ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೂಡ - ಸೂಳಾದಿ - ಸಾಲಗ / ೨೫೫

“ಛಾಯಾಲಗ' ಎಂಬ ಪದದಲ್ಲಿಯೇ ಅಡಕವಾಗಿದೆ. ಛಾಯಾಮಾತ್ರವಾದ ಲಘು ಗುರುಗಳುಳ್ಳುದು ಛಾಯಾಲಗ, (ಬಹುಹ್ಮರ್ಥ) ಹಾಗಾಗಿ ದೇಶೀತಾಳನಿಬದ್ಧವಾದ ಗೀತಗಳಿಗೆ ಸಾಲಗ ಎಂದೇ ಹೆಸರಾಯಿತು. ನಮ್ಮ ಪ್ರಾಚೀನ ಕವಿಗಳು ದೇಶೀಯಗೀತ ಎಂಬ ಅರ್ಥದಲ್ಲಿ 'ಪಾಡುವಸಾಳಗಂ' ಎಂದು ಪ್ರಯೋಗಿಸಿರುತ್ತಾರೆ" ಹೀಗೆ ಸಾಲಗ ಎಂಬ ಹೆಸರು ತಾಳದಿಂದ ಪ್ರಬಂಧಕ್ಕೆ ಬಂದಿರುವಂತೆ ಸೂಡ ಎಂಬ ಹೆಸರು ಪ್ರಬಂಧದಿಂದ ತಾಳಕ್ಕೆ ಬಂದಿರುವುದೆಂಬುದನ್ನು ಹಿಂದೆಯೇ ನೋಡಿದೆವು. ಕಲ್ಲಿನಾಥನ ಕಾಲದಲ್ಲಿಯೇ ಸಾಲಗದ ಮೂಲಾರ್ಥವು ಮರೆಯಾಗಿದ್ದಿರಬೇಕು. ಇದರಿಂದಲೇ ಆತನು ಛಾಯೆಯನ್ನು ಶುದ್ಧದ ಛಾಯ ಎಂದೂ ಲಗಕ್ಕೆ 'ಲಗತಿ ಇತಿಲಗಃ' ಎಂದೂ ಹೇಗಾದರೂ ಒಂದು ಅರ್ಥವನ್ನು ಎಳೆದು ತಂದು ಹೊಂದಿಸಲು ಒದ್ದಾಡಬೇಕಾಯಿತು. ಕ್ರಮೇಣ ಈ 'ಸಾಲಗ' ಎಂಬ ಸಂಜ್ಞೆಗೆ ಶುದ್ಧದಿಂದ ಭಿನ್ನವಾದ್ದು ಎಂದಿಷ್ಟ ಅರ್ಥವು ಬಳಕೆಯಾಗಿ ದೇಶೀಯವಾದ ನೃತ್ಯ, ರಾಗ, ವಾದ್ಯಾದಿಗಳ ವ್ಯವಹಾರದಲ್ಲಿಯೂ ರೂಢಿಗೆ ಬಂದಿದೆ.

ಉದಾ : ಶುದ್ಧರಾಗ X ಸಾಲಗರಾಗ, ಶುದ್ಧ ನಾಟ್ಯ X ಸಾಲಗನಾಟ್ಯ, ಶುದ್ಧಮಪ್ಪಳ X ಸಾಲಗಮದ್ದಳ ಇತ್ಯಾದಿ.

ಈ ಲೇಖನದಲ್ಲಿ ಇದುವರೆಗೆ ವಿಮರ್ಶಿಸಿದ ವಿಷಯಗಳ ಮುಖ್ಯ ಸಾರಾಂಶವನ್ನು ಹೀಗೆ ಸಂಗ್ರಹಿಸಬಹುದು : ಸೂಡ ಎಂಬುದು ಕನ್ನಡ ಭಾಷೆಯ ಪದ. ಸೂಡು ಎಂಬ ಬಂಧನಾರ್ಥದಲ್ಲಿರುವ ಧಾತುವು ಕರ್ಮಾರ್ಥದಲ್ಲಿ ನಾಮಪದವಾಗುವಾಗ ಸೂಡ ಎಂದು ಆಕಾರಾಂತವಾಗಿದೆ. ಯೋಗತಃ ಇದಕ್ಕೆ ಕಟ್ಟಿದ ಕಟ್ಟು ಎಂಬ ಅರ್ಥವಾಗುವುದರಿಂದ ಪ್ರಬಂಧಪದಕ್ಕೆ (ಕಟ್ಟಿದ ಹಾಡು) ಪರ್ಯಾಯವಾಗಿ ಇದು ಪ್ರಯೋಗಿಸಲ್ಪಟ್ಟಿದೆ. ಸೂಡು, ಸೂಳು, ಸೂಲು, ಸೂಳ, ಸೂಲ, ಚೂಡ ಎಂಬವೆಲ್ಲ ಒಂದೇ ಅರ್ಥದಲ್ಲಿರುವ ಇದರ ರೂಪಾಂತರಗಳು, 'ಸೂಳಾದಿ' ಎಂಬುದು ಸಾಲಗ ಸೂಳ ಪ್ರಬಂಧ ವರ್ಗದಲ್ಲಿ ಮೊದಲನೆಯ ಪ್ರಬಂಧಕ್ಕೆ ಅನ್ವರ್ಥವಾಗಿ ಬಂದ ಹೆಸರು. ಸಂಗೀತ ರತ್ನಾಕರಾದಿ ಪ್ರಾಚೀನ ಶಾಸ್ತ್ರಗ್ರಂಥಗಳಲ್ಲಿ ಆ ಪ್ರಬಂಧಕ್ಕೆ 'ಧ್ರುವ' ಎಂದು ಹೆಸರಿದ್ದುದು 'ಛಾಯಾಲಗ' ಎಂಬುದರ ಅಪಭ್ರಂಶ ರೂಪವಾದ ಸಾಲಗಃ ಎಂಬ ಪದಕ್ಕೆ ಛಾಯಾಮಾತ್ರ ವಾದ ಲಘು ಗುರುಗಳುಳ್ಳ ದೇಶೀಯ ತಾಳ ಎಂದು ಮೂಲಾರ್ಥ, ತಾಳದ ಸಂಬಂಧ ದಿಂದ ದೇಶೀಯ ಗೀತಗಳಿಗೆ ಈ ಹೆಸರು ರೂಢಿಯಲ್ಲಿ ಬಂದುದಾಗಿದೆ. ಇದರಿಂದ, ವಾಸ್ತವವಾಗಿ ಈಗಲೂ ನಮ್ಮ ಕರ್ಣಾಟಕ ಸಂಗೀತದಲ್ಲಿ ಪ್ರಚಲಿತವಾಗಿರುವ ತಾಳಗಳೆಲ್ಲ ಸಾಲಗ ತಾಳಗಳೇ, ಪ್ರಬಂಧಗಳೆಲ್ಲ ಸಾಲಗಸೂಡಗಳೇ ಎಂದು ತಿಳಿದುಕೊಳ್ಳ ಬಹುದಾಗಿದೆ.

ಇತಿ-ಶಿವಂ






೧. 'ಪಾಡುವ ಸಾಳಗಂಲಳಿಯೊಳಾಡುವನಚ್ಚಣಿ...' (ಅನಂತನಾಥಪುರಾಣ- ಜನ್ನ ಕವಿ ಅ. ೧೪, - ಪದ್ಯ ೭೮)-ಹರಿಶ್ಚಂದ್ರ ಕಾವ್ಯ. ಸ್ಥಲ ೭, ಪದ್ಯ ೬.