ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

32

ಈ ಬಗೆಯಾಗಿ ಬಸವಣ್ಣನಲ್ಲಿಯ ಭಕ್ತಿಯು ಗಳಿಗೆಗಳಿಗೆಗೆ ದಿನದಿನಕ್ಕೆ ಮಿಗಿಲಾಗತೊಡಗಿತು. ಆತನು ನಡೆವಲ್ಲಿ ನುಡಿವಲ್ಲಿ, ಉಡುವಲ್ಲಿ ಉಂಬಲ್ಲಿ, ಕೊಡುವಲ್ಲಿ, ಕೊಂಬಲ್ಲಿ, 'ಸಂಗ ಶರಣು' ಎನ್ನುವ. 'ಸಂಗನಾಮಂಗಳಂ ಪುರಜನಕೆ ಕಲಿಸುತಂ ಶಿವಪೂಜೆಯೊಳಗೆ ಪುಟ್ಟಿದ ಸುಧಾಕರನಂತೆ' ಅವನಲ್ಲಿ ಇರುತ್ತಿದ್ದನು.

ಬಸವಣ್ಣನ ಅಂದಿನ ಜೀವನದ ಮಾದರಿಯೆ ಆತನ ಮುಂದಿನ ವಚನಗಳಲ್ಲಿ ಚಿತ್ರಿಸಲಾಗಿರುವದು:

ಹೊತ್ತಾರೆ ಎದ್ದು ಅಘವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ!
ಹೊತ್ತು ಹೋದ ಬಳಿಕ ನಿನ್ನನ್ನಾರು ಬಲ್ಲರು?
ಹೊತ್ತು ಹೋಗದ ಮುನ್ನ ಮೃತ್ಯುವೊಯ್ಯದ ಮುನ್ನ
ತೊತ್ತು ಗೆಲಸವ ಮಾಡು ಕೂಡಲಸಂಗಮದೇವನ! |
ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವದು
ಮಾಡಿದ ಪೂಜೆಯ ನೋಡುವದಯ್ಯಾ!
ಶಿವತತ್ವಗೀತವ ಪಾಡುವದು, ಶಿವನ ಮುಂದೆ ನಲಿದಾಡುವದಯ್ಯಾ!
ಭಕ್ತಿಸಂಭಾಷಣೆಯ ಮಾಡುವದು
ನಮ್ಮ ಕೂಡಲಸಂಗಯ್ಯನ ಕೂಡುವದು!

ಒಳಕಾಳಗ

ಆದರೆ ಬಸವಣ್ಣನ ಅಂತರಂಗದಲ್ಲಿಯ ಭಕ್ತಿಯು ಇಷ್ಟು ಸಹಜವಾಗಿ, ಸುಲಭವಾಗಿ ಬೆಳೆಯಲಿಲ್ಲ, ಅದರ ಫಲ ಆತನಿಗೆ ಇಷ್ಟು ಬೇಗ ಲಭಿಸಲಿಲ್ಲ, ಅದಕ್ಕಾಗಿ ಆತನ ಅಂತರಂಗವು ಭೀಕರ ಯುದ್ಧದ ರಣರಂಗವಾಗಬೇಕಾಯಿತು. ಸಂತ ತುಕಾರಾಮರು ಉಸುರಿದ ಮೇರೆಗೆ ಬಸವಣ್ಣನು,

ಹಗಲಿರುಳು ಒಳಹೊರಗೆ ಕಾಳಗವ ನಡೆಸಿದನು
ಒಳಗೆ ಮನ, ಹೊರಗೆ ಜನರೊಡನೆ ಹೋರಾಡಿದನು.