ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಥಕಳಿ / ೨೦೭

ಕೊಲ್ಲಂ ವರ್ಷ ೮೪೦-೯೨೦ರ ಮಧ್ಯಕಾಲದಲ್ಲಿದ್ದ ಕೊಟ್ಟಾಯಂ ಮಹಾರಾಜನೇ ಮೊದಲಿಗನಾಗಿದ್ದನು. ಮಹಾಭಾರತದ ಸಂದರ್ಭಗಳನ್ನು ಮೊತ್ತಮೊದಲಾಗಿ ಅಟ್ಟಕಥಗಳಾಗಿ ರಚಿಸಿದವನು ಇವನೇ ಕೊಟ್ಟಾರಕರನ ರಚನೆಗಳು ಸಂಸ್ಕೃತಾಭ್ಯಾಸವಿಲ್ಲದ ಸಾಮಾನ್ಯ ಜನರಿಗೂ ಅರ್ಥವಾಗುವಷ್ಟು ಸರಳವಾಗಿದ್ದರೆ, ಈತನ ಕೃತಿಗಳು ಹೆಚ್ಚು ಸಂಸ್ಕೃತಪ್ರಾಯವಾಗಿದ್ದು ಸಾಲಂಕಾರವಾದ ಪ್ರೌಢಕಾವ್ಯಗಳ ಶೈಲಿಯನ್ನು ಅನುಕರಿಸುವಂಥವು. ಈತನ ಕಾಲಕ್ಕೆ ನಟರು ಪದ್ಯಗಳನ್ನು ಹಾಡುವ ಸಂಪ್ರದಾಯವು ಅಳಿದು ಹೋಗಿತ್ತು. ಬಕವಧ, ಕಿಮ್ಮೀರ ವಧ, ನಿವಾತಕವಚವಧ, ಕಲ್ಯಾಣಸೌಗಂಧಿಕ ಎಂಬ ನಾಲ್ಕು ಕೃತಿಗಳನ್ನು ಈತನು ರಚಿಸಿದ್ದಾನೆ. ಉತ್ತರ ಕಾಲದಲ್ಲಿ ಹುಟ್ಟಿದ ಪ್ರಬಂಧಗಳಲ್ಲೆಲ್ಲ ಈ ನಾಲ್ಕು ಕೃತಿಗಳೇ ಅತ್ಯಂತ ಪ್ರಯೋಗಪ್ರಸಿದ್ಧಿಯನ್ನು ಪಡೆದಿರುತ್ತವೆ. ಆಮೇಲೆ ಭಾಗವತಾದಿ ಇತರ ಪೌರಾಣಿಕ ವಸ್ತುಗಳನ್ನು ರಚಿಸಿದವರಲ್ಲಿ ಉಣ್ಣಾಯಿ ವಾರಿಯರ್ ಎಂಬ ಪ್ರಸಿದ್ಧ ಕವಿಯೂ, ಕ್ರಿ. ಶ. ಹದಿನೆಂಟನೇ ಶತಕದ ಪೂರ್ವಾರ್ಧದಲ್ಲಿ ತಿರುವಾಂಕೋಡಿನಲ್ಲಿ ಆಳಿದ ಕಾರ್ತಿಕ ತಿರುನಾಳ್ ಮಹಾರಾಜ, ಇರಯಮ್ಮನ್ ತಂಬಿ,ಸ್ವಾತೀ ತಿರುನಾಳ್ ಮಹಾರಾಜ (ಕ್ರಿ. ಶ. ೧೯ರ ಪೂರ್ವಾರ್ಧ) ಮೊದಲಾದವರೂ ಪ್ರಸಿದ್ಧರಾಗಿದ್ದಾರೆ. ಕಾರ್ತಿಕ ತಿರುನಾಳ್ ಮಹಾರಾಜನ ಕೃತಿಗಳು ಕೊಟ್ಟಾರಕರನ ರಾಮನಾಟ್ಯದ ಆದರ್ಶದಲ್ಲಿಯೇ ರಚಿಸಲ್ಪಟ್ಟವುಗಳಾಗಿದ್ದರೂ ಭಾಷೆಯ ಮಟ್ಟಿಗೆ ಅವುಗಳಿಗಿಂತ ಹೆಚ್ಚು ಸಂಸ್ಕೃತಪ್ರಾಯವಾಗಿರುತ್ತವೆ. ಈತನು ರಾಜಸೂಯ, ಗಂಧರ್ವವಿಜಯ, ಸುಭದ್ರಾಹರಣ, ನರಕಾಸುರ ವಧ ಮುಂತಾದ ಏಳು ಆಟ ಕಥ ಪ್ರಬಂಧಗಳನ್ನು ರಚಿಸಿದ್ದಲ್ಲದೆ ಕಥಕಳಿ ಪ್ರಯೋಗಕ್ಕೆ ವಿಶೇಷ ಪ್ರೋತ್ಸಾಹವನ್ನಿತ್ತು ಪೋಷಿಸಿದ್ದಾನೆ.
ಸಂಗೀತ ಕಾವ್ಯ ನಾಟಕಾದಿಗಳಲ್ಲಿ ಅಸಾಧಾರಣ ಪಾಂಡಿತ್ಯವಿದ್ದ ಸ್ವಾತಿ ತಿರುನಾಳ್ ಮಹಾರಾಜನು ಅಂಬರೀಷ ಚರಿತ, ಪೂತನಾಮೋಕ್ಷ, ಪೌಂಡ್ರಕ ವಧ, ರುಕ್ಷ್ಮಿಣೀ ಸ್ವಯಂವರ ಎಂಬ ಕೃತಿಗಳನ್ನು ರಚಿಸಿದ್ದಾನೆ. ಈತನ ಕೃತಿಗಳಲ್ಲಿ ಕೊಟ್ಟಾಯಂ ರಾಜನ ಕೃತಿಗಳ ಪ್ರಭಾವವು ಸ್ಪಷ್ಟವಾಗಿ ಕಾಣುವುದು. ಅವನಂತೆ ಇವನೂ ಕೃತಿಮಧ್ಯದಲ್ಲಿ ಕೆಲವೊಂದು ಪ್ರಾಕೃತ ಭಾಷೆಯ ಪದ್ಯಗಳನ್ನು ರಚಿಸಿರುತ್ತಾನೆ.
ಈ ಪ್ರಕಾರ ಕಳೆದ ಶತಮಾನದವರೆಗೆ ರಚಿಸಲ್ಪಟ್ಟಿರುವ ಸುಮಾರು ಇನ್ನೂರಕ್ಕೂ ಮೇಲ್ಪಟ್ಟ ಆಟ ಕಥೆ ಪ್ರಬಂಧಗಳಲ್ಲಿ ಸುಮಾರು ೧೩೦ಕ್ಕೆ ಕಡಿಮೆ ಇಲ್ಲದಷ್ಟು ಕೃತಿಗಳು ಈಗ ಅಚ್ಚಾಗಿ ದೊರೆಯುತ್ತವೆ.
ಕಥಕಳಿಯು ವಾಚಕಾಭಿನಯ ಶೂನ್ಯವಾಗಿದ್ದು ಕೇವಲ 'ನಾಟ್ಯಧರ್ಮಿ'ಯಲ್ಲಿ ನಡೆಯುವ ಪ್ರಯೋಗವಾದುದರಿಂದ, ಕಥಾರಂಭಕ್ಕೆ ಮೊದಲಾಗಿ ನಡೆಯತಕ್ಕ ಪೂರ್ವರಂಗ ವಿಧಾನದಲ್ಲಿ, ಸಂಸ್ಕೃತ ನಾಟಕಗಳಿಗೆ ನಿಯತವಾಗಿದ್ದ 'ಭಾರತೀ ವೃತ್ತಿ' ಪ್ರಧಾನವಾದ ಹಾಸ್ಯಪ್ರಯೋಗಗಳು ಇದರಲ್ಲಿರುವುದಿಲ್ಲ. ಅಂತೆಯೇ ವಿದೂಷಕನ ಪಾತ್ರವೂ ಇರುವುದಿಲ್ಲ.
ಹೀಗೆ ಮಹಾರಾಜರುಗಳ ಪಾಲನ ಪೋಷಣದಿಂದ ಪರಮಾವಧಿ ಅಭಿವೃದ್ಧಿಗೆ ಬಂದಿದ್ದ ಈ ನಾಟ್ಯಕಲೆಯು ಅವರ ಕಾಲ ಕಳೆದಂತೆಲ್ಲ ಕ್ರಮವಾಗಿ ಕ್ಷೀಣಿಸುತ್ತ ಬಂದು ಕಳೆದ ಶತಮಾನದ ಅಂತ್ಯಕಾಲಕ್ಕಾಗುವಾಗ ಒಂದೊಮ್ಮೆಗೆ ನಷ್ಟಪ್ರಾಯವಾಯಿತು ಎನ್ನುವಷ್ಟೂ ಕ್ಷೀಣದೆಸೆಯನ್ನೂ ಹೊಂದಿತ್ತು. ಆದರೆ ಮತ್ತೆ ಈ ಶತಮಾನದ ಪೂರ್ವಾರ್ಧದಲ್ಲಿ ಕೇರಳದ ಮಹಾಕವಿ ದಿವಂಗತ ವಳ್ಳತ್ತೋಳ್ ನಾರಾಯಣ ಮೆನನ್