ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೨ / ಕುಕ್ಕಿಲ ಸಂಪುಟ
-ಎಂದು ಶಾರ್ಙ್ಗದೇವನ ಅಭಿಪ್ರಾಯಕ್ಕೆ ಸಮನಾಗಿಯೇ ನಿರೂಪಿತವಾಗಿದೆ.
ಹೀಗೆಯೇ ಇತರ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿಯೂ ಇದೆ. ಉದಾ : ಸಂಗೀತ ಸಾರಾಮೃತ (ಪುಟ ೭೫), ಸಂಗೀತ ದರ್ಪಣ (ಶ್ಲೋಕ ೩೪೪-೩೪೫) ಇತ್ಯಾದಿ.
ಪ್ರೊಫೆಸರ್ ಸಾಂಬಮೂರ್ತಿಯವರು ರಚಿಸಿದ Dictionary of South Indian Music ಎಂಬ ಪರಿಭಾಷಾ ಶಬ್ದಕೋಶದಲ್ಲಿ, "Ekalan = a person who is able to sing by himself without the aid of any accompanyment” ಎಂದಿದೆ.
ಸಾಧಾರಣವಾಗಿ ನಾವು 'ಗಾಯನ' ಎಂಬ ಶಬ್ದವನ್ನು ಹಾಡುವಿಕೆ ಎಂಬರ್ಥದಲ್ಲಿ ಬಳಸುತ್ತಿದ್ದರೂ, ಸಂಸ್ಕೃತದಲ್ಲಿ ಅದು 'ಗಾಯಕ' ಎಂಬರ್ಥವನ್ನು ಕೊಡುತ್ತದೆ. ಸರ್ವ ಮಾನ್ಯವಾದ ಆಪಟೆಯವರ ಸಂಸ್ಕೃತ ಕೋಶದಲ್ಲಿ- 'ಗಾಯನಃ' ಎಂಬ ಪುಲ್ಲಿಂಗ ರೂಪಕ್ಕೆ a singer ಎಂದೂ, ಅದರ ಸ್ತ್ರೀರೂಪವು 'ಗಾಯನೀ' ಎಂದೂ, 'ಗಾಯನಮ್' ಎಂಬ ನಪುಂಸಕ ರೂಪಕ್ಕೆ ಮಾತ್ರ ಹಾಡುವಿಕೆ ಎಂಬ ಅರ್ಥವೆಂದೂ ಇದೆ. ಮತ್ತು ಅದೇ ಕೋಶದಲ್ಲಿ 'ಏಕಲ' ಎಂಬ ಶಬ್ದಕ್ಕೆ alone, solitary ಎಂಬ ಅರ್ಥಗಳಿವೆ. . L
ಹಾಡುಗಾರ (ಗಾಯಕ) ಎಂಬರ್ಥದ 'ಗಾಯನ' ಎಂಬ ಶಬ್ದವೇ ತದ್ಭವವಾಗಿ 'ಗಾಣ' ಎಂದಾಗಿದೆಯೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಕನ್ನಡದ ಸೋದರಿಯಾದ ತೆಲುಗಿನಲ್ಲಿ, 'ಗಾಣ' ಅಥವಾ 'ಗಾಣುಡು' ಎಂದರೆ ಹಾಡುವವನು ಎಂದೇ ಅರ್ಥ. ಆ ಭಾಷೆಯಲ್ಲಿ ಹಾಡುವವಳಿಗೆ 'ಗಾಣಿ' ಎನ್ನುವರು. (ಕೆ. ಸುಬ್ಬರಾಮಪ್ಪನವರು ಪ್ರಕಟಿಸಿದ ತೆಲುಗು ಪಾಠಗಳು ಎಂಬ ಪುಸ್ತಕವನ್ನು ನೋಡಬಹುದು.) P. Shankara- narayana, M.A., M.R.A.S., ಇವರು ರಚಿಸಿದ ತೆಲುಗು-ಇಂಗ್ಲಿಷ್ ಕೋಶದಲ್ಲಿ (ಪುಟ ೩೭೮) 'ಗಾಣೀ = Songstress' ಎಂದೂ, 'ಗಾಣುಡು = Singer' ಎಂದೂ ಅರ್ಥ ಕೊಡಲಾಗಿದೆ. 'ಗಾಯನಿ' 'ಗಾಯನುಡು' ಎಂಬ ಶಬ್ದಗಳಿಗೂ ಅನುಕ್ರಮವಾಗಿ ಅವೇ ಅರ್ಥಗಳನ್ನು ಅಲ್ಲಿ ಕೊಟ್ಟಿರುತ್ತಾರೆ. ಕನ್ನಡದಲ್ಲಿಯೂ, ಗಾಯಕ ಎಂಬರ್ಥದ 'ಗಾಯನ' ಶಬ್ದವು 'ಗಾಣ' ಎಂದಾದುದಕ್ಕೆ ನಿದರ್ಶನಗಳಿವೆ. ಪಂಪಭಾರತದ ೫ನೆಯ ಆಶ್ವಾಸದ ೫೮ನೆಯ ಪದ್ಯವಿದು :

ತುರಗಚಯಂಗಳಂತಿರೆ ತರಂಗಚಯಂ, ಚಮರೀರುಹಂಗಳಂ ತಿರೆ ಕಳಹಂಸ, ಬೆಳ್ಕೊಡೆಗಳಂತಿರೆ ಬೆಳ್ಳೂರೆ, ಗೊಟ್ಟಿಗಾಣರಂ ತಿರ ಮರಿದುಂಬಿ, ಮೇಳದವರಂತಿರ ಸಾರಿಕೆ, ರಾಜಗೇಹದಂ ತಿರೆ ಕೊಳನಲ್ಲಿ ತಾಮರಸರಂತಿರೆ ತಾಮರಸಂಗಳೊಪ್ಪುಗುಂ

ಮೇಲೆ ಉದಾಹರಿಸಿದ ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ ಹೇಳಿದ ವೃಂದಗಾಯನರನ್ನೇ ಇಲ್ಲಿ ಪಂಪನು 'ಗೊಟ್ಟಿಗಾಣರ್' (ಗೋಷ್ಠಿ ವೃಂದ) ಎಂದಿರುವನೆಂಬುದು ಸ್ಪಷ್ಟ ಪದ್ಯದಲ್ಲಿ ಪ್ರಯುಕ್ತವಾದ ಮರಿದುಂಬಿ, ಸಾರಿಕೆ ಎಂಬ ಪದಗಳು (ಬಹುವಚನಾರ್ಥಕ ವಾದ) ಜಾತ್ಯೇಕ ಜಾತ್ಯೇಕ ವಚನಗಳೆಂಬುದನ್ನು ಕನ್ನಡ ವಿದ್ವಾಂಸರಿಗೆ ತಿಳಿಸಬೇಕಾದ ಆವಶ್ಯಕತೆಯಿಲ್ಲ.
. ಕರ್ಣಾಟಕ ಕವಿ ಚರಿತ್ರೆಯಲ್ಲಿ, ಚಂದ್ರಕವಿ (೧೫ನೆಯ ಶತಮಾನದ ಆದಿ)ಯ 'ವಿರೂಪಾಕ್ಷಾಸ್ಥಾನ' ಎಂಬ ಕಾವ್ಯದಿಂದ, ಸಂಗೀತ ವರ್ಣನೆಯ ಇದೊಂದು ಪದ್ಯವು ಉದ್ಧರಿಸಲ್ಪಟ್ಟಿದೆ :