ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೯೧

ಅರ್ಥವತ್ತಾಗಿ ಪ್ರವರ್ತಿಸಲು ಸಾಧ್ಯವಾಗಿದೆ ಎಂದು, ವಿಮರ್ಶೆಯನ್ನು ಓದಿದವನಿಗೆ ಅನ್ನಿಸಬೇಕು. ಅಲ್ಲವಾದರೆ, ಈ ವಿಮರ್ಶೆ ಹೇಳುತ್ತಿರುವ ವಿಚಾರ ಸೂಕ್ತವಾಗಿಲ್ಲ. ಅದು ಹಾಗಲ್ಲ, ಹೀಗೆ ಎಂದು ಆತ ತನ್ನಲ್ಲ ಸಂವಾದಿಸಲು ಸಾಧ್ಯವಾಗಬೇಕು. ನಿಲುಮೆಗಳನ್ನು ತಳೆಯುವ ಅಥವಾ ನಿರಾಕರಿಸುವ, ಭಿನ್ನಾಭಿಪ್ರಾಯಗಳನ್ನು, ಚರ್ಚೆಯನ್ನು ಪ್ರಚೋದಿಸು ವುದೂ ವಿಮರ್ಶೆಯ ಒಂದು ಕೆಲಸವೇ ಆಗಿದೆ.

ಎರಡು ಬಗೆ

ಕಲೆಗೆ, ಸಾಹಿತ್ಯಕ್ಕೆ ಯಾ ಯಾವುದೇ ಪ್ರಕಾರಕ್ಕೆ ಸಂಬಂಧಿಸಿದ ವಿಮರ್ಶೆಯಲ್ಲಿ ಎರಡು ಪ್ರಕಾರಗಳಿರುತ್ತವೆ. ಒಂದು ಕಲೆಯೆಂದರೇನು? ಅದು ಏನನ್ನು ಸಾಧಿಸಬೇಕು? ಅದರ ಸ್ವರೂಪ, ಸಾಧನ ಸಾಮಗ್ರಿ ಯಾವುದು? ಕಲಾಕೃತಿ ನಿರ್ಮಾಣ ಹೇಗೆ ಸಂಭವಿಸುತ್ತದೆ? ಅದರ ಹಿಂದಿನ ಸಾಮಾಜಿಕ, ಸಾಂಸ್ಕೃತಿಕ ಪ್ರೇರಣೆಗಳು ಯಾವುವು? ಕಲೆ ಯೊಂದರ ರಚನಾನಿಯಮಗಳು, ಸ್ವರೂಪ, ಚರಿತ್ರೆಗಳು ಪ್ರಾವೀಣ್ಯ, ಅಭಿವ್ಯಕ್ತಿ ವಿಧಾನ ವೈಶಿಷ್ಟ್ಯ, ಸೌಂದಯ್ಯ ವಿಚಾರ- ಇವನ್ನೆಲ್ಲ ವಿವರಿಸುವ ತಾತ್ವಿಕ ವಿಮರ್ಶೆ. ಇದು 'ಥಿಯರಿ'. ಎರಡು : ತಾತ್ವಿಕ ವಿಮರ್ಶೆಯನ್ನು ಕಲಾಕೃತಿಗೆ, ಪ್ರದರ್ಶನಗಳಿಗೆ ಮತ್ತು ಜೀವಂತವಾಗಿ ಸಂಭವಿಸುತ್ತಿರುವ ವಿದ್ಯಮಾನಗಳಿಗೆ ಅನ್ವಯಿಸುವ ಪ್ರಾಯೋಗಿಕ ವಿಮರ್ಶೆ ಅಥವಾ ಆನ್ವಯಿಕ ವಿಮರ್ಶೆ, ಇವೆರಡೂ ಪ್ರಕಾರಗಳಿಗೂ ಮಹತ್ವವುಂಟು. ಮತ್ತು ಇವು ರಚಿತವಾಗುವಾಗ ಪೂರ್ತಿ ಪ್ರತ್ಯೇಕವಲ್ಲ. ಆನ್ವಯಿಕ ವಿಮರ್ಶೆ, ತಾನೇ ತಾತ್ವಿಕ ವಿಮರ್ಶೆಯನ್ನು ಬೆಳೆಸುತ್ತ ಇರುತ್ತದೆ.

ವಿಮರ್ಶೆಯೆಂದರೆ, ಒಂದು ಬಗೆಯಿಂದ ಬೆಲೆಕಟ್ಟುವ ಕೆಲಸ. ಅಂದರೆ, ಗುಣದೋಷಗಳ ವಿವೇಚನೆ ಅದರ ಒಂದು ಅಂಗ, ಮುಖ್ಯ ಅಂಗ. ಆದರೆ; ಅದೇ ವಿಮರ್ಶೆಯಲ್ಲ. "ಅರ್ಥಮಾಡಿಕೊಳ್ಳುವುದು, ಅರ್ಥಮಾಡಿಕೊಳ್ಳಲು ನೆರವಾಗುವುದು" ಮುಖ್ಯ, ಗುಣದೋಷಗಳ ಪಟ್ಟಿ ಮಾಡುವುದಾಗಲಿ, ತೀರ್ಮಾನ ಕೊಡುವ ಶೈಲಿಯ, ಜಜ್‌ಮೆಂಟ್‌ ಆಗಲಿ- ವಿಮರ್ಶೆಯ ಸರ್ವಸ್ವವಲ್ಲ. ವಿಮರ್ಶಕನು ಪ್ರವಾದಿಯಂತೆ, ಉಪದೇಶಕನಂತೆ: ಬರೆಯುವ, ಹೇಳುವ ಕೆಲಸಕ್ಕಿಂತ ಗಟ್ಟಿಯಾದ ಸೈದ್ಧಾಂತಿಕ ನೆಲೆಯಲ್ಲಿ, ಕಲಾಕೃತಿಯ ಕುರಿತು ತಾನು ಸ್ಪಂದಿಸುವ ರೀತಿಯನ್ನು ಮಂಡಿಸಬೇಕು. ಕಲೆಗೆ ಸ್ಪಂದಿಸುವುದು ವಿಮರ್ಶೆಯ ಮುಖ್ಯ ಸ್ವರೂಪ ಮತ್ತು ಸ್ವಧರ್ಮ.

31810

NDA DASA COLLE SURATKA