ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - 'ತಾಳಮದ್ದಳೆ' / ೧೨೩

ಭಾಗವತರು ತೀರಿಹೋದ ಮೇಲೆ ಆ ಶುದ್ಧ ಸಂಪ್ರದಾಯದ ಹಾಡುಗಾರಿಕೆಯೇ ಇಲ್ಲ ಎಂಬಂತಾಯಿತು. ಆಟದಲ್ಲಿಯಂತೂ ಅದು, ಊರಮೇಲೆ ತಿರಿದುಂಡು ಬದುಕಬೇಕಾದ ಸ್ಥಿತಿ ಬಂದಮೇಲೆ ಶುದ್ಧಾಶುದ್ಧ ವಿಚಾರವಿಲ್ಲದೆ ಹೇಗೋ ನಡೆಯುತ್ತ ಬಂದುದು, ಅದೇ ಈಗ ತಾಳಮದ್ದಳೆಗೂ ಸಾಮಾನ್ಯವಾಗಿದೆ; 'ಇದು ಕರ್ನಾಟಕ ಸಂಗೀತವಲ್ಲ, ಮಲೆನಾಡಿ ನಲ್ಲಿ ಹುಟ್ಟಿದ ಜಾನಪದಶೈಲಿ' ಎಂದಾದರೂ ಸಮರ್ಥಿಸಿಕೊಳ್ಳೋಣವೆಂಬ ಮಟ್ಟಕ್ಕೆ ಇಳಿದಿದೆ. ಇದೀಗ ವ್ಯಸನಾಸ್ಪದ.

'ತಾಳಮದ್ದಳೆ'ಯು ಉಳಿಯಬೇಕಾದ ವಸ್ತು. ಆದರೆ ಹಾಡುಗಾರಿಕೆ ಇದೇ ಸ್ಥಿತಿ ಯಲ್ಲಿದ್ದರೆ, ಅರ್ಥಗಾರಿಕೆ ಸುಧಾರಿಸಿದರೂ ಅದೊಂದೇ ಇದನ್ನು ಮುಂದಕ್ಕೆ ಉಳಿಸ ಲಾರದು. ಈಗ ಮೊದಲಿನಂತಲ್ಲ; ಸಂಗೀತ ಸಂಸ್ಕಾರವು ಜನಸಾಮಾನ್ಯರಲ್ಲಿಯೂ ಉಂಟಾಗಿದೆ. ಗಾನದಲ್ಲಿ ಆ ಗುಣಮಟ್ಟವಿಲ್ಲದೆ ಹೋದರೆ ಈ ಯಕ್ಷಗಾನವನ್ನು ಕೇಳುವ ಕಿವಿಗಳು. ಇನ್ನು ಸಿಕ್ಕುವುದು ಕಷ್ಟ, ಸಂಗೀತದ ಗಂಧವಿಲ್ಲದ ಯಕ್ಷಗಾನ ಭಾಗವತರು ಈಗ ಸಾಮಾನ್ಯವಾಗಿ ಹಾಡುತ್ತಿರುವಂತೆಯೇ ಈ ಗಾನವಿದ್ದರೆ 'ಜಾನಪದ'ವೆಂಬ ಸಮಾಧಾನದ ಮಾತಾಗಲಿ, ಭಾಷಣದ ಹೊಗಳಿಕೆಯಾಗಲಿ, ಆಕಾಶವಾಣಿಯ ಬಿತ್ತರಿಕೆ ಯಾಗಲಿ 'ತಾಳಮದ್ದಳೆ'ಯನ್ನು ಬಹಳ ದಿನ ಉಳಿಸಲಾರವು.

ಅರ್ಥಧಾರಿಗಳು ಪದ್ಯದ ಮೇರೆಮೀರಿ ಅತಿಪ್ರಸಂಗ ಮಾಡಬಾರದೆಂಬುದಕ್ಕೆ ಮಾರ್ಗದರ್ಶನಕ್ಕಾಗಿ ಈಗ ನಾಲ್ಕು ದಶಕಗಳ ಹಿಂದೆಯೇ, ಅನುಭವಸ್ಥರಾದ ಹಳೆಯ ಅರ್ಥಧಾರಿಗಳಲ್ಲಿ ಕೆಲವರು ಮೇಧಾವಿಗಳು ಒಂದೆರಡು ಯಕ್ಷಗಾನ ಪ್ರಸಂಗಗಳನ್ನು, ಪ್ರತಿ ಪದಕ್ಕೂ ಅರ್ಥ ಬರದು ಮಂಗಳೂರಿನಲ್ಲಿ ಅಚ್ಚುಹಾಕಿಸಿದ್ದುಂಟು. ಅದರಂತೆ ಇನ್ನೂ ಕೆಲವು ಪ್ರಸಿದ್ಧ ಪ್ರಸಂಗಗಳನ್ನು ತಜ್ಞರು ಅರ್ಥವಾಕ್ಯಗಳ ಸಮೇತ ಪ್ರಕಾಶಕ್ಕೆ ತರಬೇಕು. ಅಭ್ಯಾಸ ಮಾಡುವವರು ಮಾತಿನ ಇತಿಮಿತಿಯನ್ನು ಕಂಡುಕೊಳ್ಳುವುದಕ್ಕೆ ಅದು ಸಹಾಯಕವಾದೀತು.

ಹಾಡಲು ಕಲಿಯುವವರು ಮೊದಲಾಗಿ ಒಂದೆರಡು ವರ್ಷ ಸಂಗೀತಾಭ್ಯಾಸ ಮಾಡಿ ಸ್ವರಜ್ಞಾನ ಪಡೆದುಕೊಳ್ಳಬೇಕು. ಪ್ರಸಿದ್ಧ ರಾಗಗಳಲ್ಲಿ ಯಾವುದೇ ಪದ್ಯಗಳನ್ನು ಸ್ವಂತ ಮನೋಧರ್ಮದಿಂದ ಶುದ್ಧವಾಗಿ ಹಾಡಲಾಗುವಷ್ಟು ಸ್ವಾತಂತ್ರ್ಯವುಳ್ಳವರಾಗಿರಬೇಕು. ಆಮೇಲೆ ಯಕ್ಷಗಾನ ಪದ್ಯಗಳನ್ನು, ಬೇರೆ ಬೇರೆ ರಸಭಾವಾನುಗುಣವಾಗಿ ಹಾಡುವ 'ಗಮಕಕಲೆ'ಯನ್ನು ಪ್ರಯತ್ನದಿಂದ ಸಾಧಿಸಬೇಕು. ಭಕ್ತಿರಕಪ್ರಧಾನವಾದ ತ್ಯಾಗ ರಾಜಾದಿಗಳ ಕೀರ್ತನೆಗಳನ್ನು 'ಕಚೇರಿಸಂಗೀತ'ದಲ್ಲಿ ಹಾಡುವಂತೆ ಯಕ್ಷಗಾನ ಪದ್ಯ ಗಳನ್ನು ಹಾಡುವುದಲ್ಲವೆಂಬ ವಿವೇಕವಿರಬೇಕು: ಯಕ್ಷಗಾನದ ತಾಳನಿರೂಪಣೆಯ ವಿಶೇಷ ವಿಧಾನಗಳನ್ನರಿತುಕೊಳ್ಳಬೇಕು. ಮೃದಂಗ ಬಾರಿಸುವವರೂ, ಯಕ್ಷಗಾನಕ್ಕೆ ವಿಶಿಷ್ಟವಾದ 'ಜತಿನಡೆ'ಗಳನ್ನೂ, 'ಮುಗಿತಾಯ'ಗಳನ್ನೂ ವಿವಿಧ ರಸಭಾವಾಭಿಸಂಧಿ ಗಳಲ್ಲಿಗೆ ವಿಹಿತವಾಗಿರುವ 'ಏರುಪೇರು, ದಸ್ತು, ಧೀಂಗಿಣಾದಿ' ಪಾಟವಿಶೇಷಗಳನ್ನು ಕರಗತಮಾಡಿಕೊಳ್ಳಬೇಕು. ಇಷ್ಟು ತಯಾರಾದ 'ಕೂಟ'ದಿಂದ, ಸಂಪ್ರದಾಯವರಿತು ಪ್ರಯೋಗಿಸಲ್ಪಟ್ಟಿದ್ದಾದರೆ ಮಾತ್ರ ಅಂಥ 'ತಾಳಮದ್ದಳೆ'ಯು ಕರ್ಣಾಟಕ ಸಂಗೀತ ಸಾಹಿತ್ಯ ಸರಸ್ವತಿಗೆ ತುಳುನಾಡಿನ ಕಾಣಿಕೆಯ ವಿಶೇಷ ಕಂಠಾಭರಣವಾಗಿ ಉಳಿದೀತು.



(ಕಬ್ಬಿನಹಾಲು : ಕೆ. ವಿ. ಶಂಕರ ಗೌಡ ಅಭಿನಂದನ ಗ್ರಂಥ ೧೯೭೫)