ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬ / ಕುಕ್ಕಿಲ ಸಂಪುಟ
ನಿರ್ವಹಿಸಲ್ಪಡುವುದಾಗಿದ್ದರೆ, 'ಕಾಲಕ್ಷೇಪ'ದಲ್ಲಿ 'ಚೆಂಡೆ'ಯೂ ಬಳಕೆಯಲ್ಲಿದ್ದ ವಾದ್ಯ, ಇಂದೂ ಉಪಯೋಗದಲ್ಲಿರುತ್ತದೆ ಎಂಬುದನ್ನು ಗಮನಿಸಬೇಕು.
ಸಂಗೀತ ನಾಟ್ಯಗಳ ಈ ಆರಾಧನಾಸಂಪ್ರದಾಯವು ನಮ್ಮ ದೇವಸ್ಥಾನಗಳಲ್ಲಿ ಬಹಳ ಹಿಂದಿನಿಂದ ನಡೆದುಬಂದಿತ್ತು; ವೈದಿಕ ಶೈವಧರ್ಮಗಳ ವ್ಯಾಪ್ತಿಯಿದ್ದ ಪೂರ್ವಕಾಲದಲ್ಲಿ, ವೇದೋಕ್ತ ಇತಿಹಾಸಗಳಲ್ಲಿ ರಚಿಸಲ್ಪಟ್ಟ ಸಂಸ್ಕೃತನಾಟಕಗಳಿಂದಲೂ, 'ದೇಶಿಕಾರ' ಪ್ರಬಂಧ, 'ದೇವಾರಪ್ರಬಂಧ'ಗಳೆಂಬ ಶಿವಮಾಹಾತ್ಮ ಕೀರ್ತನದ ಗೇಯ ರಚನೆ ಗಳಿಂದಲೂ ಈ ಸೇವೆಗಳು ನಡೆಯುತ್ತಿದ್ದವು. ದೇಶಿಕನ, ಎಂದರೆ ಶಿವನ ಆರಾಧನಾರ್ಥ ವಾದ ಪ್ರಬಂಧವೇ ದೇಶಿಕಾರಪ್ರಬಂಧ, ದೇವಾರವೆಂಬುದಕ್ಕೂ ಮಹಾದೇವನ ಆರಾಧನಾರ್ಥವಾದುದೆಂಬ ಅರ್ಥ. (ಅಥವಾ, 'ಧವಳಾಗಾರ' ಶಬ್ದವು 'ಧವಳಾರ'ವೆಂದಾ ದಂತೆ ಈ ಪದಗಳೂ 'ದೇಶಿಕಾಗಾರ' ಮತ್ತು 'ದೇವಾಗಾರ' ಶಬ್ದಗಳ ತದ್ಭವವಾಗಿರಲೂ ಬಹುದು.) ಅನಂತರ ಕಾಲದಲ್ಲಿ ಗೇಯ, ನಾಟ್ಯ ಎರಡಕ್ಕೂ ಪ್ರಶಸ್ತವಾದ ರಾಮಾಕ್ರೀಡ, ಹಲ್ಲೀಸ, ರಾಸಕ ಇತ್ಯಾದಿ ಉಪರೂಪಕಗಳೆಂದು ಹೆಸರಾದ 'ರಾಗಕಾವ್ಯಗಳು' ಈ ಸೇವೆ ಗಳಿಗೆ ಸಲ್ಲುತ್ತಿದ್ದವು. ಅನಂತರ ಕ್ರಿ. ಶ. ೧೦-೧೧ನೆ, ಶತಮಾನದ ಕಾಲದಲ್ಲಿ ವೈಷ್ಣವ ಧರ್ಮವು ಪ್ರಬಲವಾಗುತ್ತಾ ವಿಷ್ಣುವಿನ ದಶಾವತಾರ ಮಹಾತ್ಮಗಳನ್ನು ವರ್ಣಿಸುವ ನೂತನ ಗೀತಪ್ರಬಂಧಗಳು ಇದಕ್ಕಾಗಿ ಸಂಸ್ಕೃತದಲ್ಲಿ ರಚಿಸಲ್ಪಟ್ಟವು. ಇವುಗಳಲ್ಲಿ ಕ್ರಿ. ಶ. ೧೧ನೇ ಶತಕದ ಪೂರ್ವಾರ್ಧದಲ್ಲಿದ್ದವನಾದ 'ವ್ಯಾಸದಾಸ'ನೆಂಬ ಬಿರುದಿದ್ದ ಕಾಶ್ಮೀರದ ಕವಿ ಕ್ಷೇಮೇಂದ್ರನ 'ದಶಾವತಾರಚರಿತ'ವೆಂಬ ಪ್ರಬಂಧವು ಪ್ರಸಿದ್ಧವಾದುದು, ಈ ದಿಶೆ ಯಲ್ಲಿ ಪ್ರಾಯಶಃ ಅದೇ ಮೊದಲನೆಯದೂ ಆಗಿದೆ. ಒಂದೊಂದು ಅವತಾರದ ಕಥೆಗಳನ್ನು ಪ್ರತ್ಯೇಕ ಖಂಡಗಳಲ್ಲಿ ವರ್ಣಿಸಿರುವ ಈ ಪ್ರಬಂಧವನ್ನಾತನು, 'ಪೂಜನ ಪ್ರಬಂಧ'ವೆಂದೇ ಕರೆದಿರುವುದನ್ನು ಲಕ್ಷಿಸಬೇಕು, 'ಭಕ್ತಿವ್ಯಕ್ತದಶಾವತಾರಸರಸಃ ಪೂಜಾ ಪ್ರಬಂಧಃ ಕೃತಃ' ಎಂದುಕೊಂಡಿದ್ದಾನೆ. ಕೃಷ್ಣಾವತಾರ ಮಾಹಾತ್ಮವು ಮಿಕ್ಕೆಲ್ಲವುಗಳಿಗಿಂತ ವಿಸ್ತಾರವಾಗಿಯೂ, ಬಹಳ ರಸವತ್ತಾಗಿಯೂ ಇದರಲ್ಲಿ ವರ್ಣಿಸಲ್ಪಟ್ಟಿದೆ. ಕೃಷ್ಣ ಬಲರಾಮರ ಬಾಲಕ್ರೀಡಾವಿನೋದ, 'ಯಮುನಾತೀರದ ಕುಂಜವನ'ದಲ್ಲಿ ಶ್ರೀಕೃಷ್ಣ ಗೋಪಸ್ತ್ರೀಯರ, ವಿಶೇಷವಾಗಿ ವಿದಗ್ದೆಯಾದ ರಾಧೆಯ ಪ್ರಣಯಕೇಲಿ ವಿಲಾಸಗಳನ್ನು ಅತ್ಯಂತ ಮಧುರವಾಗಿ ವರ್ಣಿಸಿದ ಈ ಪ್ರಬಂಧದಿಂದ ಪ್ರಭಾವಿತನಾದವನೇ ಜಯದೇವ ಕವಿಯು, ಆ ಮುಂದೆ ಸ್ವಲ್ಪ ಕಾಲದಲ್ಲಿ 'ಗೀತ ಗೋವಿಂದ ಅಷ್ಟಪದೀಪ್ರಬಂಧ'ಗಳನ್ನು ದೇವಸ್ಥಾನಗಳ ಈ ಸೇವೆಗಾಗಿಯೇ ರಚಿಸಿದನು. ದಶಾವತಾರ ಸ್ತುತಿಯಿಂದಲೇ ಪ್ರಾರಂಭ ವಾಗುವ ಈ 'ಪೂಜಾಪ್ರಬಂಧ'ವು ಶಿವ ದೇವಾಲಯಗಳಲ್ಲಿಯೂ ಶ್ರೀಕೃಷ್ಣನ ವಿಗ್ರಹ ಪ್ರತಿಷ್ಠೆಗೆ ಕಾರಣವಾಗಿ ಸರ್ವತ್ರ ದೇವಸ್ಥಾನಗಳ ನಾಟ್ಯಾರಾಧನಕ್ಕೆ ಏಕೈಕ ಪ್ರಸಿದ್ಧವಾಗಿ ನಿಂತಿತ್ತೆಂಬುದು ಚರಿತ್ರಸಿದ್ಧವಾಗಿ ತಿಳಿದಿರುವ ವಿಚಾರ. ಅಂದಿನಿಂದ ನಮ್ಮ ಯಾವತ್ತೂ ನೃತ್ಯಪದ್ಧತಿಗಳು ದಶಾವತಾರಸ್ತುತಿ ಪೂರ್ವಕವಾಗಿ ನಡೆಯುವ ಸಂಪ್ರದಾಯ ವುಂಟಾಯಿತು.
ಯಕ್ಷಗಾನ ಆಟಗಳಲ್ಲಿ ಈ ದಶಾವತಾರಸ್ತುತಿಗೆ ವಿಶೇಷ ಮಹತ್ವವಿರುವುದನ್ನು ಕಾಣಬಹುದು. 'ಸಭಾವಂದನ'ವೆಂಬ ಪೂರ್ವರಂಗವಿಧಿಯು ದಶಾವತಾರಸ್ತುತಿ ಶ್ಲೋಕ ಗಳಿಂದಲೇ ಪ್ರಾರಂಭವಾಗುವುದು. ಆಮೇಲೆ ಮೊದಲಾಗಿ ದಶಾವತಾರ ಸ್ತುತಿವೃತ್ತ ನಡೆಯಬೇಕು, 'ಬಾಲಗೋಪಾಲರ ನರ್ತನದಲ್ಲಿ ದಶಾವತಾರಕೀರ್ತನೆ ಹಾಡಬೇಕು, ಕೋಡಂಗಿಗಳು ಪದೇಪದೇ 'ಹತ್ತವತಾರಾ ಗೋವಿಂದಾ' ಎಂದು ಘೋಷಿಸುತ್ತಿರಬೇಕು.