗೆಗಿನ ತಿಳುವಳಿಕೆ, ಪ್ರೇಕ್ಷಕ ನಿರೀಕ್ಷೆಗಳೂ ಅದೇ ರೀತಿಯಲ್ಲಿದ್ದುದು ಇದಕ್ಕೆ ಕಾರಣವಿರಬಹುದು. ಕೃಷ್ಣನನ್ನೋ, ರಾಮ ನನ್ನೋ ಇಕ್ಕಟ್ಟಿಗೆ ಸಿಕ್ಕಿಸುವಂತಹ ಪ್ರಶ್ನೆ, ವಾದಗಳಿಗೆ ಹಿಂದೆ ಇದ್ದಂತಹ ಆಕ್ಷೇಪ ಈಗ ಇಲ್ಲವೆನ್ನುವುದನ್ನು ಗಮನಿಸಿದರೆ ಇದು ಸ್ಪಷ್ಟ ವಾಗುತ್ತದೆ.

ಅರ್ಥಗಾರಿಕೆಯ ಸ್ವರೂಪದಲ್ಲೂ, ಅರ್ಥದಾರಿಯ ವ್ಯಕ್ತಿತ್ವ ಮತ್ತು ಪಾತ್ರಾಭಿವ್ಯಕ್ತಿಗಳೊಳಗಿನ ಸಂಬಂಧದಲ್ಲೂ, ೧೯೩೦ರ ದಶಕದಿಂದ ಹಲವು ಬದಲಾವಣೆಗಳಾದುವು. ಪ್ರಾಯಶಃ ಈ ಬದಲಾವಣೆಗಳ ಬೀಜ ರೂವಗಳು ಇನ್ನೂ ಮೊದಲೇ ಕಾಣಿಸಿಕೊಂಡಿರಬೇಕು. ಈ ಘಟ್ಟದಲ್ಲಿ- ಅರ್ಥ ಮಾತಾಡುವಿಕೆಗೆ ವಿದ್ವತ್ತು, ತರ್ಕಪಟುತ್ವಗಳ ಆವಶ್ಯಕತೆ ಹೆಚ್ಚಾಗುತ್ತ, ಅದರ ಮಹತ್ವ ಇಂದಿಗೂ ಮುಂದುವರಿದಿದೆ. ಹೀಗಾಗುತ್ತ ಬಂದ ಹಾಗೆ, ಅರ್ಥದಾರಿಯ ವ್ಯಕ್ತಿತ್ವ, ಸ್ವಂತಿಕೆಗಳು ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದುವು. ಅಭಿನಯವೆಂದರ ನಟನ ವ್ಯಕ್ತಿತ್ವದ ಹೊರಚಾಚುವಿಕೆ ಎಂಬ ಮಾತಿದೆ. ಅಂತಹ ವ್ಯಕ್ತಿತ್ವವು ನೈಜವಾಗಿರ ಬಹುದು, ಅಥವಾ ಮಾನಸಿಕವಾಗಿ ಆರೋಪಿತವಿರಬಹುದು. (ಉದಾ : ದೌಷ್ಟ್ಯದ ಅಭಿನಯ; ಬಕಾಸುರನ ಶೋಷಕ ವ್ಯಕ್ತಿತ್ವ), ಈ ಚಾಚುವಿಕೆ (extention)ಯ ಅನ್ವಯವು ಹೆಚ್ಚಾದಂತೆ, ಸ್ವಾಭಾವಿಕವಾಗಿಯೇ ನಟ ಮತ್ತು ಪಾತ್ರಗಳ ಏಕೀಕರಣವು ಕಡಿಮೆಯಾಗಿ, ದೂರವು ಸಾಧಿತ ವಾಯಿತು. ಇದರಿಂದಾಗಿ ಅರ್ಥಗಾರಿಕೆಗೂ, ಪ್ರಸಂಗದ ಪದ್ಯಗಳಿಗೂ ಇರುವ ಸಂಬಂಧವು ತೀವ್ರವಾದ ಮರುಪರಿಶೀಲನೆಗೆ ಒಳಗಾಗ ಬೇಕಾಯಿತು.