ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸೂಡ - ಸೂಳಾದಿ ಸಾಲಗ / ೨೪೩

ಎಂಬ ಎರಡು ಅರ್ಥಗಳಿವೆ ಎಂದು ಸ್ಪಷ್ಟವಾಗುವುದು. ಹೀಗಿರುವುದರಿಂದಲೆ ಕೇಶ ಬಂಧಕ್ಕೂ ಸೂಡು, ಸೂಡಿ ಎಂಬ ವ್ಯವಹಾರವು ಬಂದಿದೆ. ಬೇರೆ ಬೇರೆ ವಿಧಾನದಲ್ಲಿ ಕಟ್ಟಿಕೊಳ್ಳುವ ತುರುಬಿಗೆ ರಂಡೆಸೂಡಿ, ಅಂಬಡೆಸೂಡಿ, ಗಿಳಿಸೂಡಿ ಎಂದು ಕರೆಯುವು ದುಂಟು. ಹೀಗೆ ಸೂಡು ಎಂಬುದು ಬಂಧನಾರ್ಥದ ಧಾತುವಾಗಿರುವಾಗ ಕರ್ಮಾರ್ಥದಲ್ಲಿ ಅದು ಸೂಡ ಎಂದು ಅಕಾರಾಂತವಾಗಿರುವುದೂ ಸಹಜವೇ ಸರಿ. ಉಕಾರಾಂತ ಧಾತುಗಳು ಭಾವ ಮತ್ತು ಕರ್ಮಾರ್ಥದಲ್ಲಿ ಅಕಾರಾಂತವಾಗುತ್ತವೆ. ಉದಾ: ಸೋಲ್-ಸೋಲು, ಸೋಲ; ನೀಡು-ನೀಟ, ನೀಳ, ಹೂಡು-ಹೂಟ; ಓಡು-ಓಟ, ಪಾಡು-ಪಾಡು, ಪಾಟ ಇತ್ಯಾದಿ.

ಸಂಸ್ಕೃತದಲ್ಲಿರುವ ಚೂಡ ಎಂಬ ಪದವೂ ಈ ಸೂಡದ ರೂಪಾಂತರವಾಗಿದ್ದರೂ ಇರಬಹುದು. ಚಕಾರ ಸಕಾರಗಳು ಒಂದರ ಸ್ಥಾನದಲ್ಲಿ ಇನ್ನೊಂದು ಬರುವುದೇನೂ ವಿಶೇಷವಲ್ಲ. ಗೇಯ ಪ್ರಬಂಧಕ್ಕೂ 'ಚೂಡ' ಎಂಬ ವ್ಯವಹಾರವು ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಇದೆ. ಚಾಲುಕ್ಯ ಸೋಮೇಶ್ವರನ ಮಗ ಜಗದೇಕಮಲ್ಲನ 'ಸಂಗೀತ ಚೂಡಾಮಣಿ"ಯಲ್ಲಿ ಗೇಯಪ್ರಬಂಧಗಳನ್ನು ಸರ್ವತ್ರ 'ಚೂಡ' ಎಂದೇ ಕರೆಯಲಾಗಿದೆ. ಇತರ ಅನೇಕ ದೇಶೀಯ ಪದಗಳು ಸಂಸ್ಕೃತಕ್ಕೆ ಸೇರಿರುವಂತೆ ಕನ್ನಡದ ಸೂಡವು ಅಲ್ಲಿ ಚೂಡವಾಗಿ ಮಾರ್ಪಟ್ಟುದೆಂಬುದರಲ್ಲಿ ಸಂದೇಹ ಕಾಣುವುದಿಲ್ಲ. ಗೇಯಪ್ರಬಂಧವಾಚಕ ವಾಗಿ ಸೂಡ, ಸೂಲ, ಸೂಳ ಎಂಬ ಅಕಾರಾಂತ ರೂಪಗಳು ಮಾತ್ರವಲ್ಲ, ಸೂಲು, ಸೂಳು ಎಂಬ ರೂಪಗಳೂ ಗೀತ ವ್ಯವಹಾರದಲ್ಲಿವೆ. ದಕ್ಷಿಣ ಕನ್ನಡ - ಮತ್ತು ಕಾಸರಗೋಡು ಪ್ರಾಂತದ ನಮ್ಮ ಹವೀಕ ಸಮಾಜದ ಹೆಂಗುಸರು ಶುಭಶೋಭನಾದಿ ಉತ್ಸವಸಂದರ್ಭದಲ್ಲಿ ಹಾಡುವ ಮಂಗಳಗೀತಗಳ (ಸೋಬಾನೆಗಳ) ಒಂದೊಂದು ಗೇಯಭಾಗಗಳಿಗೆ 'ಸೂಲು'ಗಳೆಂಬ ಹೆಸರು ಪರಂಪರೆಯಿಂದ ರೂಢಿಯಲ್ಲಿದೆ. ಗದುಗಿನ ಭಾರತದಲ್ಲಿ ನಾರ್ಣಪ್ಪನೂ ಗೇಯಪ್ರಬಂಧಗಳನ್ನು 'ಸೂಳುಗಳು' ಎಂದು ಕರೆದಿದ್ದಾನೆ. ಇವೆಲ್ಲ ಪ್ರಮಾಣಗಳಿಂದ ಸೂಡು, ಸೂಡ, ಸೂಲು, ಸೂಲ, ಸೂಳು, ಸೂಳ, ಚೂಡ ಎಂಬ ಸಂಜ್ಞೆಗಳು ಒಂದೇ ಕನ್ನಡ ಪದದ ಏಕಾರ್ಥಬೋಧಕವಾದ : ಹಲವು ರೂಪಗಳೆಂದೂ ಸೂಡು ಎಂಬ ಪದಕ್ಕೆ ಕಟ್ಟು ಎಂಬ ಅರ್ಥವಿರುವುದರಿಂದಲೇ ಇವು ಪ್ರಬಂಧಶಬ್ದಕ್ಕೆ ಪರ್ಯಾಯವಾಗಿ ವ್ಯವಹಾರದಲ್ಲಿದ್ದುವೆಂದೂ ಸಿದ್ಧವಾಗುವುದು.

ಪ್ರಬಂಧಾರ್ಥದಲ್ಲಿರುವ ಸೂಳ ಅಥವಾ ಸೂಡ ಎಂಬ ಹೆಸರೇ ఆ ಗೇಯಸಹಿತವಾದ ನರ್ತನಕ್ಕೂ ಬಂದಿರುವುದೆಂದು ಲಕ್ಷಣಗ್ರಂಥಗಳಿಂದ ತಿಳಿಯುತ್ತದೆ. ಕರ್ಣಾಟಕ ದೇಶೀಯವೆಂದು ಪ್ರಸಿದ್ಧವಾಗಿದ್ದ `ಗೋಂಡಲಿ ಮೊದಲಾದ ಸ್ತ್ರೀನೃತ್ಯ


೧. ಮಲೆಯಾಳ ಭಾಷೆಯಲ್ಲಿ 'ಚೂಡು' 'ಚೂಟ್ಟು' ಎಂಬ ಪದಗಳು ಬಂಧನಾರ್ಥದ ಕ್ರಿಯಾಪದಗಳಾಗಿ ಧಾರಾಳ ವ್ಯವಹಾರದಲ್ಲಿವೆ. ನಿಘಂಟುವಿನಲ್ಲಿಯೂ ಹಾಗೆ ಇದೆ.

೨. 'ಮೇಳವರಿವುತ ವಾದ್ಯ ಸಾಧನ | ದೇಳಿಗೆಯ ಸಂಪೂರ್ಣ ಮಾರ್ಗದ ಸೂಳುಗಳ ಲಯ ಮಾನವರಿವವನವನೆ ಗಾಯಕನು || ಗದುಗಿನ ಭಾರತ, ಉದ್ಯೋಗಪರ್ವ, ಸಂಧಿ ೩ ಪದ್ಮ ೯೬, ಮೈಸೂರು ಸರಕಾರದ ಪ್ರಕಾಶನ.

೩. ಸಂ. ರ. ನರ್ತನಾಧ್ಯಾಯ ಶ್ಲೋ, ೧೨೭೯-೧೩೧೨ ಶುದ್ಧ ಸೂಡ, ಸಾಲಗಸೂಡ. ನೃತ್ಯಕ್ಕೆ 'ಪದ್ಧತಿ' ಎಂದು ಪಾರಿಭಾಷಿಕ ಸಂಜ್ಞೆ 'ಪರಿವಿಡಿ' ಎಂದರೂ ಇದುವೇ ಆಗಿದೆ.