ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೯೫

ಬೆದಂಡೆ ಎಂಬುದರ ಸಂಸ್ಕೃತ ರೂಪವು ವೈದಂಡಿಕಂ ಎಂದೂ ಅದು ಒಂದು ಕಾವ್ಯದ ಹೆಸರೆಂದೂ ಕೇಶಿರಾಜನ 'ಶಬ್ದಮಣಿದರ್ಪಣ'ದಿಂದ ತಿಳಿಯುವುದು. ಆದ್ದರಿಂದ, ಕನ್ನಡ ಬೆದಂಡೆಯಂತಹದೇ ವೈದಂಡಿಕವೆಂಬ ಗೇಯ ಕಾವ್ಯವು ಸಂಸ್ಕೃತದಲ್ಲಿರಬೇಕು. ಇದುವರೆಗೆ ಅಂಥಾದ್ದು ಉಪಲಬ್ಧವಿಲ್ಲ. ಆದರೆ, ಸಂಗೀತಶಾಸ್ತ್ರ ಗ್ರಂಥದಲ್ಲಿ ಕಾಣುವ 'ಮಹಾಪ್ರಬಂಧ'ವೆಂಬುದೇ ಅದಾಗಿದ್ದಿರಲು ಕಾರಣ ಉಂಟು.

ಇನ್ನೀಗ ಯಕ್ಷಗಾನವೆಂಬ ಹೆಸರು ಯಾವುದರಿಂದ ಬಂತು, ಎಂಬ ವಿಚಾರ. ಈ ಹೆಸರು ಪ್ರಬಂಧವಾಚಕವಾಗಿರುವುದೆಂಬುದನ್ನು ಹಿಂದೆ ನೋಡಿದೆವು. ಯಕ್ಷಗಾನ ಎಂದರೆ ಯಕ್ಷಪ್ರಬಂಧ ಎಂದರ್ಥ. ಈ ಸಮಸ್ತಪದದಲ್ಲಿ ಯಕ್ಷ ಶಬ್ದವು ಗಾನ ಶಬ್ದಕ್ಕೆ ವಿಶೇಷ ವಾಗಿ ಇದೆ. 'ಯಕ್ಷ' ಎಂಬ ಧಾತುವಿಗೆ ಪೂಜೆ ಅಥವಾ ಆರಾಧನೆ ಎಂಬುದೇ ನಿಜಾರ್ಥ ಎಂದು ಪಾಣಿನಿಯ ಧಾತುಪಾಠದಿಂದ ತಿಳಿಯುವುದು- (ಯಕ್ಷ- ಪೂಚಾಯಾಂ), ಆಷ್ಟೆ, ಸಂಸ್ಕೃತ ನಿಘಂಟುವಿನಲ್ಲಿಯೂ ಯಕ್ಷ = ೧.೧೦A (ಆತ್ಮನೇ ಪದ). to honour, adore, worship, ಎಂಬ ಅರ್ಥ ಕೊಡಲಾಗಿದೆ. ಅಲ್ಲದೆ ಈ ಧಾತುವಿನಿಂದ ನಿಷ್ಪನ್ನ ವಾದ ಯಕ್ಷಃ ಎಂಬ ಪುಲ್ಲಿಂಗ ರೂಪಕ್ಕೂ Worship (ಪೂಜೆ) ಎಂಬ ಅರ್ಥವಿರುತ್ತದೆ. ಆದುದರಿಂದ ಯಕ್ಷಗಾನವೆಂದರೆ ಪೂಜಾಪ್ರಬಂಧವೆಂದಾಗುವುದು. ಎಂದರೆ ಪೂಜೆಗಾಗಿ ಇರುವ ಪ್ರಬಂಧವೆಂದರ್ಥ. ಅದಿಲ್ಲದ ಉಚಿತವಾದ ಬೇರೆ ಅರ್ಥ ಕಾಣುವುದಿಲ್ಲ. ಆದ್ದರಿಂದ 'ಯಕ್ಷಗಾನ'ವೆಂಬ ಸಮಸ್ತಪದಕ್ಕೆ 'ಯಕ್ಷಾರ್ಥಂ ಗಾನಂ-ಯಕ್ಷಗಾನಂ' ಎಂದು ವಿಗ್ರಹವಾಕ್ಯವಾಗುವುದು. ಅರ್ಥ-ಪೂಜಾಪ್ರಬಂಧ.

ಸಂಸ್ಕೃತದಲ್ಲಿ ಕ್ಷೇಮೇಂದ್ರನೆಂಬ ಪ್ರಸಿದ್ಧ ಕವಿಯು (ಕ್ರಿ. ಶ. ೧೧೦೦-೧೨೦೦) 'ದಶಾವತಾರ ಚರಿತ'ವೆಂಬ ಗೀತ ಪ್ರಬಂಧವನ್ನು ರಚಿಸಿ ಅದನ್ನು 'ಪೂಜಾ ಪ್ರಬಂಧ ಎಂದು ಕರೆದಿರುತ್ತಾನೆ. ಇದರಲ್ಲಿ ಕೃಷ್ಣಾವತಾರದ ಮಹಾತ್ಮವು ಮಿಕ್ಕೆಲ್ಲ ಅವತಾರ ಗಳಿಗಿಂತ ವಿಸ್ತಾರವಾಗಿಯೂ ಬಹಳ ರಸವತ್ತಾಗಿಯೂ ವರ್ಣಿಸಲ್ಪಟ್ಟಿದೆ. ಜಯದೇವ ಕವಿಯ ಗೀತಗೋವಿಂದವು ಈ ಗ್ರಂಥದಿಂದ ಪ್ರಭಾವಿತವಾಗಿರುವುದೆಂದು ವಿದ್ವಾಂಸರ ಅಭಿಪ್ರಾಯವಿದೆ. ಇವೆರಡೂ ಪ್ರಬಂಧಗಳು - ದೇವಸ್ಥಾನಗಳಲ್ಲಿ ಗೀತಾರಾಧನೆ, ನಾಟ್ಯಾರಾಧನೆಗೆ ಸಲ್ಲುತ್ತಿದ್ದವೆಂದೂ ತಿಳಿಯುವುದು. ಆಂಧ್ರ, ಕನ್ನಡ, ತಮಿಳು ಯಕ್ಷಗಾನಗಳಲ್ಲೆಲ್ಲ ದಶಾವತಾರಸ್ತುತಿಗೆ ವಿಶೇಷ ಪ್ರಾಧಾನ್ಯವಿರುವುದನ್ನು ಕಾಣ ಬಹುದು. ಸಭಾಲಕ್ಷಣವೆಂಬ ಬಯಲಾಟದ ಪೂರ್ವರಂಗ ವಿಧಿಯು ದಶಾವತಾರ ಸ್ತುತಿ ಶ್ಲೋಕಗಳಿಂದಲೇ, ಪ್ರಾರಂಭವಾಗುವುದು. ಆಮೇಲೆ ದಶಾವತಾರಸ್ತುತಿ ದಶಾವತಾರಸ್ತುತಿ ಕೀರ್ತನೆ ಗಳೊಂದಿಗೆ ದಶಾವತಾರ ದಶಾವತಾರ ನೃತ್ಯ ನಡೆಯಬೇಕು. ಬಾಲಗೋಪಾಲರ ನರ್ತನಕ್ಕೆ, ದಶಾವತಾರ ಸ್ತುತಿಪದ ಹಾಡಬೇಕು. ಸ್ತ್ರೀವೇಷಗಳ ವೃಂದವನ್ನು ಕುಣಿಸಲಿಕ್ಕಿರುವ 'ಅವತಾರ ಸಂವಾದ' ಎಂಬ ಪದ್ಯಗಳು ಬೇರೆ ಇವೆ. ಯಕ್ಷಗಾನ ಕವಿಗಳು ತಮ್ಮ ಕೃತಿಗಳ ಆದಿ ಮಧ್ಯಾಂತಗಳಲ್ಲಿ ಸಹ ದಶಾವತಾರ ಸ್ತುತಿಪದ್ಯಗಳನ್ನು ರಚಿಸಿರುವುದನ್ನು ಸಾಮಾನ್ಯವಾಗಿ ಕಾಣಬಹುದು. ಅಲ್ಲದೆ ಯಕ್ಷಗಾನ ಮೇಳಗಳೆಲ್ಲವೂ ಒಂದೊಂದು ದೇವಸ್ಥಾನವನ್ನು ಹೊಂದಿಕೊಂಡೇ ಇರುವಂತಹವು. ಮೊದಲಿಂದಲೂ ಇವು ದೇವಸ್ಥಾನದ ಸೊತ್ತಾಗಿಯೇ ನಡೆದು ಬಂದಿದೆ ಎಂಬುದು ದೇವಸ್ಥಾನಗಳಲ್ಲೇ ದೊರೆತಿರುವ ಶಾಸನಾದಿಗಳಿಂದ ವ್ಯಕ್ತವಾಗುವುದು. ಯಕ್ಷಗಾನ ಸೇವೆಗಳಿಗಾಗಿ ಉಂಬಳಿ, ಉತಾರಗಳನ್ನು ಕೊಟ್ಟಿರುವ ದಾಖಲೆಗಳು ದೇವಸ್ಥಾನಗಳಲ್ಲಿ ದೊರೆಯುತ್ತವೆ. ಪ್ರತಿಯೊಬ್ಬ ಯಕ್ಷಗಾನಕವಿಯೂ ಕೃತಿಯ ಕೊನೆಯಲ್ಲಿ ಮಂಗಳಾರತಿ ಹಾಡುಗಳನ್ನು