ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

52
ಸಿದ್ದರಸನ ನಿಧನದ ತರುವಾಯ ಆತನ ಹಿರಿಯ ಆಸ್ತಿಯೆಲ್ಲ ತನ್ನಿಂದ ತಾನೇ ಬಸವಣ್ಣನವರಿಗೆ ಲಭಿಸಿತು. ಬಿಜ್ಜಳರಾಯನೂ ಅದಕ್ಕೆ ಒಪ್ಪಿಕೊಂಡ. ಇಷ್ಟೇ ಅಲ್ಲ ಸಿದ್ಧರಸನು ಈವರೆಗೆ ವಹಿಸಿದ್ದ ದಂಡಾಧಿಪನ ಅಧಿಕಾರವನ್ನೂ ಆತನು ಬಸವಣ್ಣನವರಿಗೆ ಕೊಡಮಾಡಿದ. ಬಸವಣ್ಣನವರ ಬುದ್ಧಿವೈಭವವೂ ಶೀಲಸೌರಭವೂ ಶಾಸನ ಕೌಶಲದಕ್ಷತೆಗಳೂ ಈ ಮೊದಲೇ ರಾಯನ ಗೌರವವನ್ನು ಪಡೆದಿದ್ದವು. ಆತನ ಮನಸ್ಸನ್ನು ಸೆಳೆದಿದ್ದವು, ಮುಗ್ಧಗೊಳಿಸಿದ್ದವು. ಸಿದ್ಧರಸನ ತೆರವಾದ ಸ್ಥಾನವನ್ನು ಪಡೆಯಲು ಬೇರಾರೂ ಸಮರ್ಥರಿರಲಿಲ್ಲ. ಆದುದರಿಂದ ಬಸವಣ್ಣನವರೇ ಅದನ್ನು ಸಮರ್ಥ ರೀತಿಯಿಂದ ನಿರ್ವಹಿಸಬಲ್ಲರೆಂದು ಬಗೆದು ರಾಯನು ಬಸವಣ್ಣನವರನ್ನು ಕೇಳಿಕೊಂಡನು. ರಾಯನ ಈ ಕೊಡುಗೆಯನ್ನು ಅವರು ಸಂತೋಷದಿಂದ ಸ್ವೀಕರಿಸಿದರು ಮತ್ತು ಕೆಲವೇ ದಿನಗಳಲ್ಲಿ ಅವರು ಸಿದ್ಧರಸನ ಅಧಿಕಾರಸ್ಥಾನವನ್ನು ಪಡೆದು ದಂಡಾಧಿಪರೂ ಪ್ರಧಾನಮಂತ್ರಿಗಳೂ ಆದರು. ಬಸವಣ್ಣನವರ ಅಲೌಕಿಕ ಭಾಗ್ಯವು ಈ ಬಗೆಯಾಗಿ ಶಿಖರವನ್ನು ಮುಟ್ಟಿತು.
ದಂಡಾಧಿಪ :
ಪರಶಿವನ ಕರುಣದಿಂದ ನಡೆದ ಇನ್ನೊಂದು ಸಂಗತಿಯು ಈ ಶಿಖರಕ್ಕೆ ಕಳಸವನ್ನಿಟ್ಟಿತು. ಬಸವಣ್ಣನವರು ದಂಡಾಧಿಪನ ಹಾಗೂ ಪ್ರಧಾನಮಂತ್ರಿಗಳ ಕೆಲಸವನ್ನು ನಿರ್ವಹಿಸಲು ಪ್ರಾರಂಭಿಸಿದ ತರುವಾಯ ಕೆಲದಿನಗಳಲ್ಲಿಯೇ ಬಿಜ್ಜಳನ ಮನಸ್ಸಿನಲ್ಲಿ ಇನ್ನೊಂದು ಯೋಚನೆಯು ತಲೆದೋರಿತು. ಬಿಜ್ಜಳನಿಗೆ ನೀಲಲೋಚನೆಯೆಂಬ ಅತಿ ಸುಂದರಿಯಾದ ತಂಗಿಯಿದ್ದಳು. ಆಕೆಯನ್ನು ಈ ಪ್ರಭಾವಯುತ ಮಂತ್ರಿಗೆ ಕೊಟ್ಟು ಆತನ ಆಪ್ತಸಂಬಂಧವನ್ನು ಬೆಳೆಸಬೇಕು. ಅದರ ಫಲವಾಗಿ ಒಬ್ಬ ಸಮರ್ಥ ಬೆಂಬಲಿಗನನ್ನು ಪಡೆದು ತನ್ನ ಆಸನವನ್ನು ತುಂಬ ಭದ್ರಪಡಿಸಬೇಕು, ಎಂದು ಬಿಜ್ಜಳರಾಯನು ಯೋಚಿಸಿದನು. ಆದರೆ ಇದಾಗುವದೆಂತು?
೨೧. ದ.ಭ. ಪು. XXII ೧೩೫