ಪೀಠಿಕೆ
(ಕುಕ್ಕಿಲ ಸಂಪಾದಿತ ಛಂದೋಂಬುಧಿ'ಯ ಪೀಠಿಕೆಯ ಒಂದು ಭಾಗ)
ಪದ್ಯಗಳಲ್ಲಿ, ಓದುವ ಪದ್ಯ, ಹಾಡುವ ಪದ್ಯಗಳೆಂದು ಎರಡು ವಿಧ. ಓದುವುದು
ಪಾಠ ಅಥವಾ ಪಾಠ್ಯ (Recitation), ಹಾಡುವುದು ಗಾನ ಅಥವಾ ಗೇಯ
(Singing), ಛಂದಸ್ಸು ಓದುವ ಪದ್ಯ, ಎಂದರೆ ಪಾಠವನಸ್ತು, ಸಂಗೀತದ ಪದ್ಯ-
ಗೇಯವಸ್ತು. ರೂಢಿಯಲ್ಲಿ ಇವೆರಡಕ್ಕೂ ಪದ್ಯವೆಂಬ ಹೆಸರು ಸಲ್ಲುವುದಾದರೂ ಶಾಸ್ತ್ರ
ದಲ್ಲಿ ಪದ್ಯವೆಂದರೆ ಛಂದಸ್ಸಿನ ಪದ್ಯವೆಂದೇ ಗೃಹೀತಾರ್ಥವಾಗಿದೆ. ಅಲ್ಲಿ ಪದ್ಯವೊಂದಕ್ಕೆ
ನಾಲ್ಕು ಪಾದಗಳಿರುವುದು ಎಂಬ ನಿಯಮವಿರುವುದರಿಂದ ಈ ಹೆಸರು ಅನ್ವರ್ಥವಾಗಿ
ಬ೦ದಿದೆ-
ಪದ್ಯಂ ಚತುಷ್ಪದೀ ತಚ್ಚ ವೃತ್ತಂ ಜಾತಿರಿತಿ ದ್ವಿಧಾ (ದಂಡಿ, ಕಾವ್ಯಾ, ೧-೧೧)
ಆದ್ದರಿಂದಲೇ ಲೌಕಿಕ ಛಂದಸ್ಸಿನಲ್ಲಿ ಪಾದವೆಂಬುದಕ್ಕೆ ಚತುರ್ಭಾಗ (ನಾಲ್ಕರಲ್ಲಿ
ಒಂದಂಶ) ಎಂಬ ಅರ್ಥವಿರುವುದು- (ಪಾದಶ್ಚತುರ್ಭಾಗಃ ಪಿಂ. ೪-೧೦); 'ಪಾದಶ್ಚ
ಪದ್ಯತೇ ಧಾತೋಶ್ಚತುರ್ಭಾಗಃ ಪ್ರಕೀರ್ತಿತಃ' (ಭ. ನಾ ೧೪-೧೦೪), ವೈದಿಕ ಛಂದಸ್ಸಿ
ನಲ್ಲಿ ಪಾದ ಅಥವಾ ಪದ ಎಂದರೆ ಒಂದು ಸ್ಥಾನ ಅಥವಾ ನಿಲುಗಡೆ ಎಂದಷ್ಟೇ
ಅರ್ಥವಿರುವುದು ಹೊರತು ಚತುರ್ಭಾಗವೆಂದಲ್ಲ.
ಹಾಡುವ ಪದ್ಯವೆಂದರೆ ಸಾಮಾನ್ಯವಾಗಿ ಸಂಗೀತದ ಪದ್ಯಗಳು. ಇವಕ್ಕೆ ಶಾಸ್ತ್ರದಲ್ಲಿ
'ಪದ' ಎಂಬ ಹೆಸರು. ಇದು ಗೇಯವಸ್ತುವಿಗೆ ಭರತನು ಕೊಟ್ಟಿರುವ ಪಾರಿಭಾಷಿಕ ಸಂಜ್ಞೆ-
'ಗಾಂಧರ್ವಂ ಯಸ್ಮಯಾ ಪ್ರೋಕ್ತಂ ಸ್ವರ ತಾಲ ಪದಾತ್ಮಕಂ | ಪದಂ ತಸ್ಯ ಭವೇದ್ವಸ್ತು
ಸ್ವರತಾಲಾನುಭಾವಕಂ |' (ಭ. ನಾ. ೩೨-೨೭), 'ಪದ'ವೆಂದು ಕರೆದಿರುವುದಕ್ಕೆ ಅಲ್ಲಿ
ಸಾರ್ಥಕ್ಯ ಬೇರೆ ಇದೆ, ಪ್ರಕೃತ ಅದು ಪ್ರಸ್ತುತವಲ್ಲ. 'ವಸ್ತು' ಎಂದರೆ ಯಾವುದೇ ಪದ್ಯ
ಅಥವಾ ಪದ್ಯಗಳಿಂದ ರಚಿಸಿದ ಪ್ರಬಂಧ ಎಂಬರ್ಥ. ಛಂದಸ್ಸಿನ ಪದ್ಯ-ಪಾಠದ ವಸ್ತು,
ಗೇಯದ ವಸ್ತು-ಪದ, ಪಾಠ ಮತ್ತು ಗಾನಗಳೊಳಗೆ ತಾತ್ವಿಕವಾದ ಭಿನ್ನತ್ವವೇನೆಂದರೆ;
ಪಾಠವು ವಸ್ತುವಿನ ಯಥಾಸ್ವರೂಪವನ್ನು ನಿರೂಪಿಸತಕ್ಕದ್ದು. ಏಕೆಂದರೆ ಛಂದಸ್ಸು
ಅರ್ಥಪ್ರಧಾನವಾದ್ದು; ಆದ್ದರಿಂದ ಅದು ವ್ಯಾಕರಣಕ್ಕೆ ವಿಧೇಯವಾಗಿರುವುದು. ಅದರ
ಪಾಠದಲ್ಲಿ ವ್ಯಾಕರಣನಿಯಮವನ್ನು ಉಲ್ಲಂಘಿಸಬಾರದು. ಎಂದರೆ ಶಬ್ದ ಸ್ವರೂಪವು
ಕೆಡದಂತೆ ಅಕ್ಷರಗಳನ್ನು ಆಯಾ ಕಾಲಪ್ರಮಾಣದಲ್ಲೇ ಉಚ್ಚರಿಸಬೇಕು; ಯತಿಸ್ಥಾನದಲ್ಲಿ
ಮಾತ್ರ ಕಾಲಾತಿಪಾತಕ್ಕೆ ಅವಕಾಶವಿರುವುದು ಹೊರತು ಅನ್ಯತ್ರ ವಿಲಂಬಿಸಬಾರದು.
ಇದನ್ನು ಭರತನು- 'ಕಲಾಕಾಲಪ್ರಮಾಣೇನಪಾಠ್ಯಂ ಕಾರ್ಯ೦ (೧೭-೧೪೧); ವಿಶ್ರಮೇನ್ನಾ
ವಿರಾಮೇಷು' (೧೭-೧೪೬) ಎಂದೂ ಸ್ಪಷ್ಟಪಡಿಸಿದ್ದಾನೆ.
ರಾಜಶೇಖರನೂ
ಪಂಚಾನಸಮುತ್ತಿತ ವರ್ಣೇಷು ಯಥಾಸ್ವರೂಪನಿಷ್ಪತ್ತಿ:|
ಅರ್ಥವಶೇನ ಚ ವಿರತಿಃ ಸರ್ವಸ್ವಮಿದಂ ಹಿ ಪಾಠಸ್ಯ ||