ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬೬ / ಕುಕ್ಕಿಲ ಸಂಪುಟ

ರಾಗಗಳಿಗೆ ಆ ಭಾಷೆಯ ಹೆಸರುಗಳಿವೆ ಎಂಬುದರಿಂದ ಕೆಲವರು ಹಾಗೆ ಊಹಿಸು ತಾರೆ. ಇದೂ ಕಾರಣವಾಗಲು ನ್ಯಾಯವಿಲ್ಲ. ರಾಗಗಳು ಹೊಸತು ಹುಟ್ಟಬಹುದು, ಇದ್ದ ರಾಗಗಳು ಹೊಸ ಹೆಸರು ಪಡೆಯಬಹುದು. ಇದ್ದ ಹೆಸರುಗಳೇ ಅದಲು-ಬದಲಾಗ ಬಹುದು, ಹಾಗೆ ಆಗಿರುವುದೂ ಸರಿ, ಇದು ಆಶ್ಚರ್ಯವೂ ಅಲ್ಲ, ಇದರಿಂದ ಸಂಪ್ರದಾಯವು ಬದಲಾಗುವುದೂ ಇಲ್ಲ, ಆದದ್ದೂ ಇಲ್ಲ.

ಹಾಗಿದ್ದರೆ ಈ ಉತ್ತರ-ದಕ್ಷಿಣ ಹೇಗಾಯಿತು? ವಸ್ತುತಃ ಇವೆರಡೂ ಸಂಪ್ರದಾಯ ಗಳು ನಮ್ಮವೇ. ಮತ್ತೆ ಉಂಟಾದುವಲ್ಲ, ಮೊದಲಿಂದಲೂ ಇದ್ದವು. ನಮ್ಮ ಶಾಸ್ತ್ರ ಗ್ರಂಥಗಳೇ ಇದನ್ನು ತೋರಿಸುತ್ತವೆ. ಸ್ಕೂಲಮಾನದಿಂದ, ಮುಖ್ಯವಾಗಿ ನಮ್ಮ ಕರ್ಣಾಟಕ ಸಂಪ್ರದಾಯವನ್ನು ಲಕ್ಷದಲ್ಲಿಟ್ಟುಕೊಂಡು ಅದನ್ನು ಸ್ವಲ್ಪ ನೋಡೋಣ.

ಆ ಮೊದಲು ಒಂದು ವಿಚಾರ. ನಾವು ಸಂಗೀತ ಪದ್ಧತಿ ಎಂದು ಏನನ್ನುತ್ತೇವೆ. ಅದು 'ಸ್ವರ', 'ವರ್ಣ' ಎಂಬ ಎರಡು ಅಂಶಗಳನ್ನು ಒಳಗೊಂಡಿದೆ. ಸ್ಥಾಯಿಯಲ್ಲಿ ನಿಯತ ವಿಭಾಗದಿಂದಿರುವ ಸ್ವರಭೇದಗಳೇ 'ಸ್ವರ'. ಗೀತದಲ್ಲಿ ಸ್ವರಗಳನ್ನು ವಿನಿಯೋಗಿಸುವ ವಿಧಾನವೇ ವರ್ಣ, ಎಂದರೆ ಅದು ಗಾನಕ್ರಮ ಅಥವಾ ಗಾನವೇ. (ಗಾನಕ್ರಿಯೋಚ್ಯತೇ ವರ್ಣ) ಸ್ವರಗಳು ಭಿನ್ನವಾದ ಮಾತ್ರಕ್ಕೆ ಈ ವರ್ಣಕ್ರಮ ಬೇರೆ ಯಾಗಬೇಕಾದ್ದಿಲ್ಲ, ಆಗಿಯೂ ಇಲ್ಲ. ಸ್ವರಗಳು ಒಂದೇ ಇದ್ದರೂ ಹಾಡುವ ರೀತಿ ಬೇರೆಯಾಗಬಹುದು, ಅದು ಆಗಿಯೂ ಇದೆ. ನಮ್ಮ ಉತ್ತರಾದಿ-ದಕ್ಷಿಣಾದಿ ಭೇದ ವೆಂದರೆ ಇದೇ. ಇದನ್ನೇ ನಾವು ಭಿನ್ನ ಸಂಪ್ರದಾಯವನ್ನುವುದಷ್ಟೆ? ಈ ನಮ್ಮ ಹನ್ನೆರಡು ಸ್ವರಗಳನ್ನು ವಿದೇಶಿಯರೂ ಸ್ವೀಕರಿಸಿದ್ದಾರೆ, ಬಳಸುತ್ತಾರೆ. ಅವರ 'ವರ್ಣ' ಮಾತ್ರ ಬೇರೆ. ಎಂದರೆ, ಹಾಡು ಮತ್ತು ಹಾಡುವ ಕ್ರಮ ಬೇರೆ. ಅದರಿಂದಲೇ ಅದು ವಿದೇಶೀಯ ಸಂಗೀತ.

ಈಗಿನ ನಮ್ಮ ಹನ್ನೆರಡು ಸ್ವರಗಳಾದರೂ ನಮ್ಮಲ್ಲಿಯೇ ಉಂಟಾದವು. ಶಾರ್ಙ್ಗದೇವನೇ ಇದರ ಪ್ರವರ್ತಕನು. 'ಭಾರತೀಯ ಸಂಗೀತಶಾಸ್ತ್ರ' ಎಂಬ ನನ್ನ ಗ್ರಂಥ ದಲ್ಲಿ ಈ ವಿಚಾರ ಸಪ್ರಮಾಣವಾಗಿ ನಿರೂಪಿಸಿದ್ದೇನೆ. (ಪ್ರಕಾಶಕರು, ಡಿ.ವಿ.ಕೆ. ಮೂರ್ತಿ, ಮೈಸೂರು-೪)

ಸಂಗೀತಕ್ಕೆ ಒಂದು ಸ್ವರೂಪ ಸಿದ್ಧವಾಗುವುದು ಗೇಯ ವಸ್ತುವಿನಿಂದ, ಎಂದರೆ ಹಾಡುವ ಪ್ರಬಂಧಗಳಿಂದ. ಆದುದರಿಂದ ಸಂಗೀತಶಾಸ್ತ್ರದಲ್ಲಿ ಅದು 'ರೂಪಕ'ವೆಂದು ಕರೆಯಲ್ಪಟ್ಟಿದೆ. (ಸಂಜ್ಞಾತ್ರಯಂ ನಿಬದ್ಧಸ್ಯ ಪ್ರಬಂಧ ವಸ್ತು ರೂಪಕಂ-ಸಂ. ರ.) ವರ್ಣಾಲಂಕಾರಾದಿ ಸ್ವರವಿನಿಯೋಗವೆಂಬುದು ಪದಪ್ರಯೋಜವಾದ್ದು ಎಂದರೆ ಪ್ರಬಂಧ ನಿಷ್ಟವಾದ್ದು. ಅದರಿಂದಲೇ ಪ್ರಬಂಧವು ವರ್ಣವೆಂದೂ ಕರೆಯಲ್ಪಟ್ಟಿದೆ. ಈ ವರ್ಣಭೇದ ದಿಂದಲೇ ಸಂಪ್ರದಾಯಭೇದವುಂಟಾಗುವುದು ಹೊರತು, ಕೇವಲ ಸ್ವರಭೇದದಿಂದಲ್ಲ.

ಉತ್ತರ-ದಕ್ಷಿಣ ಸಂಪ್ರದಾಯ ಭೇದವು ನಮ್ಮಲ್ಲಿ ಮೊದಲಿಂದಲೇ ಕವಲೊಡೆದು ಬಂದಿದೆ. ನಾಟ್ಯಶಾಸ್ತ್ರದಲ್ಲಿ ಅದರ ಮೂಲವನ್ನು ಕಾಣಬಹುದು. ಅಲ್ಲಿಂದ ಬೆನ್ನು ಹಿಡಿದು ಬರಬೇಕು. ಆಗ ಇವುಗಳ ಪರಂಪರೆಯೂ, ವೈಶಿಷ್ಟ್ಯವೂ ಅರ್ಥವಾಗುವುದು. ವಿಸ್ತಾರಕ್ಕೆ ಹೋಗಲು ಇಲ್ಲಿ ಅವಕಾಶ ಸಾಲದು. ಸಂಕ್ಷೇಪವಾಗಿ ದಿಗ್ದರ್ಶನ ಮಾಡೋಣ.

ಶಾಸ್ತ್ರೀಯ ಸಂಗೀತಕ್ಕೆ ಭರತನು ಕೊಟ್ಟ ಹೆಸರು 'ಗಾಂಧರ್ವ'. ಅದು ನಾಟಕಕ್ಕಾಗಿ ಹುಟ್ಟಿದ್ದು. ನಾಟ್ಯದೊಂದಿಗೇ ಬೆಳೆದು ಬಂದದ್ದು. ನಾಟ್ಯಶಾಸ್ತ್ರವೇ ಸಂಗೀತಶಾಸ್ತ್ರ-