ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಂಗಳೂರಿನಿಂದ ಉಡುಪಿಯವರೆಗಿನ ಕರಾವಳಿ ಪ್ರದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಬೃಹತ್ ಉದ್ಯಮಗಳು ಪ್ರವೇಶಿಸುತ್ತಿವೆ. ಈ ಚಿಕ್ಕ ಪ್ರದೇಶದಲ್ಲಿ ಸುಮಾರು ಐವತ್ತರಷ್ಟು ದೊಡ್ಡ ಉದ್ಯಮಗಳೂ, ಅದಕ್ಕೆ ಸಂಬಂಧಿಸಿದ ಹಲವು, ಪೂರಕ ಉದ್ಯಮಗಳೂ ಆರಂಭವಾಗುವ ಸಿದ್ಧತೆ ನಡೆದಿದ್ದು, ಇದು ಈ ಪ್ರದೇಶದ ಭವಿಷ್ಯದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸರಕಾರವೂ, ಉದ್ಯಮಿಗಳೂ ಈ ಬಗೆಯ ಔದ್ಯಮೀಕರಣವು ಅಭಿವೃದ್ಧಿಗೆ ಅನಿವಾರ್ಯವೆಂದು ವಾದಿಸಿದರೆ, ಪರ್ಯಾಯ ಅಭಿವೃದ್ಧಿವಾದಿಗಳೂ, ಪರಿಸರವಾದಿಗಳೂ ಈ ಅಭಿವೃದ್ಧಿಯ ಚಿಂತನೆಯನ್ನೆ ಪ್ರಶ್ನಿಸುತ್ತಿದ್ದಾರೆ. ಬೃಹತ್ ಉದ್ಯಮಗಳ ಕೇಂದ್ರೀಕರಣವು ಹಲವು ಆಪತ್ತುಗಳಿಗೆ ಕಾರಣವೆಂದೂ, ಜಿಲ್ಲೆಯ ಧಾರಣಾ ಶಕ್ತಿಯ ಮೇಲೆ, ಪರಿಸರ, ಸಮುದ್ರ, ಜೀವಜಾಲಗಳ ಮೇಲೂ, ನಾಗರಿಕ ಸೌಲಭ್ಯಗಳ ಮೇಲೂ ಇದು ದುಷ್ಪರಿಣಾಮವನ್ನು ಬೀರಿ, ಜನ ಜೀವನವನ್ನು ಬಹುವಾಗಿ ಬಾಧಿಸಲಿದೆಯೆಂದೂ ವಾದಿಸಲಾಗಿದ್ದು, ಈ ಅಭಿಪ್ರಾಯಗಳಿಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ತಜ್ಞರ ಬೆಂಬಲವಿದೆ. ಪರಿಸರ ಸಂಬಂಧಿ ತಜ್ಞ ಸಮಿತಿಗಳೂ, ಖಾಸಗಿ ಸಂಸ್ಥೆಗಳೂ ತಮ್ಮ ವರದಿಗಳಲ್ಲಿ ಈ ಬಗೆಯ ಉದ್ಯಮೀಕರಣವನ್ನೂ ವಿರೋಧಿಸಿವೆ. 1930ರ ದಶಕದಲ್ಲೆ, ಈ ಪ್ರದೇಶವು ಬೃಹತ್ ಉದ್ಯಮಗಳಿಗೆ ಸೂಕ್ತವಲ್ಲ ಎಂದು ಅಂದಿನ ತಜ್ಞ ಸಮಿತಿಯೊಂದು ಅಭಿಪ್ರಾಯಪಟ್ಟದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಂತೂ, ಈ ಬೃಹತ್ ಉದ್ಯಮಗಳ ಕೇಂದ್ರೀಕರಣವು ಸದ್ಯ ಈ ಪ್ರದೇಶದ ಮುಖ್ಯವಾದ ಒಂದು ಸಮಸ್ಯೆಯಾಗಿದ್ದು, ಮುಂದಿನ ಐದು ವರ್ಷಗಳು ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿವೆ.

ಬಹುಭಾಷಿಕತೆ, ಸಾಂಸ್ಕೃತಿಕ ಮತ್ತು ಮತೀಯ ಸಾಮರಸ್ಯ, ಖಾಸಗಿ ಸಾಹಸ, ಉದ್ಯಮಶೀಲತೆ, ಶಿಕ್ಷಣ, ಸಾಹಿತ್ಯ, ಕಲೆ, ಅಭಿವೃದ್ಧಿ ಮುಂತಾದವುಗಳಲ್ಲಿ ಮಾದರಿ ಪ್ರದೇಶವೆನಿಸುವ ದಕ್ಷಿಣ ಕನ್ನಡವು ಬದಲಾವಣೆ — ಆಧುನಿಕತೆ ಸವಾಲುಗಳನ್ನು ಸ್ವೀಕರಿಸುತ್ತ ಮುನ್ನಡೆದಿದೆ. ಜೊತೆಗೆ ಉದ್ಯಮೀಕರಣ, ನಿರುದ್ಯೋಗ, ಜನಸಂಖ್ಯೆಯ ಸಮಸ್ಯೆಗಳಿಂದಲೂ, ಸಾರ್ವಜನಿಕ ಸೌಲಭ್ಯಗಳ ಮೇಲೆ ಹೆಚ್ಚುತ್ತಿರುವ ಬೇಡಿಕೆಯಿಂದಲೂ, ಒತ್ತಡಗಳನ್ನು ಅನುಭವಿಸುತ್ತಿದೆ. ಶಾಂತಿ, ಭದ್ರತೆಗಳಿಗೆ ಹೆಸರಾಂತ

53