ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮ / ಕುಕ್ಕಿಲ ಸಂಪುಟ

ಚೆನ್ನಪ್ಪನೆಂಬ ವೀರಶೈವಕವಿ ತನ್ನ 'ಶರಣಲೀಲೆ'ಯೆಂಬ ಕೃತಿಯಲ್ಲಿ 'ಶರಣಲೀಲಾ ಯಕ್ಷಗಾನವ ವಿರಚಿಸಿದೆನು' ಎಂದೂ ಹೇಳಿಕೊಂಡಿದ್ದಾರೆ; ಹೀಗೆ ಇನ್ನಿತರರೂ.

ರೂಢಿಯಲ್ಲಿಯೂ 'ಪಂಚವಟಿ ಯಕ್ಷಗಾನ', 'ಕರ್ಣಾರ್ಜುನ ಯಕ್ಷಗಾನ', 'ಗರುಡಾಚಲ ಯಕ್ಷಗಾನ', (ತೆಲುಗು), 'ಸುಗ್ರೀವವಿಜಯ ಯಕ್ಷಗಾನ' ಎಂಬಂತೆ ಪ್ರಬಂಧವಾಚಕವಾಗಿಯೇ ಈ ಹೆಸರು ವ್ಯವಹಾರದಲ್ಲಿರುವುದನ್ನು ಲಕ್ಷಿಸಬೇಕು.

ಸಂಗೀತ ಶಾಸ್ತ್ರಕರ್ತರೂ 'ಯಕ್ಷಗಾನ'ವನ್ನು ಪ್ರಬಂಧ ವಿಶೇಷವೆಂದು ಪರಿಗಣಿಸಿರುವುದನ್ನು ಕಾಣಬಹುದು. ತಂಜಾವೂರನ್ನಾಳಿದ ರಘುನಾಥ ನಾಯಕನ (ಕ್ರಿ. ಶತಕ ೧೭) ಆಸ್ಥಾನ ವಿದ್ವಾಂಸನಾಗಿದ್ದ ಗೋವಿಂದ ದೀಕ್ಷಿತನು 'ಸಂಗೀತಸುಧಾ' ಎಂಬ ಶಾಸ್ತ್ರ ಗ್ರಂಥದಲ್ಲಿ, ಆ ರಘುನಾಥ ನಾಯಕನು 'ರುಕ್ಮಿಣೀ ಸ್ವಯಂವರ'ವೆಂಬ 'ಯಕ್ಷಗಾನ'ವನ್ನು ರಚಿಸಿದ್ದನೆಂದು ಹೇಳುವ ಶ್ಲೋಕ ಹೀಗಿದೆ :

ಶ್ರೀರುಕ್ಮಿಣೀಕೃಷ್ಣವಿವಾಹ ಯಕ್ಷಗಾನಂ, ಪ್ರಬಂಧಾನಪಿ ನೈಕಭೇದಾನ್|
ನಿರ್ಮಾಯ ವಾಗ್ಭಿಃ ಪ್ರಣತಾರ್ಥಭಾಗ್ಭಿರ್ವಿದ್ವತ್ಕವೀನಾಂ ವಿದಧಾಸಿ ಹರ್ಷ೦||

(೧-೬೩)

ಇದಿಷ್ಟು ಯಾಕೆ ಹೇಳಿದೆನೆಂದರೆ- ನಮ್ಮಲ್ಲಿ ಕೆಲವರು 'ಗಾನ' ಶಬ್ದಕ್ಕೆ ಗಾನಶೈಲಿ ಎಂಬ ಅರ್ಥ ಮಾಡಿಕೊಂಡು ಯಕ್ಷಗಾನವೆಂಬ ಹೆಸರು, ಶಾಸ್ತ್ರೀಯ ಸಂಗೀತಕ್ಕಿಂತ ಭಿನ್ನವಾದ, ಮಲೆನಾಡಿನ ಒಂದು ವಿಶೇಷ ಜಾನಪದ ಧಾಟಿಯೆಂಬುದರಿಂದ ಬಂದುದಿರಬೇಕೆಂದು ಭಾವಿಸುತ್ತಿರುವುದರಿಂದ.

ಕನ್ನಡದಲ್ಲಿ 'ಹಾಡು' ಎಂಬ ಶಬ್ದಕ್ಕೆ ಹಾಡಲಿಕ್ಕಿರುವ ಪದ್ಯ ಹಾಗೂ ಅನೇಕ ಪದ್ಯಗಳುಳ್ಳ 'ಹಾಡುಗಬ್ಬ' ಎಂಬ ಅರ್ಥವಿರುವಂತೆ ಸಂಸ್ಕೃತ 'ಗಾನ' ಶಬ್ದಕ್ಕೂ ಅದೇ ಅರ್ಥವಿರುವುದೆಂಬುದನ್ನು ಸ್ಮರಿಸಿಕೊಳ್ಳಬೇಕು. ಕನ್ನಡ ಗೇಯಕಾವ್ಯಕ್ಕೆ 'ಹಾಡು' ಎಂಬ ಹೆಸರಿದ್ದುದಕ್ಕೆ ನಾಗವರ್ಮನ 'ಕಾವ್ಯಾವಲೋಕ'ನದ ಈ ಲಕ್ಷಣ ಪದ್ಯಗಳನ್ನು ಪರಿಭಾವಿಸಬಹುದು-

ಸಂದಿಸಿರೆ ಕಂದಮುಂ ಪೆರ
ತೊಂದರಿಕೆಯ ವೃತ್ತಜಾತಿಯುಂ ಪದಮವು ತ|
ಳ್ತೊಂದಿರೆ ಪನ್ನೆರಡುವರಂ
ಸಂದುದು ಮೆಲ್ಬಾಡೆನಿಕ್ಕುಮದು ಕನ್ನಡದೊಳ್ ǁǁ೯೫೨ǁ

ಪದಿನೈದುಮಿರ್ಪತೈದುಂ
ಪದಂ ಯಥಾಸಂಭವಂ ಪ್ರಬಂಧದ ಮೆಯ್ಯೊಳ್ |
ಪುದಿದೊದವಿ ನಿಂದೊಡಂತದು
ಸದಲ೦ಕಾರಂ ರಸಾಸ್ಪದಂ ಪಾಡಕ್ಕುಂ ǁǁ೯೫೩ǁ

ಕಂದ ವೃತ್ತಗಳಲ್ಲದೆ ಹನ್ನೆರಡಕ್ಕೆ ಒಳಪಟ್ಟು ಸಂಖ್ಯೆಯ 'ಪದ'ಗಳೂ ಎಂದರೆ, ತಾಳಬದ್ಧವಾದ ಹಾಡುವ ಪದ್ಯಗಳೂ ಇರುವ ಚಿಕ್ಕ ಪ್ರಬಂಧವಾದರೆ ಅದು 'ಮಲ್‌‍ವಾಡು'. ಹದಿನೈದೋ, ಇಪ್ಪತೈದೋ ಅಥವಾ ಕಥಾಗೌರವಕ್ಕೆ ತಕ್ಕಂತೆ ಮತ್ತಷ್ಟು ಪದಗಳು ಹಾಗೂ ಕಂದವೃತ್ತಾದಿ ಛಂದಸ್ಸುಗಳು ಸೇರಿರುವ ಪ್ರಬಂಧವಾದರೆ ಅದು 'ಹಾಡು' ಎಂದು ಕರೆಯಲ್ಪಡುತ್ತದೆ ಎಂದು ಮೇಲಿನ ಪದ್ಯಗಳ ತಾತ್ಪರ್ಯ.