ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೪ / ಕುಕ್ಕಿಲ ಸಂಪುಟ

ಗಾಂಧರ್ವ೦ ಯನ್ಮಯಾ ಸ್ಪಷ್ಟಂ (ಪ್ರೋಕ್ತಂ) ಸ್ವರತಾಲಪದಾತ್ಮಕಂ |
ಪದಂ ತಸ್ಯ ಭವೇದ್ವಸ್ತು ಸ್ವರತಾಲಾನುಭಾವಕಂ ǁǁ ಆ ೨೬) ǁ

ಸ್ವರ, ತಾಲ, ಪದ, ಈ ಮೂರೂ ಕೂಡಿರುವಂಥಾದ್ದೇ ಗಾಂಧರ್ವ, ಇವುಗಳೊಳಗೆ ಪದ ಎಂದರೆ ಸ್ವರ ತಾಲಕ್ಕೆ ಆಶ್ರಯವಾಗಿರುವ ಗೇಯ ವಸ್ತು ಅಥವಾ ಪ್ರಬಂಧವಾಗಿರುತ್ತದೆ ಎಂದು ಇದರ ತಾತ್ಪರ್ಯ.

ಹಾಡುವ ಪದ್ಯಕ್ಕೆ ಪ್ರಬಂಧ, ರೂಪಕ, ಗೀತ, ಗೇಯ ಇತ್ಯಾದಿ ಅನೇಕ ಹೆಸರು ಗಳಿರುತ್ತಾ 'ಪದ' ಎಂಬ ಹೊಸ ಹೆಸರನ್ನು ಗಾಂಧರ್ವದಲ್ಲಿ ಪಾರಿಭಾಷಿಕವಾಗಿ ಆತನು ಕೊಟ್ಟಿರುವುದರ ಔಚಿತ್ಯವೇನೆಂದರೆ- 'ಪದ' ಶಬ್ದದ ನಿಜವಾದ ಅರ್ಥ ಹಚ್ಚೆ, ಪಾದ ವಿನ್ಯಾಸ (Foot step) ಎಂದಾಗಿದೆ- ಪದ-ಗ ಎಂಬುದು ಧಾತ್ವರ್ಥ, “ಪದ್ಯತೇ, ಪದಂ ವ್ಯಶ್ಯತೇ ಇತಿ ಪದಂ' ಇದು ಆ ಶಬ್ದದ ನಿಷ್ಪತ್ತಿ, ಹಜ್ಜೆಯಿಟ್ಟು ಕುಣಿಯ ಲಿಕ್ಕಿರುವಂಥದ್ದು ಎಂಬ ವಿಶಿಷ್ಟಾರ್ಥದಲ್ಲಿ ಗೇಯವಸ್ತುವಿಗೆ ಪಾರಿಭಾಷಿಕವಾಗಿ 'ಪದ ಎಂದು ಹೆಸರು ಕೊಟ್ಟದ್ದಾಗಿದೆ. ಭರತನ ಗಾಂಧರ್ವವೆಂಬುದು ನಾಟಕಕ್ಕಾಗಿ ಹುಟ್ಟಿದ್ದು. ಆದುದರಿಂದಲೇ 'ಸಂಗೀತ' ಎಂಬ ಶಬ್ದಕ್ಕೆ ನೃತ್ತಂ ಗೀತಂ ಚ ವಾದ್ಯಂ ಚ ತ್ರಯಂ ಸಂಗೀತಮುಚ್ಯತೇ' ಎಂಬ ವಿಶಿಷ್ಟಾರ್ಥ ಬಂದಿರುವುದು. ಭರತೋತ್ತರ ಕಾಲದಲ್ಲಿ ಕುಣಿತದ ಪದ್ಯಕ್ಕೆಲ್ಲ 'ಪದ'ವೆಂಬ ಹೆಸರೇ ನಮ್ಮ ದೇಶದಲ್ಲಿ ರೂಢಿಯಾಗಿ ಬಂದಿರುವು ದನ್ನು ಗಮನಿಸಬಹುದು. 'ಪದ್ಮಾವತಿ ಚರಣ ಚಾರಣ ಚಕ್ರವರ್ತಿ' ಎಂದು ಕೊಂಡಿರುವ ಜಯದೇವನು ಆತನ ಪ್ರೇಯಸಿಯಾಗಿದ್ದ (ದೇವದಾಸಿ!) ಪದ್ಮಾವತಿಯ ನಾಟ್ಯಕ್ಕಾಗಿ ರಚಿಸಿದ 'ಗೀತಗೋವಿಂದ'ವನ್ನು 'ಪದ'ವೆಂದೇ ಕರೆದಿದ್ದಾನೆ. (ಆ 'ಅಷ್ಟಪದಿ' ಗಳು ಒಂದೊಂದರಲ್ಲಿ ಎಂಟೆಂಟು 'ಪಾದ'ಗಳಿರುವುದಲ್ಲ, ಎಂಟೆಂಟು 'ಪದ'ಗಳು ಎಂದರೆ 'ಚರಣ'ಗಳು ಇರುವುದು. ಆದ್ದರಿಂದಲೇ ಅದು 'ಪದಾವಲಿ'. “ಲಲಿತ ಕೋಮಲ ಕಾಂತ ಪದಾವಲೀಂ ಶೃಣುತ ರೇ ಜಯದೇವ ಸರಸ್ವತೀ'. ಇನ್ನಿತರ ಎಷ್ಟೊಂದು ನೃತ್ಯ ಪದ್ಧತಿ ಗಳಿವೆ ನಮ್ಮಲ್ಲಿ, ಅವುಗಳ ಹಾಡುಗಳೆಲ್ಲ ಪದಗಳೆಂದೇ ಕರೆಯಲ್ಪಟ್ಟಿವೆ- ರಾಸಲೀಲಾಪದ, ರಾಮಲೀಲಾಪದ, 'ಗೊಬ್ಬಿ' ಪದ (ಇದು ಗುಜರಾತಿನ ಗರ್ಭಿ ಎಂಬ ರಾಸನೃತ್ತದ ಹೆಸರು), ಜಕ್ಕಿಣೀ ಪದ, ಚಿಂದು ಪದ, ಕೊರವಂಜಿ ಪದ, ಕೇರಳದಲ್ಲಿ ಕೃಷ್ಣಾಟ್ಟಂ ಪದ, ಕಥಕಳಿ ಪದ, ದಾಸರ ಪದ, ಕ್ಷೇತ್ರಜ್ಞನ ಪದ ಇತ್ಯಾದಿ. ಇದೇ ಪರಂಪರೆಯಿಂದ ಯಕ್ಷಗಾನದ ಹಾಡುಗಳೂ ಪದಗಳೆಂದು ಕರೆಯಲ್ಪಟ್ಟಿರುವುದೂ, ನಾಗವರ್ಮನು ಕೊಟ್ಟಿರುವಂತೆ 'ಬೆದಂಡೆ'ಯ ಹಾಡುಗಳಿಗಾದರೂ, ಪದಗಳೆಂಬ ಹೆಸರು ನಾಟ್ಯದ್ದಿಷ್ಟವಾದುವೆಂಬುದರಿಂದ ಬಂದಿರಬೇಕೆಂಬುದರಲ್ಲಿ ಸಂದೇಹ ಕಾಣುವುದಿಲ್ಲ.

ಸಂಸ್ಕೃತ ನಾಟಕದಲ್ಲಿ ಬೇರೆ ಬೇರೆ ರಸಭಾವ ಸಂದರ್ಭಗಳಲ್ಲಿ ಹಾಡತಕ್ಕ ಪದಗಳಿಗೆ ಭರತನು 'ಧ್ರುವಗಳು' ಅಥವಾ 'ಧ್ರುವಾಪದ'ಗಳೆಂದು ವಿಶೇಷ ಸಂಜ್ಞೆಯನ್ನು ಕೊಟ್ಟಿರು ತಾನೆ. ಪ್ರತ್ಯೇಕ ರಸಭಾವ ಸಂದರ್ಭಗಳಲ್ಲಿ ಇಂತಿಂತಹ ಜಾತಿರಾಗ ತಾಳಗಳಲ್ಲೇ ಹಾಡಬೇಕೆಂಬ ನಿರ್ಣಯವಿರುವ ಪದಗಳಾದ್ದರಿಂದ ಅವು 'ಧ್ರುವ'ಗಳು, ಯಕ್ಷಗಾನ ಗಳಲ್ಲಿ ಬರುವ 'ದರು' ಅಥವಾ 'ದರುಪದ'ಗಳು ಆ ಧ್ರುವ ಅಥವಾ ಧ್ರುವಪದಗಳ ತದ್ಭವವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅದು ಸರಿಯಾದ್ದೇ.

ಇನ್ನು, ಅಂದಿನ 'ಬೆದಂಡೆ', ಇಂದಿನ 'ಯಕ್ಷಗಾನ' ಇವೆರಡೂ ಒಂದೇ ರಚನೆ ಗಳೆಂದಾದರೆ ಬೆದಂಡೆಗೆ ಯಕ್ಷಗಾನವೆಂಬ ಹೆಸರು ಮತ್ತೆ ಯಾವುದರಿಂದ ಬಂತು? ಎಂಬ ಪ್ರಶ್ನೆ.