56
ನೆಲೆಸಿರಲಿಲ್ಲ. 'ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚು' ಎಂದು
ಸರ್ವಜ್ಞನು ಅರುಹಿದಂತೆ ಅವರ ಜೀವನವು ತುಂಬ
ಸುಖಸಮಾಧಾನಗಳಿಂದ ನಡೆಯಿತು. ಬೆಳಗಿನಲ್ಲಿ ಬೇಗ ಎದ್ದು ತಮ್ಮ
ಇಷ್ಟಲಿಂಗವನ್ನು ಅರ್ತಿಯಿಂದ ಅರ್ಚಿಸಿ, ಧ್ಯಾನದಲ್ಲಿ ಕೆಲಸಮಯ
ಕಳೆದು, ಅಲ್ಪ ಉಪಾಹಾರವನ್ನು ತೀರಿಸಿಕೊಂಡು, ಬಸವಣ್ಣನವರು
ಪಲ್ಲಕ್ಕಿಯಲ್ಲಿ ಆಗಲಿ, ಕುದುರೆಯ ಮೇಲೆ ಆಗಲಿ ಕುಳಿತು, ಅರಮನೆಗೆ
ತೆರಳುವರು. ಅಲ್ಲಿ ರಾಜಕಾರ್ಯವನ್ನು ದಕ್ಷತೆಯಿಂದ ನಿರ್ವಹಿಸಿ
ಮಧ್ಯಾಹ್ನ ಮನೆಗೆ ಬಂದು ಅಂದಿನ ಅತಿಥಿಗಳೊಡನೆ ಭೋಜನ
ಮುಗಿಸುವರು. ಸ್ವಲ್ಪ ವಾಮಕುಕ್ಷಿ ಆದೊಡನೆ ಅರಮನೆಗೆ ತೆರಳಿ,
ಆಡಳಿತದ ಕೆಲಸ ಮುಗಿಸಿ ಸಾಯಂಕಾಲ ಮನೆಗೆ ಬರುವರು. ತರುವಾಯ
ಶಿವಪುರಾಣ, ಶಿವಭಜನೆ ಕೇಳುವರು. ಕೆಲಕಾಲ ಶರಣರ ಗೋಷ್ಠಿಯೂ
ನಡೆಯುವದು. ಆಗಾಗ ಭಾವಾವಿಷ್ಟರಾಗಿ ತಮ್ಮ ಅಂದಂದಿನ ಭಾವಗಳನ್ನು
ಅಂದವಾದ ವಚನಗಳಲ್ಲಿ ಅರುಹಿ, ಹಾಡಿ, ಶರಣರನ್ನು ಅವರು
ತಣಿಸುತ್ತಿದ್ದರು. ಆಮೇಲೆ ರಾತ್ರಿ ಭೋಜನ ಮತ್ತು ವಿಶ್ರಾಂತಿ,
ಸಾಮಾನ್ಯವಾಗಿ, ಬಸವಣ್ಣನವರು ಈ ಬಗೆಯ ದೈನಂದಿನ
ಕಾರ್ಯಕ್ರಮವನ್ನು ಅನುಸರಿಸುತ್ತಿದ್ದರು. ಅಂತೂ ಕುಟುಂಬದವರೊಡನೆ
ಸರಸಸಲ್ಲಾಪ, ಒಲವಿನ ಅತಿಥಿಸತ್ಕಾರ, ರಾಜ- ಪ್ರಜೆಗಳ
ಕಲ್ಯಾಣಕಾರ್ಯ, ಶರಣರೊಡನೆ ಅನುಭವಗೋಷ್ಠಿ ಸಂಗಮನಾಥನ
ಭಾವಪೂರ್ಣ ಆರಾಧನೆ ಧ್ಯಾನಗಳು, ಅದರ ಫಲವಾಗಿ ಲಭಿಸಿದ
ಪರಮಾನಂದಮಯ ನಿಚ್ಚ ಶಿವರಾತ್ರಿ ಇವುಗಳಲ್ಲಿ ಬಸವಣ್ಣನವರು ತಮ್ಮ
ಪಾವನ ಜೀವನವನ್ನು ಕಳೆಯುತ್ತಿದ್ದರು.
ಬಸವಣ್ಣನವರ ಗೃಹಸ್ಥಾಶ್ರಮವು ಸಂಯಮದಿಂದ ಕೂಡಿದುದು.
ಅವರು ತಮ್ಮ ಜೀವನದಲ್ಲಿ ಸತ್ಯ-ಪ್ರೇಮಗಳೊಡನೆ ಸಂಯಮವನ್ನು
ಚೆನ್ನಾಗಿ ಅಳವಡಿಸಿಕೊಂಡಿದ್ದರು. ನಿಜವಾಗಿ ವಿವಾಹಸಂಸ್ಥೆ ಬಂದುದೇ
ಸಂಯಮವನ್ನು ಕಲಿಸಲು, ಮಾನವನ ಸಹಜ ಸ್ವರ ಕಾಮವಾಸನೆಯನ್ನು
ನಿಯಂತ್ರಿಸಲು. ಮೊದಲು ಅದು ಏಕಪತ್ನಿ ವ್ರತವನ್ನು ಕಲಿಸುವದು.
'ಮಾತೃವತ್ ಪರದಾರಾಸು' 'ಪರನಾರಿಯರನ್ನು ತಾಯಿಯೆಂದು
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ