ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - 'ತಾಳಮದ್ದಳೆ' / ೧೧೭

ಸ್ತ್ರೀವೇಷಗಳ ವೃಂದವನ್ನು (ಗೋಪಸ್ತ್ರೀಯರು), 'ಅವತಾರಸಂವಾದ'ವೆಂಬ ಪದ್ಯಗಳನ್ನು ಹಾಡಿ ಕುಣಿಸುವ ಸಂಪ್ರದಾಯ ಬೇರೆ ನಡೆದಿದೆ. ಹೀಗಿರುವುದರಿಂದಲೇ ಬಯಲಾಟಕ್ಕೆ 'ದಶಾವತಾರ ಆಟ'ವೆಂಬ ಹೆಸರು ರೂಢಿಯಲ್ಲಿ ಬಂದಿರುವುದೆಂದು ನ್ಯಾಯವಾಗಿ ಊಹಿಸಬಹುದು. ಯಕ್ಷಗಾನ ಕೃತಿಗಳಲ್ಲಿಯೂ ಕವಿಗಳು ದಶಾವತಾರದ ಸ್ತುತಿಪದ್ಯಗಳನ್ನು ರಚಿಸಿರುವುದು ಸರ್ವಸಾಮಾನ್ಯವಾಗಿದೆ.

'ಯಕ್ಷಗಾನ'ವೆಂಬ ಹೆಸರಿಗೆ ಏನರ್ಥ? ಈ ಕೃತಿರಚನೆ ಎಂದಿನಿಂದ ಪ್ರಾರಂಭವಾಗಿರಬೇಕು? ಎಂದರೆ- ಅನಂತರ ವಿಜಯನಗರ ಸಾಮ್ರಾಜ್ಯದ ಅಭ್ಯುದಯಕಾಲದಲ್ಲಿ, ವ್ಯಾಸಕೂಟ ದಾಸಕೂಟಗಳ ಹಾಗೂ ವೀರಶೈವ ಹರದಾಸಕೂಟದ ಪ್ರಭಾವದಿಂದ ಆಂಧ್ರ, ಕರ್ಣಾಟಕಗಳ ದೇವಾಲಯಗಳಲ್ಲಿ ನಡೆಯುತ್ತಿದ್ದ ಸಂಗೀತನಾಟ್ಯ ಸೇವೆಗಳಲ್ಲಿ ಸಂಸ್ಕೃತ ಪೂಜಾಪ್ರಬಂಧಗಳ ಬದಲು ಆಂಧ್ರ ಮತ್ತು ಕನ್ನಡ ಭಾಷಾರಚನೆಗಳು 'ಯಕ್ಷಗಾನ'ಗಳೆಂಬ ಹೆಸರಿನಿಂದ ಪ್ರಯೋಗಕ್ಕೆ ಬಂದವು. ಈ ಹೆಸರಿಗಾದರೂ ಪೂಜಾಪ್ರಬಂಧವೆಂದೇ ಅರ್ಥ. ಯಕ್ಷ ಶಬ್ದಕ್ಕೆ ಪೂಜೆಯೆಂಬುದೇ ನಿಜಾರ್ಥ- 'ಯಕ್ಷ-ಪೂಜಾಯಾಂ' (ಪಾಣಿನಿ), ಗಾನವೆಂದರೆ ಗೇಯಪ್ರಬಂಧವೂ ಹೌದು. 'ಸಂಗೀತರತ್ನಾಕರ'ದಲ್ಲಿ ಶಾರ್ಙ್ಗದೇವನೇ (ಕ್ರಿ. ಶತಕ ೧೩) ಅದನ್ನು ಸ್ಪಷ್ಟಪಡಿಸಿರುತ್ತಾನೆ :

ಯತ್ತು ವಾಗ್ಗೇಯಕಾರೇಣ ರಚಿತಂ ಲಕ್ಷಣಾನ್ವಿತಂ |
ದೇಶೀರಾಗಾದಿಷು ಪ್ರೋಕ್ತಂ ತದ್ಗಾನಂ ಜನರಂಜನಂ ǁ(ಪ್ರಬಂಧಾಧ್ಯಾಯ-೩)

ಸಂಗೀತ ಸಾಹಿತ್ಯಗಳೆಂಬ ಉಭಯವಿದ್ಯೆಗಳಲ್ಲಿ ರಚನಾಸಾಮರ್ಥ್ಯವುಳ್ಳವರೇ ವಾಗ್ಗೇಯಕಾರರು, ಅವರೇ 'ಉಭಯಕಾರರು.' (ಇದೇ ತದ್ಭವವಾಗಿ ರೂಢಿಯಲ್ಲಿ 'ಬಯಕಾರ'ರೆಂಬ ರೂಪವನ್ನು ತಾಳಿದೆ. ಅಂಥವರಿಂದ ದೇಶಭಾಷೆಯಲ್ಲಿ, ಸಂಗೀತ ಶಾಸ್ತ್ರೋಕ್ತ ಲಕ್ಷಣಬದ್ಧವಾಗಿ ರಚಿಸಲ್ಪಟ್ಟ, ದೇಶೀ ರಾಗತಾಳಗಳಲ್ಲಿ ನಿಬದ್ಧವಾದ ಪ್ರಬಂಧವು 'ಗಾನ' ಎಂದು ಕರೆಯಲ್ಪಡುವುದೆಂದು ಮೇಲಿನ ಲಕ್ಷಣಶ್ಲೋಕದ ಅರ್ಥವಾಗಿದೆ. ಸಂಗೀತಶಾಸ್ತ್ರದಲ್ಲಿ 'ದೇಶಿ' ಎಂದರೆ ಜಾನಪದವಲ್ಲ, ಪುರಾತನ 'ಮಾರ್ಗಸಂಪ್ರದಾಯ'ಕ್ಕಿಂತ ಭಿನ್ನವಾದ್ದು ಎಂದರ್ಥ, ಪ್ರಚಲಿತ ಶಾಸ್ತ್ರೀಯ ಸಂಗೀತವೆಂಬುದು ದೇಶೀಸಂಗೀತ, ಆ ರಾಗ ತಾಳಗಳನ್ನೇ ಶಾರ್ಙ್ಗದೇವನು 'ದೇಶೀರಾಗಾದಿ'ಗಳೆಂದು ಕರೆದಿರುವುದೆಂಬುದು 'ಸಂಗೀತ ರತ್ನಾಕರ'ದಲ್ಲೇ ಸ್ಪಷ್ಟವಿದೆ. ಆದುದರಿಂದ 'ಯಕ್ಷಗಾನ'ವೆಂಬುದು ಶಾಸ್ತ್ರೀಯ ಸಂಗೀತದಲ್ಲಿ ಹಾಡತಕ್ಕ 'ಪೂಜಾಪ್ರಬಂಧ'ವೇ ಸರಿ. ಹೀಗೆ 'ದೇವರ ಪೂಜೆಗೆ ಉದ್ದಿಷ್ಟವಾಗಿರುವುದು' ಎಂಬ ಅರ್ಥದಲ್ಲಿ 'ಯಕ್ಷ' ಶಬ್ದವು ಸೇರಿದ ಹೆಸರುಗಳು ಕೆಲವು ಮೊದಲೂ ವ್ಯವಹಾರದಲ್ಲಿದ್ದವು. ಯಕ್ಷಗಂಧ, ಯಕ್ಷಕರ್ದಮ, ಯಕ್ಷಧೂಪ, ಯಕ್ಷಾಂದೋಳ ಇತ್ಯಾದಿ. 'ಯಕ್ಷಾಂದೋಳ'ವೆಂದರೆ ಇಂದ್ರೋತ್ಸವಕ್ಕೆ ವಿಶಿಷ್ಟವಾದ ಒಂದು ಸೇವಾವೃತ್ತವೆಂದು ಕಾವ್ಯಗಳಲ್ಲಿ ವರ್ಣಿಸಲ್ಪಟ್ಟಿದೆ.

ಆಂಧ್ರ ಕನ್ನಡ ಎರಡರಲ್ಲಿಯೂ ಯಕ್ಷಗಾನ ಕವಿಗಳು ಆ ಪ್ರಬಂಧಗಳನ್ನೇ ಸಾಮಾನ್ಯ ವಾಚಕವಾಗಿ 'ಯಕ್ಷಗಾನ'ವೆಂದು ಕರೆದಿರುವುದನ್ನು ಕಾಣಬಹುದು. ದೇವೀದಾಸನೆಂಬ ಕವಿ, ಕನ್ನಡ 'ದೇವೀಮಹಾತ್ಮ' ಎಂಬ ಯಕ್ಷಗಾನದಲ್ಲಿ- 'ಗ್ರಹಿಸಿಕೊಂಡಮಲದೇವೀ ಮಹಾತ್ಮಗಳ | ವಿಹಿತಮನನಾಗಿ ವರ ಯಕ್ಷಗಾನಗಳ | ಕೂಡಿ ತಿಳಿದಂತೊರೆವನತಿಭಕ್ತಿಯಿಂದ |' ಎಂದಿರುತ್ತಾನೆ.

ಹಲಸಿನಹಳ್ಳಿ ನರಸಿಂಹಶಾಸ್ತ್ರಿ ಎಂಬ ಪ್ರಸಿದ್ಧ ಯಕ್ಷಗಾನಕವಿ- 'ಸಿಂಧುಶಯನನ ದಯದಿ ಯಕ್ಷಗಾನವ ಗೈದೆ' ಎಂದು ತನ್ನ 'ರುಕ್ಕಾಂಗದಚರಿತ್ರೆ'ಯಲ್ಲಿಯೂ,