ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦ | ಕುಕ್ಕಿಲ ಸಂಪುಟ

ಅನುಜ ಸಹಿತ ವೈಕುಂಠಕೆ ತೆರಳಿದ ವನಿತೆಯನೊಡಗೊಂಡು ಶ್ರೀರಾಮ |
ಮುನಿಪನ ಶಾಪದಿ ಯಾದವಕುಲ ಸಂಹರಣಕೆ ಮರುಗಿದ ಶ್ರೀಕೃಷ್ಣ ||

ಇನ್ನು 'ಕೃಷ್ಣ ಚರಿತೆ' (ಬಾಲಲೀಲೆ) ಪ್ರಸಂಗದ ಸಮಗ್ರ ಪರಿಚಯವು ತಮ್ಮಲ್ಲಿ ಹಲವರಿಗೆ ಇಲ್ಲದಿರಬಹುದು. ಇದನ್ನು ನೋಡದೆ ಪಾರ್ತಿಸುಬ್ಬನ ಪ್ರತ್ಯಕ್ಷ ದರ್ಶನವಾದಂತಾಗದು. ಇದೊಂದು ಸಾದ್ಯಂತ ಭಕ್ತಿ, ರಸಭಾವಿತವಾದ ಮಧುರಕವಿತೆ. 'ಜಾಲಮಾತುಗಳಲ್ಲ ಮಾನವರಾಳಿದಂಥ ಚರಿತ್ರೆಯಲ್ಲಿದು ಪೇಳಿಪೊಗಳಲು ಮುಕುತಿ ರಾಜ್ಯವನಾಳಬಹುದು' ಎಂದು ಪಾರ್ತಿಸುಬ್ಬನೆ ಇದರ ಮಹಿಮೆಯನ್ನು ಹೊಗಳಿದ್ದಾನೆ. ಈ ಪ್ರಬಂಧವು ಸುಬ್ಬನು 'ಯಕ್ಷಗಾನ ಕವಿ ಸಾರ್ವಭೌಮ'ನೆಂದು ಮಾತ್ರ ಅಲ್ಲ ಆತನು ಕನಕಪುರಂದರಾದಿ ಹರಿದಾಸರುಗಳಂತೆ ಭಕ್ತಶಿರೋಮಣಿಯೂ ಆಗಿದ್ದನೆಂದು ಸಾರುತ್ತದೆ. ಹೆಜ್ಜೆ ಹೆಜ್ಜೆಗೆ ಕಣ್ವಪುರ ಕೃಷ್ಣನನ್ನು ಕೊಂಡಾಡಿ ಕುಣಿದಿದ್ದಾನೆ. ತನ್ನ 'ರಾಮ ಚರಿತೆ'ಕೃತಿಯಲ್ಲಿ

ಹೃದಯಕಮಲವೆಂಬ ಹರಿವಾಣದೊಳು ದಿವ್ಯ |
ಸದಮಲ ಭಕ್ತಿರಸದ ತೈಲದಿ |
ಪದುಮನಾಭನ ನಾಮವೆಂಬ ಜ್ಯೋತಿಯ ತಂದು |
ಮುದದಿಂದ ಜ್ಞಾನದಾರತಿ ಎತ್ತಿರೇ ||

ಎಂದು ಹಾಡಿದ ಸುಬ್ಬನು 'ಕೃಷ್ಣ ಚರಿತೆ'ಯಲ್ಲಿ ಜ್ಞಾನ ಸುಧೆಯ ತೈಲದಿಂದ ಭಕ್ತಿಯ ಧವಳಾರತಿಯನ್ನು ಬೆಳಗಿದ್ದಾನೆ. ದಿಙ್ಮಾತ್ರ ದರ್ಶನಕ್ಕಾಗಿ ಈ ಪ್ರಬಂಧದಿಂದ ಕೆಲವು ಪದ್ಯಗಳನ್ನು ಓದಿ ಇಂದಿನ ಈ ಪ್ರಸಂಗಕ್ಕೆ ಮಂಗಲವನ್ನು ಮಾಡೋಣ.

ಕೃಷ್ಣ ಚರಿತೆ (ಬಾಲ ಲೀಲೆ)

ತ್ರಿವುಡೆತಾಳ

ಶ್ರೀ ಮಹೋನ್ನತ ಭಾಗವತವ |
ನಾ ಮಹಾಯೋಗೀಂದ್ರ ಶುಕನತಿ |
ಪ್ರೇಮದಿಂ ಪೇಳ್ವನು ಪರೀಕ್ಷಿತ | ಭೂಮಿಪತಿಗೆ |
ಆ ಪುರಾಣ ಕಥಾ ಸಮುದ್ರದಿ |
ಗೋಪಿಜನ ಲೀಲಾ ಚರಿತ್ರವ |
ನಾ ಪೊಗಳಿ ವರ್ಣಿಸುವೆನತಿ ಸಂ |ಕ್ಷೇಪದಿಂದ ||

ಇದು ಪಾರ್ತಿಸುಬ್ಬನು ಗ್ರಂಥಾರಂಭಕ್ಕೆ ಸಂಕ್ಷೇಪವಾಗಿ ಹೇಳಿದ ಕಥಾಸೂಚನೆ. ದ್ವಾಪರಯುಗದಲ್ಲಿ ದುಷ್ಟದೈತ್ಯರ ಉಪಹತಿಯಿಂದ ಸಂತಪ್ತಳಾದ ಭೂದೇವಿಯು'ಬಡಗೋವಿನ' ರೂಪಿನಲ್ಲಿ ಸತ್ಯಲೋಕಕ್ಕೆ ಹೋಗಿ ಸೃಷ್ಟಿಕರ್ತನಿಗೆ ದೂರಿಕೊಳ್ಳುವಲ್ಲಿಂದ ಕಥಾರಂಭ.

ಅಷ್ಟತಾಳ

ಕರುಣಿಸು ಕಮಲ ಸಂಜಾತ | ಅವ |
ಧರಿಸಿ ಲಾಲಿಪುದೆನ್ನ ಮಾತ ||
ದುರುಳದಾನವರು ಮಾಡುವ ದುಶ್ಚರಿತ್ರವ |