ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೯೩

ಯಕ್ಷಗಾನ ರಚನೆಗಳು ಹಿಂದೆ ಹೇಳಿದಂತೆ ೧೬ನೇ ಶತಮಾನಕ್ಕಿಂತ ಹಿಂದಿನವು ದೊರೆತಿಲ್ಲವೇನೋ ಸರಿ. ಆದರೆ 'ಕವಿರಾಜಮಾರ್ಗ', 'ಕಾವ್ಯಾವಲೋಕನ'ಗಳಲ್ಲಿ ಕಾಣುವ ಹಾಡುಗಬ್ಬದ ಲಕ್ಷಣಗಳನ್ನು ಪರಿಶೀಲಿಸಿದರೆ ಅದು ನಮ್ಮ ಯಕ್ಷಗಾನದಂತಹದೇ ರಚನೆಯೆಂದು ತಿಳಿಯಬಹುದು.

ಸೂ. ೨೪೧ (ಕಾವ್ಯಾವಲೋಕನ)

ಸಂದಿಸಿರೆ ಕಂದಮುಂ ಪೆರ
ತೊಂದರಿಕೆಯ ವೃತ್ತ ಜಾತಿಯುಂ ಪದಮವು ತ
ಳ್ತೊಂದಿರೆ ಪನ್ನೆರಡುವರಂ
ಸಂದುದು ಮೇಲ್ಪಾಡೆನಿಕ್ಕುಮದು ಕನ್ನಡದೊಳ್||೯೫೨||

ಸೂ. ೨೪೨:

ಪದಿನೈದು ಮಿರ್ಪತೈದುಂ
ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೊಳ್
ಪುದಿದೊದವಿ ನೆಗಳ್ಪೊಡಂತದು
ಸದಲ೦ಕಾರಂ ರಸಾಸ್ಪದಂ ಪಾಡಕ್ಕುಂ||೯೫೩||

ಸೂ. ೨೪೩ :

ಪಾಡುಗಳಿಂದಂ ತರಿಸಲೆ
ಮಾಡಿದುದಂ ಪಾಡುಗಬ್ಬವೆಂದು ಬುಧ‌ರ್ ಕೊಂ
ಡಾಡುವರದರಿಂ ದಲ್ ಮೇಲ್
ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ||೯೫೪||

ಮೇಲೆ ಹೇಳಿದ 'ಪಾಡು'ಗಳು ಒಂದಕ್ಕಿಂತ ಹೆಚ್ಚು ಸೇರಿರುವ ದೊಡ್ಡ ಪ್ರಬಂಧವಾದರ ಅದನ್ನು ವಿದ್ವಾಂಸರು 'ಪಾಡುಗಬ್ಬ'ವೆಂದು ಕರೆಯುತ್ತಾರೆ. ಅದುವೇ 'ಮೇಲ್ವಾಡು' ಅಥವಾ ರೂಢಿಯಲ್ಲಿ 'ಬೆದಂಡೆ' ಎಂದು ಕರೆಯಲ್ಪಡುವ ಹಾಡುಗಬ್ಬವಾಗಿದೆ ಎಂದು ಈ ಪದ್ಯದ ತಾತ್ಪರ್ಯ. ಆದುದರಿಂದ 'ಬೆದಂಡೆ' ಎಂಬುದರಲ್ಲಿ ಎಡೆಎಡೆಯಲ್ಲಿ ಒಂದೊಂದು ವೃತ್ತ ಹಾಗೂ ಕಂದಪದ್ಯಗಳು ಸೇರಿರುವ ಪದಗಳು (ತಾಳಬದ್ಧ ಪದ್ಯಗಳು ಬಹುಸಂಖ್ಯೆಯಲ್ಲಿರುತ್ತವೆ ಎಂದಾಯಿತು. ಅಂತೆಯೇ ಕಂದ ವೃತ್ತಗಳ ಸಂಖ್ಯೆಯೂ ಅಧಿಕವಿರುವುದಾಯಿತು. 'ಮೇಲ್ವಾಡು' ಎಂದರೆ ಮಹಾಪ್ರಬಂಧ, ಅದುವೇ ಬೆದಂಡೆ, ಎಂದೂ ವ್ಯಕ್ತವಾಯಿತು. ಹೀಗೆ ಕಂದವೃತ್ತಗಳು ಅಧಿಕ ಸಂಖ್ಯೆಯಲ್ಲಿರುವ 'ಮಹಾಪ್ರಬಂಧ'ವನ್ನು ಸಂಗೀತಶಾಸ್ತ್ರ ಗ್ರಂಥಗಳಲ್ಲಿ 'ಸೂಡಸ್ಥ' ಪ್ರಬಂಧವೆಂದೂ ಕರೆಯಲಾಗಿದೆ, ಯಕ್ಷಗಾನಗಳನ್ನೂ ಕವಿಗಳು ಮಹಾಪ್ರಬಂಧವೆಂದು ಕರೆದುಕೊಂಡದ್ದಿದೆ.

ಇದನ್ನೆಲ್ಲಾ ಪರಿಶೀಲಿಸಿದಲ್ಲಿ, ಇಂದಿನ 'ಯಕ್ಷಗಾನ'ವು ಹಿಂದೆ ಮಹಾಪ್ರಬಂಧ ಹಾಗೂ ಬೆದಂಡೆ ಎಂದೂ ಕರೆಯಲ್ಪಡುತ್ತಿತ್ತು. ಅಲ್ಲದೆ ಅದು ನಾಟ್ಯವಿಲ್ಲದ 'ಸಭಾಸಂಗೀತ'ದಲ್ಲಿಯೂ ಹಾಡಲ್ಪಡುತ್ತಿತ್ತೆಂಬುದಾಗಿ ಅನುಮಾನಿಸಬಹುದಾಗಿದೆ.

ತಾಳಬದ್ಧವಾದ ಪದ್ಯಗಳಿಗೆ 'ಪದ' ಎಂಬ ವ್ಯವಹಾರವು ಪುರಾತನ ಸಂಗೀತ (ಗಾಂಧರ್ವ) ಶಾಸ್ತ್ರ ಪರಂಪರೆಯಿಂದಲೇ ರೂಢಿಗೆ ಬಂದಿರುವುದಾಗಿದೆ. ನಾಟ್ಯಶಾಸ್ತ್ರದಲ್ಲಿ ಭರತಮುನಿಯು ಕೊಟ್ಟಿರುವ ಗಾಂಧರ್ವ ಲಕ್ಷಣವನ್ನು ಪರಿಭಾವಿಸಿರಿ-