೧೦೦ | ವಾಗರ್ಥ
ಕಲೆಯು ನಿಂತ ನೀರಾಗಬೇಕೆ?" ಎಂಬ ಗಂಭೀರ ಪ್ರಶ್ನೆಗಳನ್ನು ಕೇಳುವುದೂ ಹಾಸ್ಯಾಸ್ಪದವಾಗುತ್ತದೆ.
ಸಂಶೋಧನೆಯು ನೇರವಾಗಿ ವಿಮರ್ಶೆಯ ಅಂಗವಲ್ಲವಾದರೂ, ಸಂಶೋಧನೆಯ ನೆರವು ವಿಮರ್ಶೆಗೆ ಬೇಕು. ಕಲೆಯ ವಿವೇಚನೆ, ಅದರ ಬಗೆಗೆ ಅಭಿಪ್ರಾಯ ನೀಡಬೇಕಾದರೆ, ಅದರ ಚರಿತ್ರೆ, ಬೆಳವಣಿಗೆಯ ಹಂತಗಳು, ಅದು ಸ್ವೀಕರಿಸುವ ಪ್ರಭಾವಗಳು- ಇವನ್ನು ಸ್ಥೂಲವಾಗಿ ಯಾದರೂ ತಿಳಿದರೆ ವಿಮರ್ಶೆಗೆ ಆಳ ಒದಗುತ್ತದೆ. "ಹೀಗಿರಬೇಕು” ಎನ್ನುವಾಗ, ಹೇಗಿತ್ತು, ಹೇಗೆಲ್ಲ ಇತ್ತು- ಎಂಬುದೂ ತಿಳಿದಿರಬೇಕು. ಕಲೆಯ ಇತಿಹಾಸ, ಪರಿಕಲ್ಪನೆಗಳ ಹಿನ್ನೆಲೆಗಳು ನಮ್ಮ ಪೂರ್ವಗ್ರಹ ಗಳನ್ನು ನಿವಾರಿಸಿ, ದೃಷ್ಟಿಗೆ ವೈಶಾಲ್ಯವನ್ನು ಒದಗಿಸುತ್ತವೆ. ಸಮಕಾಲೀನ ರಂಗವನ್ನಷ್ಟೆ ನೋಡಿ ವಿಮರ್ಶಿಸಿದರೆ ಸಮಗ್ರವಾಗಲಾರದು. ಇಂದು ಕಲೆಯ ಕುರಿತು ನಾವು ಮಾಡಿರುವ ವಿವೇಚನೆಗಳು, ತೀರ್ಮಾನಗಳು- ಸಂಶೋಧನೆಯ ಬೆಳಕಿನಲ್ಲಿ ಬದಲಾಗಬಹುದು. ಒಂದೇ ಉದಾಹರಣೆ ಯನ್ನು ನೋಡೋಣ. "ಯಕ್ಷಗಾನ ಕಲೆಯು ಭಕ್ತಿಪ್ರಚಾರಕ್ಕಾಗಿ ಹುಟ್ಟಿದ್ದು" ಎಂಬ ಒಂದು ಜನಪ್ರಿಯವಾದ ಅಭಿಪ್ರಾಯವಿದೆಯಷ್ಟೆ? ಆದರೆ, ಅದು ಹುಟ್ಟಿದ್ದು ಭಕ್ತಿಪ್ರಚಾರಕ್ಕೆಂದೋ ಅಥವಾ ಬೇರಾವುದೋ ಸಂದರ್ಭದಲ್ಲಿ ಹುಟ್ಟಿದ ಒಂದು ಕಲೆ ಅಥವಾ ಹಲವು ಕಲೆ, ಆಚರಣೆ ಗಳು ಸೇರಿ, ರಂಗಪ್ರಕಾರವಾಗುತ್ತ, ನಂತರ ಭಕ್ತಿಯ ಆಶಯವನ್ನು ಅದು ಅಂಗೀಕರಿಸಿದುದೊ?- ಎಂಬ ವಿಚಾರ. ಇದನ್ನು ಯಕ್ಷಗಾನಕ್ಕೆ ಸಂಬಂಧಿಸಿದ ಮಾತ್ರವಲ್ಲ, ಒಟ್ಟಾರೆಯಾಗಿ ನಮ್ಮ ಸಂಸ್ಕೃತಿಯ ಇತಿಹಾಸದ ಬೆಳಕಿನಲ್ಲಿ ನೋಡಬೇಕಾಗುತ್ತದೆ, ನಾವು, ನಿಶ್ಚಿತವೆನಿಸಿ ಭಾವಿಸಿಕೊಂಡಿರುವ ಅಭಿಮತಗಳನ್ನು ಮೀರಿ, ನಿಲುವುಗಳ ಹೊಂದಾಣಿಕ ಮಾಡಿಕೊಳ್ಳಲು, ದೃಷ್ಟಿಯಲ್ಲಿ ಸಮತೋಲ ಸಾಧಿಸಲು ಐತಿಹಾಸಿಕ ನೋಟ ನಮಗೆ ನೆರವಾಗುತ್ತದೆ.
ಪ್ರದರ್ಶನದಲ್ಲಿ ಗುಣಮಟ್ಟವನ್ನು ನೋಡುವಾಗ, ಒಬ್ಬೊಬ್ಬ ಕಲಾವಿದನ ಪ್ರದರ್ಶನವನ್ನು ನೋಡುವುದು ಒಂದು ಹಂತ. ಇದಕ್ಕೆ ಕಲಾವಿಮರ್ಶೆಯಲ್ಲಿ ನ್ಯಾಯವಾದ ಸ್ಥಾನವುಂಟು. ಒಬ್ಬನ ವೇಷ,