ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೪೪ / ಕುಕ್ಕಿಲ ಸಂಪುಟ

ಪದ್ಧತಿಗಳಲ್ಲಿ ನರ್ತಕಿಯರು ಶುದ್ಧ ಸೂಡ, ಸಾಲಗಸೂಡಾದಿ ದೇಶೀಯ ಪ್ರಬಂಧಗಳನ್ನು ಹಾಡುತ್ತ ಆ ಪ್ರಬಂಧಗಳ ಭಾವತಾಳಗಳಲ್ಲಿ ಕುಣಿಯುತ್ತಿದ್ದುದು 'ಪದ್ಧತಿ', ಇಂತಹ ವೃತ್ತ ಭೇದಗಳಿಗೆ ಸೂಡನೃತ್ತಗಳೆಂದು ಲಕ್ಷಣಗ್ರಂಥಗಳಲ್ಲಿ ಹೆಸರಿದೆ. ಗೀತಗಳಲ್ಲಿದ್ದಂತೆ ಶುದ್ಧ ಸಾಲಗಾದಿ ಭಿನ್ನ ಪ್ರಕಾರಗಳು ಈ ಸೂಡನೃತ್ತದಲ್ಲೂ ಇದ್ದುವು. ಇದರಿಂದ ಇನ್ನೂ ಒಂದು ಅನುಮಾನವೂ ಸಹಜವಾಗಿ ಹುಟ್ಟುವುದೆಂದರೆ ವಾರಸ್ತ್ರೀಯರಿಗೆ ನಮ್ಮಲ್ಲಿ ಸೂಳೆಯರೆಂಬ ಹೆಸರು ಚಿರಪ್ರಸಿದ್ಧವಾಗಿರುವುದಷ್ಟೆ? ಇದುವರೆಗೆ ಈ ಹೆಸರಿಗೆ ನಿಘಂಟು ಗಳಲ್ಲಿಯೂ ಸರಿಯಾದ ವ್ಯುತ್ಪತ್ತಿ ಕಾಣುವುದಿಲ್ಲ. ಸೂಳೆಗೆ ವ್ಯಭಿಚಾರ ವೃತ್ತಿಯಲ್ಲಿರುವ ಸ್ತ್ರೀ ಎಂಬ ಅರ್ಥವು ರೂಢಿಯಲ್ಲಿರುವುದಾದರೂ ತೀರ ಅಸಭ್ಯ ಮತ್ತು ಅಶ್ಲೀಲವಾದ ಈ ಅರ್ಥವು ಸೂಳೆ ಎಂಬ ಹೆಸರಿಗೆ ಇದ್ದಿರುವುದು ಅಸಂಭವವೆಂದೇ ಹೇಳಬೇಕು. ಏಕೆಂದರೆ, ಪ್ರಾಚೀನ ಕಾವ್ಯಾದಿಗಳಿಂದ ತಿಳಿಯಬಹುದಾದಂತೆ ಹಿಂದಕ್ಕೆ ಸೂಳೆಯರಿಗೆ ಸಮಾಜದಲ್ಲಿ ಒಳ್ಳೆಯ ಗೌರವಸ್ಥಾನವಿತ್ತು. ಅರಮನೆ, ಆಸ್ಥಾನ, ವಿದ್ವತ್ಸಭ ದೇವಸ್ಥಾನ, ಮಂಗಲೋತ್ಸವಾದಿಗಳಲ್ಲಿ ಸೂಳೆಯರಿಗೆ ಬಹಳ ಮನ್ನಣೆ ಇತ್ತು. ಸೂಳೆಯರ ಸಂಗೀತ ನಾಟ್ಯಗಳಿಲ್ಲದೆ ಯಾವ ಶುಭಸಮಾರಂಭವೂ ನಡೆಯದು. ರಾಜಪುತ್ರಿಯರಿಗೆ 'ಪಂಡವಾಸದ ಸೂಳೆಯರ' ಬಳುವಳಿಯು ವಿಶೇಷವಾಗಿ ಸಲ್ಲುತ್ತಿತ್ತು. ಸೂಳೆ ಎಂಬುದು ನಿಂದ್ಯವಾದ ಅಶ್ಲೀಲಾರ್ಥದಲ್ಲಿರುವ ಹೆಸರಾದರೆ ಇಷ್ಟೊಂದು ಗೌರವಾರ್ಥದಲ್ಲಿ ಅದು ಪ್ರಸಿದ್ಧವಾಗಿರಲು ನ್ಯಾಯವಿಲ್ಲ. ಈ ಸೂಳೆಯರು ಸಂಗೀತ ವೃತ್ತಗಳಿಗೆ ಹೆಸರಾದವರೆಂಬುದು ಸರ್ವಪ್ರಸಿದ್ಧ. ಇದರಿಂದಲೇ ಅವರಿಗೆ ಮೇಳದವರು ಎಂಬ ಹೆಸರಾಗಿದೆ. ಮೇಳ ಎಂದರೆ ಸಂಗೀತಮೇಳವೆಂಬುದು ಅನ್ಯಥಾ ಸೂಚನೆ ಇಲ್ಲದಿರುವಲ್ಲಿ ಸರ್ವತ್ರ ಗೃಹೀತವ್ಯವಹಾರ, ಮೇಳದಂಗನೆ, ಮೇಳಗಾರ್ತಿ ಎಂದರೆ ಸೂಳೆಯೇ, ಸಂಸ್ಕೃತದಲ್ಲಿ ಗಣಿಕಾ, ವಾರ ಎಂಬ ಹೆಸರುಗಳಿಗೆ ಇದೇ ಅರ್ಥ. ಮೇಳದ ಮುಖ್ಯಸ್ಥಳಿಗೆ ಗಣಮುಖ್ಯಾ, ವಾರಮುಖ್ಯಾ ಎಂಬ ಹೆಸರು. ಸಂಗೀತವು (ಗೀತ, ವಾದ್ಯ, ನೃತ್ಯ) ಸೂಳೆಯ ವೃತ್ತಿ. ಗೀತನೃತ್ತಗಳಿಗೆ ಸೂಳ ಎಂಬ ಹೆಸರು ನಮ್ಮಲ್ಲಿ ಪ್ರಸಿದ್ಧವಾಗಿರುವುದರಿಂದ ಅದೇ ಸಂಬಂಧದಲ್ಲಿ ಸೂಳೆ ಎಂಬ ಹೆಸರು ಬಂದಿರುವುದು ಸಹಜವಾಗಿ ಕಾಣುತ್ತದೆ. ಸ್ತ್ರೀ ವಾಚಕವಾಗುವಾಗ ಆ ಪದವು ಸೂಳೆ ಎಂದು ಎಕಾರಾಂತವಾದುದೂ ನ್ಯಾಯವೇ ಸರಿ. ಅರ್ಥಾತ್ ಸೂಳದವಳೇ-ಸೂಳೆ.


ಶುದ್ಧ ಸಾಲಗ ಸೂಡಾದಿ ಗೀತಾಭಿನಯ ಮಂಥರು.
ರುಚ್ಯಾಪ್ರವರ್ತಿತಂ ದೇಶೇ ರಾಜಭಿಃ ಗುಂಡಲೀಂ ವಿಧುಃ (ಶಾರದಾತನಯನ ಭಾವಪ್ರಕಾಶ)
೧. ಸಂಗೀತದರ್ಪಣ ಪುಟ ೨೧೫, ೩೧೯-೨೨೧.
೨. ಪಂಪಾವಿರೂಪಾಕ್ಷಾಸ್ಥಾನದಲ್ಲಿ ಸೂಳೆಯರ ಸಂಗೀತ ನಾಟ್ಯ ಸೇವೆಗಿದ್ದ ಪ್ರಾಶಸ್ತ್ರ
ವನ್ನು ಚಂದ್ರಕವಿಯ 'ಪಂಪಾಸ್ಥಾನವರ್ಣನ'ದಿಂದ ತಿಳಿಯಬಹುದು.
೩. ವಡ್ಡಾರಾಧನೆ ಪುಟ ೧೪೯.
೪. 'ಸೂಳೆ' ಪದದ ಆಕಾರವನ್ನು ಕೆಲವರು ಅವಿ ವೆಂದು ಭ್ರಮಿಸಿದಂತೆ ಕಾಣುತ್ತದೆ ಮುದ್ರಿತ
ಕಾವ್ಯಾದಿಗಳಲ್ಲಿಯೂ ಕೆಲವೆಡೆ ಅ ವಾದುದಿದೆ. 'ಸೂಟ್' ಎಂಬ ಶಬ್ದಕ್ಕೆ ಸರ್ತಿ ಎಂಬ
ಅರ್ಥವಿರುವುದರಿಂದ ಸೂಳೆಗೆ ಅವಳ ಅಸಭ್ಯವ್ಯವಹಾರಕ್ಕೆ ಅನ್ವರ್ಥವಾಗಿ ಈ ಹೆಸರಾಗಿದೆ
ಎಂದೂ ಹೇಳುತ್ತಾರೆ. ಇದು ಸರಿಯಲ್ಲ, ವಾಸ್ತವವಾಗಿ ಸೂಳೆ ಎಂಬುದು ಕುಳ ಆಕಾರವೇ
ಹೊರತು ಅವಿ ವಲ್ಲ ಎಂಬುದು ನಿಸ್ಸಂದಿಗ್ಧ.