ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨ / ಕುಕ್ಕಿಲ ಸಂಪುಟ

ಹೀಗೆ ಚಿತ್ರಕವಿ ಪೆದ್ದನನೆಂಬವನ ಲಕ್ಷಣ ಸಾರ ಸಂಗ್ರಹ', 'ಅಪ್ಪಕವೀಯ' ಮುಂತಾದ ಲಕ್ಷಣ ಗ್ರಂಥಗಳಿಂದಲೂ ಯಕ್ಷಗಾನವೆಂಬುದು ಪ್ರಬಂಧದ ಹೆಸರೆಂದು ತಿಳಿಯಬಹುದು.

ಇದುವರೆಗೆ ದೊರೆತಿರುವ ಕನ್ನಡ ಆಂಧ್ರ ತಮಿಳು ಯಕ್ಷಗಾನಗಳೆಲ್ಲ ೧೬ನೇ ಶತಮಾನಕ್ಕಿಂತ ಈಚಿನವೇ ಆಗಿರುವುದರಿಂದ, ಹಾಗೂ ಅದಕ್ಕಿಂತ ಹಿಂದೆ ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಯಕ್ಷಗಾನವೆಂಬ ಹೆಸರೇ ದೊರೆಯದಿರುವುದರಿಂದ ಸಹ ಈ ಸಂಪ್ರದಾಯವು ಆಮೇಲೆಯೇ ಹುಟ್ಟಿದ್ದಿರಬೇಕೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆಂಧ್ರದಲ್ಲಿಯೂ ೧೫ನೇ ಶತಮಾನದ ಪೂರ್ವಭಾಗದಲ್ಲಿದ್ದ ಶ್ರೀನಾಥನೆಂಬ ಪ್ರಸಿದ್ಧ ಕವಿಯ 'ಭೀಮೇಶ್ವರ ಪುರಾಣ'ದಲ್ಲಿ ಈ ಹೆಸರು ಮೊದಲಾಗಿ ಕಾಣುವುದೆಂದೂ ಹೇಳುತ್ತಾರೆ. ನಮ್ಮ ಹಿಂದಿನ ಕಾವ್ಯಾದಿಗಳಲ್ಲಿ ಈ ಹೆಸರು ಕಾಣದಿದ್ದರೂ ದಶಾವತಾರ ಆಟದ ಸಂಪ್ರದಾಯವು ಕಳೆದ ೧೨-೧೩ನೇ ಶತಮಾನಗಳಲ್ಲಿ ಇದ್ದಿತೆಂಬುದಕ್ಕೆ ಗ್ರಂಥಾಧಾರ ದೊರೆಯುವುದು, ಚೌಂಡರಸನೆಂಬ ಕವಿಯ 'ದಶಕುಮಾರಚರಿತ'ವೆ೦ಬ ಕಾವ್ಯದ ಪ್ರಸ್ತಾವನೆಯಲ್ಲಿರುವ ಇದೊಂದು ಪದ್ಯವನ್ನು ಪರಿಶೀಲಿಸಿರಿ. (ಈ ಕವಿಯ ಕಾಲ ಕ್ರಿ. ಶ. ೧೩೦೦ ಎಂದು ಕವಿಚರಿತ್ರೆಯಲ್ಲಿ ಕೊಡಲಾಗಿದೆ)-

ಮೊದಲೊಳ್ ದಂಡಿಕವೀಶ್ವರಂ ದಶಕುಮಾರಾಖ್ಯಾನ ಚಾರಿತ್ರಮಂ
ಪದಪಿಂ ಸಂಸ್ಕೃತ ಭಾಷೆಯಿಂ ರಚಿಸಿದಂ ಧಾತ್ರೀಜನ ಸ್ತೋತ್ರಸ |
ಮ್ಮದವಪ್ಪಂತದನಾಂ ಪ್ರಸಿದ್ಧಿಯವತಾರಾಕಾರಮಂ ನಟ್ಟುವಂ
ವಿದಿತಂ ರಂಗದೊಳಾಡಿ ತೋರ್ಪತರದಿಂ ಪೇಳ್ವೆಂ ಸುಕರ್ಣಾಟದಿಂ ||

'ದಶಕುಮಾರಚರಿತೆ'ಯೆಂಬುದು ಹತ್ತುಮಂದಿ ರಾಜಪುತ್ರರ ಕಥೆಗಳನ್ನೊಳಗೊಂಡ ಕಾವ್ಯ. ಈ ಪದ್ಯದಲ್ಲಿರುವ 'ದಶಾವತಾರಾಕಾರ' ಎಂದರೆ ವಿಷ್ಣುವಿನ ೧೦ ಅವತಾರದ ಕಥೆಗಳನ್ನೊಳಗೊಂಡ ರೂಪಕ ದೃಶ್ಯಕಾವ್ಯ. 'ನಟ್ಟುವಂ' ಎಂದು ಏಕವಚನವಿದ್ದರೂ ಅದು 'ನಟ್ಟುವ ವರ್ಗ' ಅಥವಾ 'ನಟ್ಟುವ ಮೇಳ' ಎಂಬರ್ಥದ ಜಾಕವಚನ ಪ್ರಯೋಗವೆಂದೆಣಿಸಬೇಕು. ಈ ನಟ್ಟುವರೆಂಬವರು ನಾಟಕಪ್ರಯೋಗದ ನಿರತರೆಂಬುದು ನಮ್ಮ ಪುರಾತನ ಕನ್ನಡ ಕಾವ್ಯಗಳಲ್ಲಿ ಬರುವ ನಾಟಕ ಪ್ರಯೋಗ ವರ್ಣನೆಗಳಿಂದ ತಿಳಿಯುವುದು. ಪೊನ್ನನ 'ಶಾಂತಿಪುರಾಣ'ದಲ್ಲಿ ಗೀರ್ವಾಣಮಂಗಳ ಗಾಯಕರೆ ಸಂಗೀತ ಗಾಯಕರಾಗ, ನಿಳಿಂಪ ಭಾರತಿಕರೆ ನಟ್ಟುವರಾಗೆ ಸನ್ಮಾರ್ಗ ನಾಟಕ ಪ್ರಸ್ತುತ ಪವಿತ್ರ ಸೂತ್ರಧಾರನೆ ಮುಂದೆ ನಿಂದು ಪುಷ್ಪಾಂಜಲಿಯಂ ಕೆದರೆ ಎಂಬ ವರ್ಣನೆ ಬರುತ್ತದೆ.

ಹಿಂದಕ್ಕೆ ನಮ್ಮ ದೇವಸ್ಥಾನಗಳಲ್ಲಿ ಈ ನಟ್ಟುವರು ನಾಟ್ಯ ಸೇವಾ ನಿರತ ರಾಗಿದ್ದುದೂ ಶಾಸನಾದಿಗಳಿಂದ ತಿಳಿದುಬಂದ ವಿಚಾರ.

ಮೇಲಿನ ಚೌಂಡರಸನ ಪದ್ಯದಲ್ಲಿ ತೋರುವಂತೆ ನಟ್ಟುವರ ದಶಾವತಾರ ಪ್ರಯೋಗವೇ ನಮ್ಮ ದಶಾವತಾರ ಆಟದ ಪೂರ್ವಸ್ಥಿತಿ ಎಂದು ನ್ಯಾಯವಾಗಿ ಊಹಿಸ ಬಹುದಾಗಿದೆ. ಅಲ್ಲದೆ ನಮ್ಮ ಪೂರ್ವದ ಕನ್ನಡ ಕಾವ್ಯಗಳಲ್ಲಿ ವಿಶೇಷವಾಗಿ ವರ್ಣಿಸ ಲ್ಪಟ್ಟಿರುವ ನಾಟಕಗಳು, ಸಾಮಾನ್ಯವಾಗಿ ಈಗ ವಿದ್ವಾಂಸರು ಊಹಿಸುತ್ತಿರುವಂತೆ ಭಾಸ ಕಾಳಿದಾಸಾದಿ ಕವಿಗಳ ಸಂಸ್ಕೃತ ನಾಟಕಗಳಾಗಿರಬೇಕೆಂದು ಎಣಿಸಬೇಕಾಗಿಲ್ಲ. ಅವು ಪ್ರಾಯಶಃ ಸಂಸ್ಕೃತ ರೂಪಕಗಳೋ ಅಥವಾ ಅಂತಹದೇ ದೃಶ್ಯಪಯುಕ್ತವಾದ ಕನ್ನಡ ಹಾಡುಗಬ್ಬಗಳೊ ಆಗಿರಬಹುದಲ್ಲವೇ? ಆದ್ದರಿಂದಲೇ ಬಹುಶಃ ನಮ್ಮ ಪೂರ್ವದ ಕನ್ನಡ ಕವಿಗಳು ಕಾಳಿದಾಸಾದಿಗಳ ಸಂಸ್ಕೃತ ನಾಟಕಗಳಂತಹ ರೂಪಕಗಳನ್ನು ರಚಿಸಲಿಲ್ಲ.