ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦೮ /ಕುಕ್ಕಿಲ ಸಂಪುಟ

ಅವರ ಸಾಹಸ ಪ್ರಯತ್ನಗಳಿಂದ ಪುನಃ ಊರ್ಜಿತಾವಸ್ಥೆಗೆ ಬಂದು ವಿಶ್ವವಿಖ್ಯಾತಿಯನ್ನು ಪಡೆದಿದೆ.
ಈಗ ಇರುವ ಇದರ ಪ್ರಯೋಗದಲ್ಲಿ ಹಿಂದೆ ಹೇಳಿದಂತಹ ಸಂಪ್ರದಾ ಭೇದಗಳಿರುವುದಿಲ್ಲ. ಹಿಂದಿನ ಎಲ್ಲ ಸಂಪ್ರದಾಯಗಳಲ್ಲಿ ಸಾರವತ್ತಾದ ಪ್ರಧಾನಾಂಶಗಳೆಲ್ಲ ಒಂದುಗೂಡಿ ಪುನರುತ್ತಿತವಾಗಿರುವ ಈಗಿನ ಕಥಕಳಿಯ ಪ್ರಯೋಗದಲ್ಲಿಯ ವೇಷರಚನಾದಿ ವಿಧಾನಗಳು ಸಂಕ್ಷೇಪವಾಗಿ ಹೀಗಿರುತ್ತವೆ : ಭೂಮಿಕೆಗಳ ಸ್ವಭಾವಕ್ಕೆತಕ್ಕಂತಹ ಮುಖದ ವರ್ಣಕ್ರಿಯೆಗನುಸಾರವಾಗಿ ಮಿನುಕ್ಕು, ಪಚ್ಚೆ, ಕತ್ತಿ, ಕರಿ, ತಾಡಿ ಎಂದು ವೇಷರಚನೆಯು ಐದು ವಿಧವಾಗಿರುತ್ತದೆ. ಸೌಮ್ಯ ಪ್ರಕೃತಿಯುಳ್ಳ ಋಷಿ, ಸ್ತ್ರೀ, ಬ್ರಾಹ್ಮಣ, ವಟು ಇತ್ಯಾದಿ ವೇಷಗಳ ಮುಖವರ್ಣಕ್ಕೆ 'ಮಿನುಕ್ಕು' ಎಂದು ಹೆಸರು. ಅರಿದಾಳ ಮತ್ತು ಕಾವಿ (ಚಾಯ) ಬಣ್ಣದ ಮಿಶ್ರಣದಿಂದ ತಯಾರಿಸುವ ಈ ಬಣ್ಣವನ್ನು ಮುಖಕ್ಕೆ ತೆಳ್ಳಗೆ ಹಚ್ಚಿ ಹೊಳಪಿಗಾಗಿ ಕೆಲವೊಂದು ಬಿಳಿ ಚುಕ್ಕೆಗಳನ್ನು ಹಾಕುತ್ತಾರೆ.
ಹಸುರು ಬಣ್ಣವನ್ನು ಮುಖಕ್ಕೆ ಲೇಪಿಸಿ ಎಡಕಿವಿಯಿಂದ ಬಲಕಿವಿಯವರೆಗೆ ಮುಖದ ಕೆಳಭಾಗದಲ್ಲಿ ಅರ್ಧವೃತ್ತಾಕಾರದಲ್ಲಿ ಬಿಳಿ 'ಚುಟ್ಟಿ'ಯನ್ನು ಹಿಡಿಸಿದರೆ ಅದಕ್ಕೆ 'ಪಚ್ಚ' ವೇಷವನ್ನುತ್ತಾರೆ. ರಾಮ, ಕೃಷ್ಣ, ಅರ್ಜುನ, ದೇವೇಂದ್ರ ಇತ್ಯಾದಿ ನಾಯಕ, ಉಪನಾಯಕರ ಪಾತ್ರಗಳಿಗೆ ಪಚ್ಚವೇಷವು ಪ್ರಶಸ್ತವಾಗಿರುವುದು.
ಪಚ್ಚೆ ಬಣ್ಣದ ಮುಖದ ಕಣ್ಣುಗಳ ಕೆಳಭಾಗ ಮತ್ತು ಮೇಲ್ಬಾಗದಲ್ಲಿ ಕೆಂಪುಬಣ್ಣದಿಂದ ಕತ್ತಿಯ ಆಕಾರವನ್ನು ಬರೆದು ಮೂಗಿನ ಮೇಲೆ ಬಿಳಿಯ 'ಚುಟ್ಟಿಪ್ಪೂ'ಗಳನ್ನು ಚಿತ್ರಿಸಿದರೆ ಅದಕ್ಕೆ 'ಕತ್ತಿ ವೇಷ'ವೆಂದು ಹೆಸರು. ಇದರಲ್ಲಿ ಗಿಡ್ಡ ಕತ್ತಿ(ಕುರುಂಗತ್ತಿ), ಉದ್ದಕತ್ತಿ (ನಿಡುಂಗತ್ತಿ) ಎಂಬ ಭೇದಗಳಿವೆ. ದುಶ್ಯಾಸನ, ಕೀಚಕ, ರಾವಣ, ಶಿಶುಪಾಲಾದಿ ಖಳನಾಯಕರ ಭೂಮಿಕೆಗಳಿಗೆ ಈ ವರ್ಣರಚನೆ ಇರುತ್ತದೆ.
ಗಡ್ಡಕಟ್ಟುವ ವೇಷಗಳಿಗೆ 'ತಾಡಿ' ವೇಷಗಳೆನ್ನುತ್ತಾರೆ. ಇದರಲ್ಲಿ ಬಿಳಿಗಡ್ಡಕ್ಕೆ 'ವೆಳ್ಳತ್ತಾಡಿ', ಕೆಂಪು ಗಡ್ಡಕ್ಕೆ 'ಚುವನ್ನತ್ತಾಡಿ', ಕಪ್ಪು ಗಡ್ಡಕ್ಕೆ 'ಕರ್ಪುತ್ತಾಡಿ' ಎಂಬ ಭೇದಗಳಿವೆ. ಬಿಳಿಗಡ್ಡದ ವೇಷಗಳ ಮುಖಕ್ಕೆ ಬಿಳಿ, ಕೆಂಪು, ಪಚ್ಚೆ, ಕರಿ ಎಂಬ ನಾಲ್ಕು ಬಣ್ಣಗಳನ್ನು ಹಾಕುತ್ತಾರೆ. ವಾಲಿ ಸುಗ್ರೀವಾದಿ ಕಪಿಗಳಿಗೆ ಮತ್ತು ರಾಕ್ಷಸರಿಗೆ ಕೆಂಪುಗಡ್ಡ ವಿರುತ್ತದೆ. ಆದರೆ ಹನುಮಂತನಿಗೆ ಮಾತ್ರ ಬಿಳಿಗಡ್ಡ. ಸಾಮಾನ್ಯ ಪುರುಷ ವೇಷಗಳಿಗೆ ಹೆಚ್ಚಾಗಿ ಕಪ್ಪು ಗಡ್ಡವಿರುತ್ತದೆ. ಶೂರ್ಪನಖಿ, ನಕ್ರತುಂಡಿ ಮೊದಲಾದ ರಾಕ್ಷಸ ಸ್ತ್ರೀವೇಷಗಳಿಗೆ ಮುಖಕ್ಕೆ ಕಪ್ಪು ಬಣ್ಣವನ್ನು ಹಚ್ಚುತ್ತಾರೆ. ಅವು 'ಕರಿ ವೇಷ'ಗಳು. ಅವರ ಉಡಿಗೆಗಳು ಕಪ್ಪಾಗಿರುತ್ತವೆ. ಮುಖವಿಡೀ ಕಪ್ಪುಬಣ್ಣ ಹಚ್ಚಿ ಬಾಯಿ ಮತ್ತು ಕಣ್ಣು ರೆಪ್ಪೆಗಳು ಮತ್ತು ಕಣ್ಣ ಸುತ್ತೂ ಮಾತ್ರ ಕೆಂಪು ಬಣ್ಣದ್ದಾಗಿರುತ್ತದೆ.
ವೇಷಗಳ ಶಿರೋಭೂಷಣಗಳಲ್ಲಿ ಮುಡಿ ಮತ್ತು ಕಿರೀಟ ಎಂಬ ಎರಡು ವಿಧ ಗಳಿರುತ್ತವೆ. ಕಿರೀಟಗಳಲ್ಲಿಯೂ ಮೂರು ಬಗೆಯ ಸಣ್ಣ ದೊಡ್ಡ ರಚನೆಗಳಿರುತ್ತವೆ. ಕತ್ತಿ, ಪಚ್ಚ ಮತ್ತು ಕೆಂಪು ಗಡ್ಡದ ವೇಷಗಳಿಗೆಲ್ಲ ಸಾಮಾನ್ಯವಾಗಿ ಕಿರೀಟಗಳನ್ನಿಡುತ್ತಾರೆ. ಹನುಮಂತ, ಬ್ರಹ್ಮ ಮೊದಲಾದ ಕೆಲವೊಂದು ವಿಶೇಷ ವೇಷಗಳಿಗೆ ಬಿಳಿಗಡ್ಡವಾದರೂ ಕಿರೀಟವುಂಟು. ರಾಮ, ಲಕ್ಷ್ಮಣ, ಕೃಷ್ಣ, ವಿಷ್ಣು ಇವರಿಗೆ ಪಚ್ಚವೇಷವಾಗಿದ್ದರೂ ಕಿರೀಟವಿರುವುದಿಲ್ಲ. ಕಿರೀಟವಿಲ್ಲದ ವೇಷಗಳ ತಲೆಯ ಮುಡಿಯನ್ನು ಕಟ್ಟುವ ವಿಶೇಷ ವಿಧಾನಕ್ಕೆ 'ಮುಡಿ' ಎಂದು ಹೆಸರು.