ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೂಪ - ಸೂಳಾದಿ - ಸಾಲಗ / ೨೪೫

ಸೂಳೆಯರಲ್ಲಿ ವ್ಯಭಿಚಾರ ಇರಲಿಲ್ಲವೆಂದಲ್ಲ. ಅವರು ಆ ವೃತ್ತಿಗೆ ಇಳಿದವ ರಂದರೂ ಸರಿ. ಅವರಿಗೆ ಸೂಳೆಯರೆಂಬ ಹೆಸರಾದುದು ಆ ಕಾರಣದಿಂದಲ್ಲವೆಂದೇ ಹೇಳ ಬೇಕು. ಪುರಾತನ ದೇವಾಲಯಗಳಲ್ಲಿ ಸಂಗೀತಸೇವೆಯಲ್ಲಿರುತ್ತಿದ್ದ ದೇವದಾಸಿಯರಲ್ಲಿ ವೇಶ್ಯಾವೃತ್ತಿಯು ಸಾಮಾನ್ಯವಾಗಿ ಇದ್ದಿರುವುದಾದರೂ ಅವರಿಗೆ ದೇವದಾಸಿ ಎಂಬ ಹೆಸರು ಬಂದುದು ಆ ಅಗೌರವಾರ್ಥದಲ್ಲಿಯಲ್ಲವಷ್ಟೆ? ನೃತ್ಯಗೀತಾದಿಗಳಿಗೆ ಸಂಬಂಧಿಸಿ ದಂತೆ ಗಣಿಕಾ, ವಾರ ಎಂಬ ಹೆಸರುಗಳೇ ಸಂಸ್ಕೃತ ಕಾವ್ಯಾದಿಗಳಲ್ಲಿಯೂ ಕಾಣುತ್ತವೆ. ಹೀಗೆ ಮೂಲತಃ ಸಂಗೀತ (ನೃತ್ತ, ಗೀತ, ವಾದ್ಯ) ಸಂಬಂಧದಿಂದ ಬಂದ ಸೂಳೆ ಎಂಬ ಹೆಸರು ಕಾಲಕ್ರಮದಲ್ಲಿ ವೇಶ್ಯಾಪದಕ್ಕೆ ಪರ್ಯಾಯವಾಗಿ 'ಜಾರಿಣಿ' ಎಂಬ ಅಗೌರವಾರ್ಥ ದಲ್ಲಿ ರೂಢಿಗೆ ಬಂದಿದೆ. ಇದನ್ನು ಕಟ್ಟಿಕೊಂಡು ಸೂಳೆ ಎಂದರೆ ವ್ಯಭಿಚಾರಿಣಿ ಎಂಬು ದನ್ನು ಸಮರ್ಥಿಸುವುದಕ್ಕಾಗಿ, ಇದು 'ಶೂಲೆ' ಎಂಬ ಪದದ ರೂಪಾಂತರ, ಶೂಲೆಯನ್ನು ಅರ್ಥಾತ್ ಪೀಡೆಯನ್ನು ಕೊಡುವುದರಿಂದ ವೇಶ್ಯಗೆ ಸೂಳೆ ಎಂಬ ಹೆಸರು ಬಂದಿದೆ ಎಂಬಂತಹ ವಿಚಿತ್ರವಾದ ವ್ಯುತ್ಪತ್ತಿಗಳು ಕಲ್ಪಿಸಲ್ಪಟ್ಟಿವೆ! ವಾಸ್ತವವಾಗಿ ಹೇಳುವುದಾದರೆ ಗೀತನೃತ್ಯಗಳಲ್ಲಿ ಪರಿಣತೆ, ಸಂಗೀತ ಕಲಾಭಿಜ್ಞೆ ಎಂಬ ಬಹುಮಾನವುಳ್ಳ ನಿಜಾರ್ಥದಲ್ಲಿ ಕಲಾವಂತೆಯಾದ ಆ ಸ್ತ್ರೀಗೆ ಸೂಳೆ ಎಂಬ ಹೆಸರು ಪ್ರಸಿದ್ಧವಾಯಿತು ಎಂದು ತಿಳಿಯು ವುದು ಯುಕ್ತವಾಗಿದೆ. ಸೂಳೆಯರ ಗೋಷ್ಠಿಯೇ ಮೇಳ, ಸೂಳೆ- ಮೇಳದವಳು.

ಸೂಳಾದಿ : ನೃತ್ಯಕ್ಕೆ ಮಾತ್ರವೇ ಅಲ್ಲ ಸೂಡ ಇತ್ಯಾದಿ ಹೆಸರುಗಳು ದೇಶೀಯ ಪ್ರಬಂಧ ಗಳಿಗೆ ನಿರ್ದಿಷ್ಟವಾದ ತಾಳಗಳಿಗೂ ಕ್ರಮೇಣ ರೂಢಿಯಲ್ಲಿ ಬಂದಿವೆ ಎಂಬುದನ್ನು ಸಹ ಲಕ್ಷಣಗ್ರಂಥಗಳಿಂದ ತಿಳಿಯಬಹುದು. ಪುರಂದರದಾಸಾದಿಗಳ ಕಾಲದ ಲಕ್ಷ್ಯ ಮಾರ್ಗ ದಲ್ಲಿ ಶುದ್ಧಸೂಡ ಸಂಪ್ರದಾಯವು ಮುಗಿದ ಕಥೆಯಾಗಿತ್ತು. ಅಂದಿನಿಂದ ಸಾಲಗಸೂಡಕ್ಕೆ ಮಾತ್ರ ಸೂಳ ಸೂಳಾದಿ ಸಂಜ್ಞೆಯಿರುವುದು ಎಂಬ ಅಭಿಪ್ರಾಯವು ಲಕ್ಷಣ ಗ್ರಂಥ ಗಳಿಂದಲೂ ವ್ಯಕ್ತವಾಗುವುದು. ಸಾಲಗ ಸೂಳವರ್ಗಕ್ಕೆ ಸೇರಿದ ಪ್ರಬಂಧಗಳೆಲ್ಲವಕ್ಕೂ ಪ್ರತ್ಯೇಕ ವಿಶಿಷ್ಟ ಸಂಜ್ಞೆಗಳಿರುವುದಿಲ್ಲ. ಯಾವ ತಾಳದಲ್ಲಿ ಪ್ರಬಂಧವು ರಚಿಸಲ್ಪಟ್ಟಿದೆಯೋ ಅಥವಾ ಹಾಡಲ್ಪಡುವುದೋ ಆ ತಾಳದ ಹೆಸರಿನಿಂದಲೇ ಆ ಪ್ರಬಂಧವನ್ನು ಕರೆಯುವ ವಾಡಿಕೆ ಹಿಂದಿನಿಂದಲೇ ನಡೆದುಬಂದಿದೆ. ಅಟತಾಳದ ರಚನೆಗೆ ಅಟತಾಳ ಪ್ರಬಂಧ, ಮಂಠತಾಳದ ರಚನೆ ಮಂಠಪ್ರಬಂಧ, ಏಕತಾಲದ್ದು ಏಕತಾಲೀ ಪ್ರಬಂಧ ಇತ್ಯಾದಿ. ಸಾಲಗಸೂಡವರ್ಗದಲ್ಲಿ ಮೊದಲನೆಯ ಪ್ರಬಂಧವಾದ ಧ್ರುವ ಎಂಬುದರ ಹೊರತು ಮಿಕ್ಕ ಆರು ಪ್ರಬಂಧಗಳಿಗೂ ರತ್ನಾಕರಾದಿ ಪ್ರಾಚೀನ ಶಾಸ್ತ್ರಗ್ರಂಥ ಗಳಲ್ಲಿ ಸಹ ತಾಳದ ಹೆಸರೇ ಇರುವುದಾಗಿದೆ. ಧ್ರುವ ಎಂಬ ಹೆಸರಿನ ತಾಳವು ಹಿಂದೆ ಇದ್ದುದಲ್ಲ. ಅನಂತರಕಾಲದಲ್ಲಿ ರೂಢಿಗೆ ಬಂದ ಅದೊಂದು ತಾಳವು ಧ್ರುವ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವುದಲ್ಲದೆ ಇತರ ತಾಳಗಳ ನಾಮರೂಪಗಳೂ ಬಹುಮಟ್ಟಿಗೆ ವ್ಯತ್ಯಾಸಗೊಂಡಿವೆ." ಹಾಗೆ ಅರ್ವಾಚೀನ ಲಕ್ಷಣಗ್ರಂಥಗಳಲ್ಲಿ ಧ್ರುವ, ಮಠ, ರೂಪಕ,


೧. ಚತುರ್ದಂಡೀ-ಸ್ವರಪ್ರಕರಣ ಶ್ಲೋ. ೧೧೧-೧೧೪, ಸಂಗೀತ ಸಾರಸಂಗ್ರಹ
(ಗೀತ ಪ್ರಕರಣ ಶ್ಲೋ ೨೧೦. ಬಹೂನಾಂ ತಾಲಾನಾಮೇಕತ್ರಗುಂಘನಂ ಸೂಡ...)
೨. ಚತುರ್ದಂಡೀ ಪ್ರಬಂಧ ಪ್ರಕರಣ ಶ್ಲೋ. ೪೪೭, ೪೪೮.
೩. ಸಂ, ಸಾರಾಮೃತ, ಪ್ರಬಂಧಾಧ್ಯಾಯ, ಪುಟ ೧೫೨, ೧೫೩, ...ಅಡ್ಡ ತಾಲೀದೋಲಘು
ದ್ವಯಂ, ಇದಮೇವೋಚಿ‌' ತಾಲಂ ಕೇಚಿತ್ ತ್ರಿಪುಟಸಂಜ್ಞಯಾ (ಸಂ. ಸಾ. ಪು. ೧೭೧)
ಚತುರ್ದಂಡೀ, ಗೀತಪ್ರಕರಣ, ಸಂಗೀತಸಾರಸಂಗ್ರಹ, ಗೀತಪ್ರಕರಣ ಶ್ಲೋ. ೨೧೭-೨೧೯.