ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ಶಾಸ್ತ್ರೀಯತೆ / ೭೯

ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಮಾತೃಕಾ, ಉಮಾತಿಲಕ, ಪಂಚಭಂಗೀ, ಪಂಚತಾಲೇಶ್ವರ, ಶ್ರೀರಂಗ, ತಾಲಾರ್ಣವ ಇತ್ಯಾದಿ ಹೆಸರುಗಳಿಂದ ಬೇರೇ ಇರುತ್ತವೆ. ಇವೊಂದೊಂದೂ ಬಿಡಿ ಪದ್ಯಗಳಾಗಿವೆ ಹೊರತು ಪದ್ಯಕಾವ್ಯ ರೂಪಗಳಾಗಿಲ್ಲ.

ಇನ್ನೀಗ ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು, ಎಂಬ ವಿಚಾರ. ಈ ಹೆಸರು ಪ್ರಬಂಧವಾಚಕವಾಗಿರುವುದೆಂಬುದನ್ನು ಹಿಂದೆ ನೋಡಿದೆವು. ಯಕ್ಷಗಾನ ಎಂದರೆ 'ಯಕ್ಷ ಪ್ರಬಂಧ' ಎಂದರ್ಥ. ಈ ಸಮಸ್ತ ಪದದಲ್ಲಿ 'ಯಕ್ಷ' ಶಬ್ದವು 'ಗಾನ' ಶಬ್ದಕ್ಕೆ ವಿಶೇಷಣವಾಗಿ ಇದೆ. 'ಯಕ್ಷ' ಎಂಬ ಧಾತುವಿಗೆ ಪೂಜೆ ಅಥವಾ ಆರಾಧನೆ ಎಂಬುದೇ ನಿಜಾರ್ಥವೆಂದು ಪಾಣಿನಿಯ ಧಾತುಪಾಠದಿಂದ ತಿಳಿಯುವುದು- (ಯಕ್ಷ ಪೂಜಾಯಾಂ), ಆಪಟೆ ಸಂಸ್ಕೃತ ನಿಘಂಟುವಿನಲ್ಲಿಯೂ ಯಕ್ಷ್ = (ಆತ್ಮನೇ ಪದ) to honour, adore, worship ಎಂಬ ಅರ್ಥ ಕೊಡಲಾಗಿದೆ. ಅಲ್ಲದೆ ಈ ಧಾತುವಿನಿಂದ ನಿಷ್ಪನ್ನವಾದ 'ಯಕ್ಷ' ಎಂಬ ಪುಲ್ಲಿಂಗ ರೂಪಕ್ಕೂ worship (ಪೂಜೆ) ಎಂಬ ಅರ್ಥವಿದೆ. ಆದುದರಿಂದ ಯಕ್ಷಗಾನವೆಂದರೆ ಪೂಜಾಪ್ರಬಂಧ, ಎಂದರೆ ಪೂಜೆಗಾಗಿ ಇರುವ ಪ್ರಬಂಧವೆಂದರ್ಥ. ಅದಲ್ಲದೆ ಉಚಿತವಾದ ಬೇರೆ ಅರ್ಥ ಕಾಣುವುದಿಲ್ಲ. ಆದ್ದರಿಂದ 'ಯಕ್ಷಗಾನ'ವೆಂಬ ಸಮಸ್ತಪದಕ್ಕೆ 'ಯಕ್ಷಾರ್ಥಂ ಗಾನಂ = ಯಕ್ಷಗಾನಂ' ಎಂದು ವಿಗ್ರಹವಾಕ್ಯವಾಗುವುದು.

ಸಂಸ್ಕೃತದಲ್ಲಿ ಕ್ಷೇಮೇಂದ್ರನೆಂಬ ಪ್ರಸಿದ್ಧ ಕವಿಯು (ಕಾಲ : ಕ್ರಿ. ಶ. ೧೧೦೦ - ೧೨೦೦) 'ದಶಾವತಾರ ಚರಿತ'ವೆಂಬ ಗೀತಪ್ರಬಂಧವನ್ನು ರಚಿಸಿ ಅದನ್ನು ಪೂಜಾ ಪ್ರಬಂಧವೆಂದು ಕರೆದಿರುತ್ತಾನೆ-

ವಿಷ್ಟೋಃ ಸ್ವಲ್ಪ ವಿಲೋಕಿತಾಕೃತಿ ಸುಧಾ ಸಂವರ್ಧಿತೋತ್ಕಂಠಯಾ |
ಭಕ್ತಿ ವ್ಯಕ್ತ ದಶಾವತಾರ ಸರಸಃ ಪೂಜಾಪ್ರಬಂಧಃ ಕೃತಃ ||(೧೦-೪೪)

ಇದರಲ್ಲಿ ಕೃಷ್ಣಾವತಾರದ ಮಾಹಾತ್ಮವು ಮಿಕ್ಕೆಲ್ಲ ಅವತಾರಗಳಿಗಿಂತ ವಿಸ್ತಾರವಾಗಿಯೂ ಬಹಳ ರಸವತ್ತಾಗಿಯೂ ವರ್ಣಿಸಲ್ಪಟ್ಟಿದೆ. ಜಯದೇವ ಕವಿಯ ಗೀತಗೋವಿಂದವು ಈ ಗ್ರಂಥದಿಂದ ಪ್ರಭಾವಿತವಾಗಿರುವುದೆಂದು ವಿದ್ವಾಂಸರ ಅಭಿಪ್ರಾಯವಿದೆ. ಇವೆರಡೂ ಪ್ರಬಂಧಗಳು ದೇವಸ್ಥಾನಗಳಲ್ಲಿ ಗೀತಾರಾಧನೆ, ನಾಟ್ಯಾರಾಧನೆಗೆ ಸಲ್ಲುತ್ತಿದ್ದವೆಂದೂ ತಿಳಿಯುವುದು. ಆಂದ್ರ, ಕನ್ನಡ, ತಮಿಳು ಯಕ್ಷಗಾನಗಳಲ್ಲೆಲ್ಲ ದಶಾವತಾರ ಸ್ತುತಿಗೆ ವಿಶೇಷ ಪ್ರಾಧಾನ್ಯವಿರುವುದನ್ನು ಕಾಣಬಹುದು. 'ಸಭಾಲಕ್ಷಣ'ವೆಂಬ ಬಯಲಾಟದ ಪೂರ್ವರಂಗ ವಿಧಿಯು ದಶಾವತಾರ ಸ್ತುತಿ ಶ್ಲೋಕಗಳಿಂದಲೇ ಪ್ರಾರಂಭವಾಗುವುದು. ಆ ಮೇಲೆ ದಶಾವತಾರ ಸ್ತುತಿ ಕೀರ್ತನೆಗಳೊಂದಿಗೆ ದಶಾವತಾರ ನೃತ್ಯ ನಡೆಯಬೇಕು, ಬಾಲಗೋಪಾಲರ ನರ್ತನಕ್ಕೆ ದಶಾವತಾರ ಸ್ತುತಿ ಪದ್ಯ ಹಾಡಬೇಕು. ಸ್ತ್ರೀವೇಷಗಳ ವೃಂದವನ್ನು ಕುಣಿಸಲಿಕ್ಕಿರುವ 'ಅವತಾರ ಸಂವಾದ' ಎಂಬ ಪದ್ಯಗಳು ಬೇರೇ ಇವೆ. ಯಕ್ಷಗಾನ ಕವಿಗಳು ತಮ್ಮ ಕೃತಿಗಳ ಆದಿಮಧ್ಯಾಂತಗಳಲ್ಲಿ ಸಹ ದಶಾವತಾರ ಸ್ತುತಿ ಪದ್ಯಗಳನ್ನು ರಚಿಸಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಅಲ್ಲದೆ ಯಕ್ಷಗಾನ ಮೇಳಗಳೆಲ್ಲವೂ ಒಂದೊಂದು ದೇವಸ್ಥಾನವನ್ನು ಹೊಂದಿಕೊಂಡೇ ಇರುವಂತಹವು. ಮೊದಲಿಂದಲೂ ಇವು ದೇವಸ್ಥಾನದ ಸೊತ್ತಾಗಿಯೇ ನಡೆದು ಬಂದಿವೆ ಎಂಬುದು ದೇವಸ್ಥಾನಗಳಲ್ಲೇ ದೊರೆತಿರುವ ಶಾಸನಾದಿಗಳಿಂದ ವ್ಯಕ್ತವಾಗುವುದು. ಯಕ್ಷಗಾನ ಸೇವೆಗಳಿಗಾಗಿ ಉಂಬಳಿ ಉತಾರಗಳನ್ನು ಕೊಟ್ಟಿರುವ ದಾಖಲೆಗಳು ದೇವಸ್ಥಾನಗಳಲ್ಲಿ ದೊರೆಯುತ್ತವೆ. ಪ್ರತಿಯೊಬ್ಬ ಯಕ್ಷಗಾನ ಕವಿಯೂ ಕೃತಿಯ