ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೨ / ಕುಕ್ಕಿಲ ಸಂಪುಟ

ಸರ್ವ೦ಗ್ರಾಹಕವಾಗಿ ಕ್ರೋಡೀಕರಿಸಿ ಅತಿ ಮುಖ್ಯವಾದ್ದೆಂದು ನಿರ್ದಿಷ್ಟಪಡಿಸಿದ ಏನೊಂದು ಲಕ್ಷಣಗಳಿವೆಯೋ ಆ ಲಕ್ಷಣಗಳೇ ಪ್ರಯೋಗದ ಅಭ್ಯಂತರ ಬಾಹ್ಯಪರಿಚ್ಛೇದಕ್ಕೆ ಪ್ರಮಾಣವಾಗಿವೆ; ಹೊರವಲಯದಲ್ಲೇ ಪ್ರಯೋಗಿಸಲ್ಪಡುವ 'ಶಾಸ್ತ್ರ ಬಹಿಃಸೃತ'ವಾದ ಬಾಹ್ಯಪ್ರಯೋಗಗಳ ಕೃತಿಗಳೂ ನಾಟಕಾದಿ ರೂಪಕ ಲಕ್ಷಣಗಳಿಂದ ಬಹಿಃಸೃತವಾದುವು ಹಾಗೂ ಕೆಳಮಟ್ಟದವು ಆಗಿರುತ್ತವೆ, ಎಂದಾಗಿದೆ.

(ಕ್ರಿಯಾ : ಎಂದರೆ ನಾಟಕಾದಿ ದೃಶ್ಯಕಾವ್ಯಗಳು ಎಂದರ್ಥ. 'ಕಲ್ಪ' ಎಂದರೆ ಸ್ವಲ್ಪ ಕೀಳ್ಮಟ್ಟದ್ದು ಎಂದರ್ಥ. ಕಲ್ಪ = A termination added to nouns and adjectives in the sense of 'a little less than, almost like, nearly equal to' (denoting similarity with a degree of inferiority)-ಆಪಟೆ ನಿಘಂಟು) ಇಂತಹ ಕೃತಿಗಳೇ ಪ್ರಾಯಶಃ, ಉತ್ತರ ಕಾಲದ ಲಕ್ಷಣ ಗ್ರಂಥಗಳಲ್ಲಿ ಉಪರೂಪಕಗಳೆಂದು ಕರೆಯಲ್ಪಟ್ಟ ಗೇಯ ಕಾವ್ಯಗಳೆಂದು ನ್ಯಾಯವಾಗಿ ಊಹಿಸಬಹುದು. ಭರತನು ಉಪರೂಪಕಗಳನ್ನು ಹೇಳಲಿಲ್ಲವಾದರೂ 'ದಶರೂಪಕ ಲಕ್ಷಣ'ದ ಕೊನೆಗೆ, ಅಲ್ಲಿ ಹೇಳಲ್ಪಡದವು ಬೇರೆ ಇರುತ್ತವೆ ಎಂಬ ಸೂಚನೆ ಕಂಡು ಬರುತ್ತದೆ.

ಶಾಸ್ತ್ರೀಯ ಪ್ರಯೋಗಗಳೆನ್ನುವ 'ಕೂಚಿಪುಡಿ' 'ಮೇಳತ್ತೂರು' ದಕ್ಷಿಣ ಕನ್ನಡ ('ತೆಂಕಮಟ್ಟು') 'ತಂಜಾವೂರು' ಇತ್ಯಾದಿ ಯಕ್ಷಗಾನ ಪ್ರಯೋಗಗಳಾದರೂ ಕೇರಳದ 'ಕಥಕಳಿ'ಯಾದರೂ ನಾಟ್ಯಶಾಸ್ತ್ರೋಕ್ತ ಲಕ್ಷಣಕ್ಕೆ ಸಂಪೂರ್ಣ ಒಳಪಟ್ಟಿರುವುದಿಲ್ಲ. ದೇಶೀ (ಶಾಸ್ತ್ರೀಯ) ವಿಧಾನಗಳು ಕೆಲಮಟ್ಟಿಗೆ ಅವುಗಳಲ್ಲಿ ಸೇರಿಕೊಂಡಿವೆ. ಆದುದರಿಂದ ಇವೆಲ್ಲ ಸಂಪ್ರದಾಯಗಳೂ 'ಬಾಹ್ಯಪ್ರಯೋಗ' ಪರಂಪರೆಯಲ್ಲಿ ನಡೆದು ಬಂದಿರಬೇಕು. ಆದುದರಿಂದಲೇ ಬಯಲಾಟ, ವೀಥಿನಾಟಕ, ತೆರುಕ್ಕೂತ್ತು, ಪುರುಕ್ಕೂತ್ತು ಎಂಬ ಹೆಸರಾಗಲು ಕಾರಣವೆಂದೆಣಿಸಬಹುದು- ಶಾಸ್ತ್ರ ಬಹಿಃಸೃತವೆಂಬ ಅರ್ಥದಲ್ಲಿ. ಅಂತಹ ಬಾಹ್ಯಪ್ರಯೋಗಗಳು ಪ್ರೇಕ್ಷಾಗೃಹಗಳಿಲ್ಲದೆ, ಬಾಹ್ಯ ಪ್ರದೇಶಗಳಲ್ಲಿ ಎಲ್ಲಿ ಬೇಕೆಂದರಲ್ಲಿ ರಂಗಸ್ಥಳಗಳನ್ನು ಹಾಕಿ ಆಡಲ್ಪಡುತ್ತವೆಂದೂ ಭರತನು ಹೇಳುವುದನ್ನು ಪರಿಶೀಲಿಸಿರಿ.

ಅಥ ಬಾಹ್ಯಪ್ರಯೋಗೇ ತು ಪ್ರೇಕ್ಷಾಗೃಹ ವಿವರ್ಜಿತೇ |
ವಿದಿಕ್ಷ್ವಪಿ ಭವೇದ್ರಂಗಃ ಕದಾಚಿದ್ಭರ್ತುರಾಜ್ಞಯಾ||

ಇದುವರೆಗೆ ಮಾಡಿದ ವಿವೇಚನೆಯಿಂದ ಯಕ್ಷಗಾನ 'ಬಯಲಾಟ'ವೆಂಬುದು ನಾಟ್ಯಶಾಸ್ತ್ರ ಪರಂಪರೆಯಲ್ಲಿ ನಡೆದುಬಂದಿರುವ (ಶಾಸ್ತ್ರೀಯ) ಸಂಪ್ರದಾಯವೇ ಹೊರತು 'ಜಾನಪದ'ವಲ್ಲವೆಂದು ವಾಚಕರಿಗೆ ಮನದಟ್ಟಾಗಬಹುದೆಂದು ನಂಬುತ್ತೇನೆ. ಯಕ್ಷಗಾನ ಮೇಳದವರೂ, ಪೋಷಕರೂ, ಪ್ರೋತ್ಸಾಹಕರೂ, ಅಭಿಮಾನಿಗಳೂ, ಸಾಮಾಜಿಕರೂ, ಯಕ್ಷಗಾನ ಬಯಲಾಟದಲ್ಲಿ ಪರಂಪರೆಯಿಂದ ನಡೆದುಬಂದಿರುವ ಶಾಸ್ತ್ರೀಯಾಂಶಗಳನ್ನು ಉಳಿಸಿ ಬೆಳೆಸುವುದಕ್ಕೆ ಪ್ರಯತ್ನಿಸಬೇಕೆಂದು ಪ್ರಾರ್ಥಿಸುತ್ತೇನೆ. ಸಂಗೀತ ವಿದ್ವಾಂಸರೂ ಇದರ ಕಡೆಗೆ ದೃಷ್ಟಿ ಹಾಯಿಸುವರೆಂದು ಆಶಿಸುತ್ತೇನೆ.

ನಾಟ್ಯಶಾಸ್ತ್ರಕಾರನಾದ ಭರತನು ದಾಕ್ಷಿಣಾತ್ಯರಾದ ನಮ್ಮಲ್ಲಿ ರಕ್ತಗತವಾಗಿದ್ದ ಸಂಗೀತ ನಾಟ್ಯ ಪ್ರವೃತ್ತಿಯನ್ನು ಗುರುತಿಸಿದವನೇ. ನಮ್ಮ ಮೇಲೆ ಆತನಿಗಿದ್ದ ಆದರಾಭಿಮಾನಗಳನ್ನು ನಾಟ್ಯಶಾಸ್ತ್ರದಲ್ಲಿ - "ತತ್ರ ದಾಕ್ಷಿಣಾತ್ಯಾಸ್ತಾವತ್ ಬಹುನೃತ್ತ ಗೀತ ವಾದ್ಯಾ: ಕೈಶಿಕೀಪ್ರಾಯಾಃ ಚತುರ ಮಧುರ ಲಲಿತಾಂಗಾಭಿನಯಾಶ್ಚ" ಎಂಬ ಮಾತುಗಳಿಂದ