ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
31

ಗುಡಿಯಲ್ಲಿ ಸೇರಿ ಸಂಗಮನಾಥನ ಭಜನೆ-ಧ್ಯಾನ ಮುಗಿಸಿ, ಕೆಲ ಕಾಲ ಅಧ್ಯಯನ ಮಾಡಿ ವಿಶ್ರಮಿಸುವರು. ತಮಗೆ ಬೇಕಾದುದೇ ದೊರೆತುದರಿಂದ ಬಸವಣ್ಣನು ಆಶ್ರಮಜೀವನದಲ್ಲಿ ಕೂಡಲೇ ಸಮರಸ ಆದನು. ಆತನ ಉತ್ಕಟ ಭಕ್ತಿಭಾವವನ್ನು ಅರಿತು, ಗುರುಗಳು ಆತನಿಗೆ ಸಂಗಮನಾಥನ ನಿತ್ಯದ ಪೂಜೆಯನ್ನು ಒಪ್ಪಿಸಿದರು. ಅವನ ಲೆಕ್ಕ ನೈಪುಣ್ಯವನ್ನು ಕಂಡು ಆತನಿಗೆ ದೇವಸ್ಥಾನದ ಕೆಲಸದಲ್ಲಿ ತಮಗೆ ನೆರವಾಗಲು ಆಜ್ಞೆ ಕೊಟ್ಟರು. ಈ ರೀತಿ ಬಸವಣ್ಣನು ಕರಣಿಕ ಕಾರ್ಯದಲ್ಲಿಯೂ ತನ್ನ ಆರಾಧ್ಯದೇವನಾದ ಸಂಗಮನಾಥನ ಆರಾಧನೆ-ಧ್ಯಾನ-ಭಜನೆಗಳಲ್ಲಿಯೂ ತಲ್ಲೀನನಾದನು.

ಬಸವಣ್ಣನ ನಿತ್ಯದ ಕಾರ್ಯಕ್ರಮವನ್ನು ಹರಿಹರನು ಚೆನ್ನಾಗಿ ಚಿತ್ರಿಸಿರುವ. ಆತನು ಪ್ರಭಾತ ಸಮಯಕ್ಕೆ ಮುನ್ನ ಏಳುವ, ಸಂಗಂಗೆ ಸಾಷ್ಟಾಂಗ ಪೊಡಮಡುವ, ಭಯಭಕ್ತಿಯಿಂದ ಮುಂಡಾಡಿ ಪುಳಕಿಸುವ. ಅಗ್ಗವಣೆಯ ಕಂಬಿಯನ್ನು ತೆಗೆದುಕೊಂಡು ಹೂದೋಟಕ್ಕೆ ಹೋಗುವ ಅದನ್ನಲ್ಲಿರಿಸಿ, ಅಳಿಯೆರಗದ ಗಿಡ ಬಗೆಬಗೆಯ ಮೀಸಲು ಮೊಗ್ಗುಗಳನ್ನು ಕೊಂಡು, ತರುವಾಯ ನದಿಯಿಂದ ಸೋದಿಸಿದ ನೀರನ್ನು ತುಂಬಿಕೊಂಡು ಬರುವ. ಆನಂದದಿಂದ ಸಂಗನನ್ನು ಕೊಂಡಾಡುವ, ಮಜ್ಜನಕ್ಕೆರೆವ, ಸಿರಿಗಂಧಪುಷ್ಪಗಳಿಂದ ಆತನನ್ನು ಅಲಂಕರಿಸುವ. ನಯನಂಗಳೊಳು ಪೂಜೆ ಬರೆದಂತೆ ನೋಡುವ, ಭಯ ಭಕ್ತಿಯಿಂ ಪೂಜೆ ಮೆರೆವಂತೆ ಮಾಡುವ. ಧೂಪದೀಪಗಳನ್ನು ಬೆಳಗಿ, ನೈವೇದ್ಯ ತೋರಿಸುವ ಕೊನೆಗೆ ಮಂಗಳಾರತಿಯನ್ನು ಬೆಳಗಿ ಕೈಮುಗಿದು ರೋಮಾಂಚಿತನಾಗಿ ನಿಲ್ಲುವ

"ಎನ್ನ ನತಿ ಕರುಣದಿಂ ನೋಡು, ಕಣ್ಣಿನೊಳಗೆ ಪರಿದಾಡು
ಮನದೊಳಗೆ ಕುಣಿದಾಡು ಕೊಡಲಸಂಗ!"

ಎಂದು ಸಂಗನನ್ನು ಪ್ರಾರ್ಥಿಸುವ, ಭಕ್ತಿಭಾವವು ಅಂತರಂಗದಲ್ಲಿ ಬೆಳೆದು, ಮಣಿಯುವ, ಕುಣಿಯುವ, ಕೆಲೆಯುವ, ನಲಿಯುವ, ಶಿವಾನಂದರಸದ ಹೊನಲಲ್ಲಿ ಮುಳುಗುವ, ಆ ಘನಸುಖದಲ್ಲಿ ಬೆರೆಯುವ